ಮಹಿಳೆಯಿಂದ ಪುರುಷ ಸಮಾನವಾದ ಸಾಧನೆ:ಎ.ಆರ್.ಅಶೋಕ್‌ ಅಭಿಮತ

KannadaprabhaNewsNetwork | Published : Mar 21, 2025 12:30 AM

ಸಾರಾಂಶ

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪುರುಷನಿಗೆ ಸರಿಸಮನಾಗಿ ಸಾಧನೆ ಮಾಡುತ್ತಿದ್ದಾರೆ ಎಂದು ಪುರಸಭಾ ಅಧ್ಯಕ್ಷ ಎ.ಆರ್.ಅಶೋಕ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪುರುಷನಿಗೆ ಸರಿಸಮನಾಗಿ ಸಾಧನೆ ಮಾಡುತ್ತಿದ್ದಾರೆ ಎಂದು ಪುರಸಭಾ ಅಧ್ಯಕ್ಷ ಎ.ಆರ್.ಅಶೋಕ್ ಹೇಳಿದರು.

ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ತಾಲೂಕು ಒಕ್ಕಲಿಗರ ಮಹಿಳಾ ಸಂಘದಿಂದ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ಇಡೀ ವರ್ಷಪೂರ್ತಿ ಸ್ತ್ರೀ ಪರ ಕಾರ್ಯಕ್ರಮಗಳನ್ನು ನಡೆಸಬೇಕು. ಸಮಾಜದಲ್ಲಿ ಮಹಿಳೆಗೆ ಪ್ರಮುಖ ಸ್ಥಾನ ನೀಡಲಾಗಿದೆ. ಮಹಿಳೆ ತಾಯಿ, ತಂಗಿ, ಅಕ್ಕ, ಸೊಸೆ, ಮಗಳು, ಅತ್ತೆ ಹೀಗೆ ವಿವಿಧ ಸ್ತರದಲ್ಲಿ ಗುರುತಿಸಿಕೊಂಡಿದ್ದಾಳೆ. ಇಂತಹ ಮಹಿಳೆಗೆ ಗೌರವ ನೀಡುವ ಕೆಲಸವಾಗಬೇಕು. ಈಗಾಗಲೇ ಸರ್ಕಾರ ಮಹಿಳೆಯರಿಗೆ ಗ್ರಾಮ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ಪುರಸಭೆಗಳಲ್ಲಿ ಸಮಾನ ಸ್ಥಾನಮಾನ ನೀಡಿದೆ. ಆದರೆ ಲೋಕಸಭಾ ಮತ್ತು ವಿಧಾನಸಭೆಯಲ್ಲಿ ಸಮಾನ ಮೀಸಲಾತಿ ನೀಡುವ ಕಡೆ ಗಮನ ನೀಡಬೇಕು ಎಂದರು.

ಬೇಲೂರು ಅಬಕಾರಿ ಇಲಾಖೆ ನಿರೀಕ್ಷಕರಾದ ಅಪೂರ್ವ ಅದಿತ್ಯ ಮಾತನಾಡಿ, ಮಹಿಳೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇಯಾದ ಛಾಪು ಮೂಡಿಸಿದ್ದಾಳೆ. ಇದಕ್ಕೆ ಪ್ರಮುಖ ಉದಾಹರಣೆ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಸತತ ಒಂಬತ್ತು ತಿಂಗಳು ಇದ್ದು ಅಂತರಿಕ್ಷದ ಬಗ್ಗೆ ಅಧ್ಯಯನ ಮಾಡಿ ಹಿಂತಿರುಗಿ ಬಂದಿದ್ದು, ಇಡೀ ವಿಶ್ವವೇ ತಮ್ಮತ್ತ ತಿರುಗಿ ನೋಡುವಂಥ ಸಾಧನೆ ಮಾಡಿದ್ದಾರೆ. ಜಗತ್ತಿನಲ್ಲಿ ಮಹಿಳೆ ಮತ್ತು ಪುರುಷರೆಂದು ಪರಿಗಣಿಸದೆ ಸಾಧನೆಗೆ ಮಾತ್ರ ಮೀಸಲಿಡಿ, ಮಹಿಳೆಯರಿಗೆ ಹೆಚ್ಚು ಅನಾರೋಗ್ಯ ಕಾಡುತ್ತಿದ್ದು, ಆರೋಗ್ಯದ ಕಡೆ ಗಮನ ನೀಡಿ, ಯೋಗ ಮತ್ತು ಆಹಾರದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದರು.

ತಾಲೂಕು ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ವೈ.ಆರ್.ಭಾರತೀಗೌಡ ಮಾತನಾಡಿ, ಮಹಿಳೆಯರು ಸ್ವಾವಲಂಬಿ ಬದುಕಿಗೆ ಸಂಘಟನೆ ಪ್ರಮುಖವಾಗಿದೆ. ಈ ಕಾರಣದಿಂದ ಮಹಿಳೆಯರನ್ನು ಒಂದು ಕಡೆ ಸೇರಿಸಿ ಅವರಿಗೆ ಅವಕಾಶ ಮತ್ತು ಪ್ರತಿಭೆಗಳಿಗೆ ಸೂಕ್ತ ವೇದಿಕೆ ನೀಡಲಾಗುತ್ತಿದೆ. ತಾಲೂಕು ಒಕ್ಕಲಿಗರ ಮಹಿಳಾ‌ ಸಂಘ ಈಗಾಗಲೇ ಏಳು ವರ್ಷದಿಂದ ಮಹಿಳಾ ದಿನಾಚರಣೆ ಅಂಗವಾಗಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಕ್ರಿಯಾಶೀಲತೆಯಿಂದ ಸದೃಢ ಆರೋಗ್ಯ ಪಡೆಯಬಹುದು ಎಂದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಗೈದ ಮಹಿಳೆಯರಿಗೆ ಗೌರವ, ಅಭಿನಂದನೆ ಸಲ್ಲಿಸಿದರು. ಉಳಿದಂತೆ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಬಿ.ಸಿ.ಜಗದೀಶ್, ಮಾಜಿ ಅಧ್ಯಕ್ಷೆ ಮುದ್ದಮ್ಮ, ಗೌರವಾದ್ಯಕ್ಷೆ ಶ್ರೀದೇವಿ ಮೊಗಣ್ಣಗೌಡ, ಕಾರ್ಯದರ್ಶಿ ಕವಿತಾ ಮಹೇಶ್, ಖಜಾಂಚಿ ಉಷಾ ಮಂಜುನಾಥ, ವೀಣಾ ಸುರೇಶ್ ಇನ್ನೂ ಮುಂತಾದವರು ಹಾಜರಿದ್ದರು.

Share this article