ಕನ್ನಡಪ್ರಭ ವಾರ್ತೆ ಕೆಜಿಎಫ್ ಮಹಿಳೆಯರು ಐಟಿ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಅಂತಹ ಸ್ಥಳಗಳಲ್ಲಿ ಮಹಿಳೆ ಮೇಲೆ ದೌರ್ಜನ್ಯಗಳನ್ನು ಖಂಡಿಸಿ ಕಾನೂನು ಹೋರಾಟ ಮಾಡುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ವಿನೋದ್‌ಕುಮಾರ್ ಹೇಳಿದರು.ನಗರದ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಕಂದಾಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿರ್ಮೂಲನೆಗಾಗಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟೀಯ ದೌರ್ಜನ್ಯ ತಡೆ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ದೌರ್ಜನ್ಯದ ವಿರುದ್ಧ ದನಿ ಎತ್ತಿಮಹಿಳೆಯರು ಹಲವು ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುವಾಗ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ದೌರ್ಜನ್ಯ ನಡೆಸುವವರ ವಿರುದ್ಧ ದ್ವನಿ ಎತ್ತುವ ಕೆಲಸ ಮಾಡಬೇಕು ಮತ್ತು ಕಾನೂನು ಬದ್ಧವಾಗಿ ಲಭ್ಯವಿರುವ ಕಾನೂನು ರಕ್ಷಣೆಗಳನ್ನು ಪಡೆಯಬೇಕು. ಈ ವಿಚಾರವಾಗಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಮಹಿಳೆಯರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಒಂದನೇ ಅಪರ ಸಿವಿಲ್ ನ್ಯಾಯಾಧೀಶೆ ಕೆ.ಶಮಿದ ಅವರು ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕೆಲವರು ಮಹಿಳೆಯರ ಬಳಿ ಅನುಚಿತವಾಗಿ ವರ್ತಿಸುವುದು, ದೌರ್ಜನ್ಯಗಳನ್ನು ಎಸಗುವುದು ಮಾಡುತ್ತಾರೆ. ಅಂತಹವರ ವಿರುದ್ಧ ಕಾನೂನು ರೀತಿ ದೂರು ನೀಡಬಹುದು. ಮಹಿಳೆಯರ ರಕ್ಷಣಗಾಗಿ ಇರುವ ಕಾನೂನುಗಳನ್ನು ಮಹಿಳೆಯರು ಉಪಯೋಗಪಡಿಸಿಕೊಳ್ಳಬೇಕು ಮತ್ತು ಧೈರ್ಯದಿಂದ ದೌರ್ಜನ್ಯ ಎದುರಿಸಬೇಕು ಎಂದರು.ಪೊಲೀಸ್ ಬೀಟ್ ನಿಯೋಜಿಸಿಮಹಿಳೆಯರ ಮೇಲೆ ದೌರ್ಜನ್ಯ ಆಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದೌರ್ಜನ್ಯವಾಗುವ ಮುನ್ನವೇ ಎಚ್ಚೆತ್ತುಕೊಂಡು ಸಂಬಂಧಪಟ್ಟವರಿಗೆ ದೂರು ಸಲ್ಲಿಸಬೇಕು. ಪೊಲೀಸರು ಸಹ ನಗರದಲ್ಲಿ ಹೆಚ್ಚು ಬೀಟ್ ಪೊಲೀಸರನ್ನು ನಿಯೋಜನೆ ಮಾಡಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಭರತ್, ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ, ಉಪಾಧ್ಯಕ್ಷ ಮಣಿವಣ್ಣನ್ ಹಾಗೂ ಇತರರು ಹಾಜರಿದ್ದರು.