ಗಂಭೀರ ಗಾಯಾಳುವನ್ನು ಸ್ಕೂಟಿಯಲ್ಲಿಆಸ್ಪತ್ರೆಗೆ ಸೇರಿಸಿದ ಮಹಿಳಾ ಪೊಲೀಸ್‌

KannadaprabhaNewsNetwork | Published : Oct 24, 2024 12:36 AM

ಸಾರಾಂಶ

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರು ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಾನ್‌ಸ್ಟೇಬಲ್‌ ಮನ್ಶಿದಾ ಬಾನು ಅವರ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ. ಜಾಲತಾಣದಲ್ಲೂ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುನಗರದ ಕೆಪಿಟಿ ಬಳಿ ಬುಧವಾರ ನಸುಕಿನ ಜಾವ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರನ್ನು ಮಹಿಳಾ ಕಾನ್ಸ್‌ಟೇಬಲ್ ತನ್ನ ಸ್ಕೂಟಿಯಲ್ಲೇ ಆಸ್ಪತ್ರೆಗೆ ದಾಖಲಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.

ಬೆಳಗ್ಗಿನ ಜಾವ 3.55ರ ವೇಳೆಗೆ ತನ್ನ ಮನೆಯಿಂದ ಕರ್ತವ್ಯಕ್ಕೆ ಹಾಜರಾಗಲು ದ್ವಿಚಕ್ರ ವಾಹನದಲ್ಲಿ ಮನ್ಶಿದಾ ಬಾನು ಠಾಣೆಗೆ ತೆರಳುತ್ತಿದ್ದರು. ಆಗ ಕೆಪಿಟಿ ಬಳಿ ಕೋಳಿ ಸಾಗಾಟ ಮಾಡುತ್ತಿದ್ದ ಕೇರಳ ನೋಂದಣಿಯ ಪಿಕಪ್‌ ವಾಹನ ರಸ್ತೆ ಬದಿ ನಿಂತಿದ್ದ ಕಂಟೈನರ್‌ಗೆ ಡಿಕ್ಕಿಯಾಗಿ ಅದರಲ್ಲಿದ್ದ ಕ್ಲೀನರ್‌ ಗಂಭೀರ ಗಾಯಗೊಂಡಿದ್ದರು. ಅವರ ಕೈ, ಕಾಲು, ತಲೆ, ತುಟಿ ಮೊದಲಾದ ಕಡೆಗೆ ಗಾಯವಾಗಿ ರಕ್ತಸ್ರಾವವಾಗುತ್ತಿತ್ತು. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಪಿಕಪ್‌ ಚಾಲಕ ರಸ್ತೆಯಲ್ಲಿ ಸಾಗುತ್ತಿದ್ದ ಹಲವು ವಾಹನದವರನ್ನು ನಿಲ್ಲಿಸಲು ಪ್ರಯತ್ನಿಸಿದರೂ, ಯಾರು ಕೂಡಾ ನಿಲ್ಲಿಸಿರಲಿಲ್ಲ. ರಸ್ತೆಯಲ್ಲಿ ಆಟೋ ಕೂಡಾ ಈ ಸಂದರ್ಭ ಬಂದಿರಲಿಲ್ಲ. ತಕ್ಷಣ ಸಮಯ ಪ್ರಜ್ಞೆ ಮೆರೆದ ಮನ್‌ಶಿದಾ ಬಾನು ಅವರು ತನ್ನ ಸ್ಕೂಟರ್‌ನ ಹಿಂಬದಿಯಲ್ಲಿ ಗಾಯಾಳುವನ್ನು ಕುಳ್ಳಿರಿಸಿಕೊಂಡು, ಒಂದು ಕೈಯ್ಯಲ್ಲಿ ಅವರನ್ನು ಹಿಡಿದುಕೊಂಡು, ಇನ್ನೊಂದು ಕೈಯ್ಯಲ್ಲಿ ಸ್ಕೂಟರ್‌ ಹ್ಯಾಂಡಲ್‌ ಹಿಡಿದುಕೊಂಡು ಎಜೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಅಲ್ಲಿ ತಲುಪಿದಾಗ ಗಾಯಾಳು ರಕ್ತಸ್ರಾವದಿಂದ ಪ್ರಜ್ಞೆ ಕಳೆದುಕೊಂಡಿದ್ದಾರೆ. ವೈದ್ಯರು ತಕ್ಷಣ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಬಳಿಕ ಅಲ್ಲಿಗೆ ಪಿಕಪ್‌ ಚಾಲಕ ಬಂದು ಮುಂದಿನ ಪ್ರಕ್ರಿಯೆ ನಡೆಸಿದ್ದಾರೆ. ಮನ್‌ಶಿದಾ ಬಾನು ಅವರು ಬಳಿಕ ಠಾಣೆಗೆ ಬಂದು ಕದ್ರಿ ಸಂಚಾರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ.

ಈ ವಿಚಾರವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರು ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಾನ್‌ಸ್ಟೇಬಲ್‌ ಮನ್ಶಿದಾ ಬಾನು ಅವರ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ. ಜಾಲತಾಣದಲ್ಲೂ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Share this article