ಮಹಿಳೆಯ ಸಾಧನೆ ಪುರುಷರಿಗೂ ಸ್ಫೂರ್ತಿದಾಯಕವಾಗಿದೆ: ರವಿಶಂಕರ್‌

KannadaprabhaNewsNetwork |  
Published : Jul 04, 2026, 01:15 AM IST
29 | Kannada Prabha

ಸಾರಾಂಶ

ಮಹಿಳೆಯಾಗಿ ಜಮ್ಮಡ ಪ್ರೀತ್‌ಅಪ್ಪಯ್ಯರ ಉತ್ಸಾಹ, ಆಶಯ ನೋಡಿದರೆ ಪುರುಷರಿಗೂ ಮಾದರಿಯಾಗಿದ್ದಾರೆ. ಬಾಸ್ಕೆಟ್ ಬಾಲ್ ಆಟಗಾರ್ತಿ ಅರುಣ್ ಸಿನ್ಹಾ ಎರಡು ಕಾಲು ಕಳೆದುಕೊಂಡ ಬಳಿಕವೂ ಎರಡು ವರ್ಷದ ಅವಧಿಯಲ್ಲೇ ಮೌಂಟ್ ಎವರೆಸ್ಟ್ ಏರಿ ಸಾಧನೆ ತೋರಿದರು. ಅಂತೆಯೇ ಇವರ ಸಾಧನೆ ಸಾಮಾನ್ಯವಾದುದಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಓರ್ವ ಮಹಿಳೆಯಾಗಿ ನಿಮ್ಮ ಸಾಧನೆ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಲಕ್ಷ್ಮಿಪುರಂ ಪೊಲೀಸ್ ಠಾಣೆಯ ಇನ್‌ ಸ್ಪೆಕ್ಟರ್‌ ರವಿಶಂಕರ್ ಹೇಳಿದರು.

ಕೆಎಂಪಿಕೆ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ನಗರದ ಚಾಮುಂಡಿಪುರಂನಲ್ಲಿ ಆಯೋಜಿಸಿದ್ದ ಬೆಂಗಳೂರು ವಿಶ್ವ ವಿದ್ಯಾನಿಲಯದ ಶೂಟಿಂಗ್‌ ರೆಂಜ್‌ನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಕಾರದೊಂದಿಗೆ ಕರ್ನಾಟಕ ರಾಜ್ಯ ರೈಫೆಲ್‌ ಅಸೋಸಿಯೇಷನ್‌ (ಕೆಎಸ್‌ಆರ್‌ಎ) ವತಿಯಿಂದ ನಡೆದ 14ನೇ ರಾಜ್ಯ ಶೂಟಿಂಗ್‌ಸ್ಪರ್ಧೆ ಮತ್ತು ಚಾಂಪಿಯನ್‌ಶಿಪ್‌2026ರಲ್ಲಿ ಎರಡು ಚಿನ್ನದ ಪದಕಗಳಿಸಿದ ಮೈಸೂರಿನವರಾದ ಜಮ್ಮಡ ಪ್ರೀತ್‌ಅಪ್ಪಯ್ಯ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಮಹಿಳೆಯಾಗಿ ಜಮ್ಮಡ ಪ್ರೀತ್‌ಅಪ್ಪಯ್ಯರ ಉತ್ಸಾಹ, ಆಶಯ ನೋಡಿದರೆ ಪುರುಷರಿಗೂ ಮಾದರಿಯಾಗಿದ್ದಾರೆ. ಬಾಸ್ಕೆಟ್ ಬಾಲ್ ಆಟಗಾರ್ತಿ ಅರುಣ್ ಸಿನ್ಹಾ ಎರಡು ಕಾಲು ಕಳೆದುಕೊಂಡ ಬಳಿಕವೂ ಎರಡು ವರ್ಷದ ಅವಧಿಯಲ್ಲೇ ಮೌಂಟ್ ಎವರೆಸ್ಟ್ ಏರಿ ಸಾಧನೆ ತೋರಿದರು. ಅಂತೆಯೇ ಇವರ ಸಾಧನೆ ಸಾಮಾನ್ಯವಾದುದಲ್ಲ. ತುಂಬಾ ಉದ್ಧಾತವಾದ ಸಂಕಲ್ಪವನ್ನು ಹೊಂದಿ ಕ್ರೀಡೆಯಲ್ಲಿ ಮುನ್ನಡೆಯುತ್ತಿದ್ದು, ಹುಟ್ಟು ಯೋಧರ ನಾಡಿನಿಂದ ಬಂದು ಇಂತಹ ಸಾಧನೆ ಮೆಚ್ಚುವಂತಹದಾಗಿದೆ ಎಂದರು.

ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಮಾತನಾಡಿ, ಕೊಡಗು ಎಂದರೆ ನಮ್ಮೆಲ್ಲರಿಗೂ ಅಚ್ಚುಮೆಚ್ಚು ಅಂತಹ ಕಡೆಯಿಂದ ಬಂದು ನಗರದಲ್ಲಿ ನೆಲೆಸಿ ನೀವು ಮಾಡಿರುವ ಸಾಧನೆ ನಿಜಕ್ಕೂ ಮೈಸೂರಿಗೆ ಹೆಮ್ಮೆಯ ಸಂಗತಿ ಹಾಗೂ ಸಂತಸದ ವಿಚಾರವಾಗಿದೆ. ನಿಮ್ಮ ಕ್ರೀಡಾಸ್ಪೂರ್ತಿ ಇತರ ಎಲ್ಲರಿಗೂ ಸ್ಪೂರ್ತಿದಾಯಕ ಆಗಲಿ ಎಂದರು. ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ಡಾ.ಕೆ.ಬಿ. ಲಿಂಗರಾಜು ಮಾತನಾಡಿ, ನಿಮ್ಮ ಕ್ರೀಡಾ ಸಾಧನೆ ನಿಜಕ್ಕೂ ಗಮನಾರ್ಹ. ನಿಮಗೆ ಬೆಂಬಲ ನೀಡಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇವರ ಬೆಂಬಲಕ್ಕೆ ಸದಾ ನಾವೆಲ್ಲರೂ ಇರುತ್ತೇವೆ. ಇಂತಹ ಅಭಿನಂದನೆಗಳು ನಡೆದಾಗ ಮಾತ್ರ ನಿಮ್ಮ ಸಾಧನೆಗೆ ಸ್ಪೂರ್ತಿಯಾಗಲಿದೆ ಎಂದರು.

ಸನ್ಮಾನ ಸ್ವೀಕರಿಸಿದ ಕ್ರೀಡಾಪಟು ಜಮ್ಮಡ ಪ್ರೀತ್‌ಅಪ್ಪಯ್ಯ ಮಾತನಾಡಿ, ಮೂಲತಃ ಕೊಡಗಿನವಳಾಗಿದ್ದ ಕಾರಣದಿಂದ ಚಿಕ್ಕ ವಯಸ್ಸಿನಿಂದಲೇ ಬೆಟ್ಟ, ಗುಡ್ಡಾ ಹತ್ತುವುದು ಸಹಜವಾಗಿ ಬಂದಿತು. ಅದೇ ಕಾರಣಕ್ಕೆ ರಾಜ್ಯದ ಹಲವೆಡೆ ಚಾರಣ ಮಾಡಿದ್ದೇನೆ. ಹಿಮಾಲಯ ಹತ್ತುವುದನ್ನು ಸವಾಲಾಗಿ ಸ್ವೀಕರಿಸಿ ಏರಿದ್ದೇನೆ. ಶೂಟಿಂಗ್‌ಎಂಬುದನ್ನು ಹವ್ಯಾಸವಾಗಿ ಶುರು ಮಾಡಿದ್ದು, ಈಗ ಹೆಚ್ಚು ಸಾಧನೆಗೆ ತಂದು ನಿಲ್ಲಿಸಿದೆ. ಮುಂದೆ ಪಿಸ್ತೂಲು ತರಬೇತಿ ಪಡೆದು ಅಲ್ಲಿಯೂ ಸಾಧನೆ ಮಾಡುವ ಆಸೆಯಿದೆ. ಪ್ರಾರಂಭದಲ್ಲಿ ಅನೇಕರು ನನಗೆ ಈ ವಯಸ್ಸಿನಲ್ಲಿ ಬೇಕಾ ಎಂದು ಹಿಯಾಳಿಸಿದ್ದು ನೆನಪಿದೆ. ಆದರೆ, ಸಾಧನೆ, ಹವ್ಯಾಸಗಳಿಗೆ ವಯಸ್ಸು ಅಡ್ಡ ತರಬಾರದು. ಅದನ್ನು ಮೀರಿ ಪ್ರಯತ್ನಿಸಿದ್ದೇ ಸಾಧನೆಗೆ ಕಾರಣ ಎಂದು ಸಂತಸ ಹಂಚಿಕೊಂಡರು.

ಕೆಪಿಎಂಪಿಕೆ ಚಾರಿಟಬಲ್‌ ಟ್ರಸ್ಟ್‌ಅಧ್ಯಕ್ಷ ವಿಕ್ರಂ ಅಯ್ಯಂಗಾರ್‌, ಕೆ.ಆರ್. ಬ್ಯಾಂಕ್ ಅಧ್ಯಕ್ಷ ಬಸಪ್ಪ, ಅಜಯ್ ಶಾಸ್ತ್ರಿ, ಗಗನ್ ಗೌಡ, ಶ್ರೀಕಾಂತ್ ಕಶ್ಯಪ್, ಎಸ್.ಎನ್. ರಾಜೇಶ್, ಚಕ್ರಪಾಣಿ, ಸುರೇಂದ್ರ, ರಾಕೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಸಿರಾಟ ಸಮಸ್ಯೆಯಲ್ಲಿದ್ದ ಮಹಿಳೆ ರಕ್ಷಣೆ
ಪರಿಸರ ಸ್ವಚ್ಛಗೊಳಿಸಿ, ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ: ಶ್ರೀ ಮುರುಘೇಂದ್ರ ಶಿವಾಚಾರ್ಯ ಸ್ವಾಮೀಜಿ