ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದರೂ ಸಕ್ರಿಯವಾಗಿ ರಾಜಕಾರಣದಲ್ಲಿ ಇರುತ್ತೇನೆ ಎಂದಿದ್ದಾರೆ. ಹೀಗಾಗಿ ಸ್ಪರ್ಧೆ ಕುರಿತ ಅವರ ಹೇಳಿಕೆ ಅಂತಿಮವಲ್ಲ. ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಇಚ್ಚಾಶಕ್ತಿ, ಒತ್ತಡದಿಂದಾಗಿ ಸ್ಪರ್ಧೆ ಮಾಡುವ ಸಂದರ್ಭ ಬರಬಹುದು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಅಂತಿಮವಲ್ಲ. ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಒತ್ತಡ ಹಾಕಿದರೆ ಅನಿವಾರ್ಯವಾಗಿ ಸ್ಪರ್ಧಿಸಬೇಕಾಗುತ್ತದೆ ಶಾಸಕ ಕೆ.ಎಂ.ಉದಯ್ ಹೇಳಿದರು.
ಸಮೀಪದ ಕಾರ್ಕಹಳ್ಳಿ- ಬೊಪ್ಪಸಮುದ್ರ ಗ್ರಾಮಗಳಲ್ಲಿ 50 ಲಕ್ಷ ರು. ವೆಚ್ಚದ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ರಸ್ತೆ ಹಾಗೂ ಸಿ.ಸಿ.ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದರೂ ಸಕ್ರಿಯವಾಗಿ ರಾಜಕಾರಣದಲ್ಲಿ ಇರುತ್ತೇನೆ ಎಂದಿದ್ದಾರೆ. ಹೀಗಾಗಿ ಸ್ಪರ್ಧೆ ಕುರಿತ ಅವರ ಹೇಳಿಕೆ ಅಂತಿಮವಲ್ಲ. ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಇಚ್ಚಾಶಕ್ತಿ, ಒತ್ತಡದಿಂದಾಗಿ ಸ್ಪರ್ಧೆ ಮಾಡುವ ಸಂದರ್ಭ ಬರಬಹುದು ಎಂದರು.
ಕೆಪಿಎಸ್ಸಿ ವೈದ್ಯಕೀಯ ನೇಮಕಾತಿಯಲ್ಲಿ ಯಾವ ಹಗರಣವು ನಡೆದಿಲ್ಲ. ವಿರೋಧ ಪಕ್ಷಗಳು ಸುಮ್ಮನೇ ಆರೋಪ ಮಾಡುತ್ತಿದ್ದಾರೆ. ಅವರಿಗೆ ಆರೋಪ ಮಾಡುವುದನ್ನು ಬಿಟ್ಟರೇ ಇನ್ನೆನು ಕೆಲಸವಿಲ್ಲ ಎಂದು ಟೀಕಿಸಿದರು.
ಸಂಪುಟ ವಿಸ್ತರಣೆ ವಿಚಾರವಾಗಿ ಈಗಾಗಲೇ ವರಿಷ್ಠರು ಈಗಾಗಲೇ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯನ್ನು ಪರಿಶೀಲಿಸುತ್ತಿದ್ದಾರೆ. ಇಂದು ರಾತ್ರಿ ಸಚಿವರ ಪಟ್ಟಿ ಅಂತಿಮವಾಗಲಿದೆ. ನಾಳೆ ಅಥವಾ ನಾಳಿದ್ದು ಪಟ್ಟಿ ಬಿಡುಗಡೆಯಾಗಿ ನಂತರ ನೂತನ ಸಚಿವರಾಗಿ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಧಿಕಾರ ಹಂಚಿಕೆ ಸೂತ್ರದಂತೆ ಶಿವಪ್ಪ ರಾಜೀನಾಮೆ:
ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದ ಶಿವಕುಮಾರ್ (ಶಿವಪ್ಪ) ಈ ಹಿಂದೆ ಆಗಿದ್ದ ಅಧಿಕಾರ ಹಂಚಿಕೆ ಒಪ್ಪಂದದಂತೆ ತಮ್ಮ ಅಧಿಕಾರದ ಅವಧಿ ಮುಗಿದ ಕೂಡಲೇ ರಾಜೀನಾಮೆ ನೀಡಿದ್ದಾರೆ. ಮುಂದಿನ ಅವಧಿಗೆ ಮನ್ಮುಲ್ ನಿರ್ದೇಶಕ ಹರೀಶ್ ಬಾಬು ಅವರಿಗೆ ಅಧ್ಯಕ್ಷಗಿರಿ ದೊರೆಯಲಿದೆ ಎಂದರು.
ಮದ್ದೂರು ತಾಲೂಕಿನವರಾದ ಹರೀಶ್ ಬಾಬು ಅವರಿಗೆ ಅಧ್ಯಕ್ಷಗಿರಿ ನೀಡಲು ಮೊದಲೇ ಮಾತುಕತೆ ನಡೆದಿತ್ತು. ಅದರಂತೆ ನಡೆದುಕೊಳ್ಳುತ್ತಾರೆ. ಮನ್ಮುಲ್ ಚುನಾವಣೆ ನಡೆಯುವುದಿಲ್ಲ. ಚುನಾವಣೆ ಪ್ರಕ್ರಿಯೆ ನಡೆದು ಹರೀಶ್ ಬಾಬು ಅವಿರೋಧವಾಗಿ ಆಯ್ಕೆಯಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಮುಖಂಡರಾದ ಸಚ್ಚಿನ್, ಚಿದಂಬರ ಮೂರ್ತಿ, ಪ್ರಜಾಪ್ರೀಯ ವೆಂಕಟೇಶ್, ಅಮೀನ್ ಶಿವಲಿಂಗಯ್ಯ, ಸಂತೋಷ್, ಅಶ್ವಥ ಸೇರಿದಂತೆ ಹಲವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.