ಸಾಗರ: ಬಯಲು ಕುಸ್ತಿ ಪಂದ್ಯಾವಳಿಗಳು ಜಾತ್ರೆ, ಉತ್ಸವಗಳಿಗೆ ಮಾತ್ರ ಸೀಮಿತವಾಗುತ್ತಿರುವುದು ಖೇದದ ಸಂಗತಿ ಎಂದು ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ ಹೇಳಿದರು.
ಸಾಗರದಲ್ಲಿ ಗಾಂಧಿನಗರ ಯುವಜನ ಸಂಘ ಪ್ರತಿವರ್ಷ ನಡೆಸುವ ದಸರಾ ಕುಸ್ತಿ ಹಾಗೂ ಮಾರಿಕಾಂಬಾ ಸಮಿತಿ ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಸಂದರ್ಭದಲ್ಲಿ ಆಯೋಜಿಸುವ ಕುಸ್ತಿಗೆ ಹೆಚ್ಚಿನ ಪೈಲ್ವಾನರು ಪಾಲ್ಗೊಳ್ಳುತ್ತಿರುವುದು ಮಲೆನಾಡು ಭಾಗದಲ್ಲಿ ಕುಸ್ತಿ ಕಲೆ ಉಳಿದುಕೊಂಡು ಬರಲು ಕಾರಣವಾಗಿದೆ ಎಂದು ಹೇಳಿದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರ ರಾವ್ ಮಾತನಾಡಿ, ಮೂರು ದಿನಗಳ ಕುಸ್ತಿ ಪಂದ್ಯಾವಳಿಗೆ ರಾಜ್ಯ ಮತ್ತು ಹೊರರಾಜ್ಯದ ಅನೇಕ ಕುಸ್ತಿಪಟುಗಳು ಆಗಮಿಸಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕುಸ್ತಿ ಕಲೆ ಉಳಿಸಿ ಬೆಳೆಸಲು ಇಂತಹ ಪಂದ್ಯಾವಳಿಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.ಉಪಾಧ್ಯಕ್ಷ ಸುಂದರ ಸಿಂಗ್, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ಕೋಶಾಧ್ಯಕ್ಷ ನಾಗೇಂದ್ರ ಕುಮಟಾ, ಸಂಚಾಲಕರಾದ ಪುರುಷೋತ್ತಮ, ಅಶೋಕ್, ಎಂ.ಎಸ್.ಶಶಿಕಾಂತ್, ಸಂತೋಷ್ ಸದ್ಗುರು, ಕೆಂಚಪ್ಪ, ರಮೇಶ್ ಟಿ.ಪಿ. ಇನ್ನಿತರರು ಹಾಜರಿದ್ದರು.