ಧಾರವಾಡ: ಕಳೆದ 9 ದಿನಗಳಿಂದ ಇಲ್ಲಿಯ ಯಾದವಾಡ ಗ್ರಾಮದಲ್ಲಿ ನಡೆದ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವ ಶುಕ್ರವಾರ ಅದ್ಧೂರಿಯಾಗಿ ಸಂಪನ್ನಗೊಂಡಿತು.
ನಿತ್ಯವೂ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಹೊತ್ತು ಸಾವಿರಾರು ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸುತ್ತೂರಿನ ಜನರು ಆಗಮಿಸಿ ದೇವಿಪುರಾಣ, ಪ್ರವಚನ ಕೇಳಿ, ಪ್ರಸಾದ ಸ್ವೀಕರಿಸಿದರು. 8ನೇ ದಿನವಂತೂ ಮಧ್ಯಾಹ್ನ 10 ಸಾವಿರ ಜನರಿಗೆ ಹೋಳಿಗೆ- ಸೀಕರಿಣೆ ಮೂಲಕ ಭರ್ಜರಿ ಊಟದ ವ್ಯವಸ್ಥೆ ಇತ್ತು. ಸಂಜೆ ದೇವಿಯರು ಸೀಮೆಗೆ ಹೋದರು. ಕೊನೆ ದಿನ ಚಂಡಿಕಾ ಹೋಮದಲ್ಲಿ ದುಷ್ಟರ ಸಂಹಾರಕ್ಕಾಗಿ ಒಣ ಮೆಣಸಿನಕಾಯಿ ಹಾಕಲಾಯಿತು. 9 ಮಕ್ಕಳಿಗೆ ನವದುರ್ಗೆಯರ ವೇಷ ಹಾಕಿ ಉಡಿ ತುಂಬುವ ಕಾರ್ಯಕ್ರಮ ಅದ್ಭುತವಾಗಿತ್ತು.
9 ದಿನಗಳಲ್ಲಿ ಗಣ್ಯರು ಆಗಮಿಸಿ ದೇವಿ ಕೃಪೆಗೆ ಪಾತ್ರರಾದರು. ಇನ್ನು, ಜಾತ್ರೆಯ 8ನೇ ದಿನ ಜಿಲ್ಲಾಧಿಕಾರಿ ದಿವ್ಯಪ್ರಭು ಆಗಮಿಸಿ ದೇವಿಗೆ ಉಡಿತುಂಬಿ ಗ್ರಾಮದ ಜನರನ್ನು ಉದ್ದೇಶಿಸಿ ಮಾತನಾಡಿದರು. ದೇವತೆಯ ಪೂಜೆ ಮಾಡಲು ಸಾಕಷ್ಟು ಉತ್ತಮ ಕಾರಣಗಳಿವೆ. ಇಡೀ ಊರಿಗೆ ಒಳ್ಳೆಯದಾಗಲಿ, ಉತ್ತಮ ಮಳೆ-ಬೆಳೆ ಆಗಲಿ ಹಾಗೂ ಉತ್ತಮ ಆರೋಗ್ಯ, ಜೀವನ ನಡೆಸಲು ಅಲ್ಲದೇ ಪ್ರವಚನ, ದೇವಿ ಪುರಾಣದ ಮೂಲಕ ಜ್ಞಾನ, ಶಿಕ್ಷಣ ಪಡೆಯುವುದು ಸಹ ಜಾತ್ರೆಗಳ ಉದ್ದೇಶ. ಪ್ರತಿಯೊಬ್ಬರೂ ಸ್ವಾರ್ಥಕ್ಕಾಗಿ ಜೀವನ ಮಾಡದೇ ಸಮಾಜಕ್ಕೆ ಮುಡಿಪಿಡಬೇಕು. ಶ್ರೀಮಂತಿಕೆಗೆ ದೇವಿ ಕೃಪೆ ಸಿಗುವುದಿಲ್ಲ. ಮಾಡಿದ ಸಂಪಾದನೆಯನ್ನು ಬೇರೆಯವರೊಂದಿಗೆ ಹಂಚುವುದು, ಧಾರ್ಮಿಕ ಕಾರ್ಯಕ್ರಮಗಳಿಂದ ದೇವಿ ಆಶೀರ್ವಾದ ದೊರೆಯಲಿದೆ. ಇಂತಹ ಕಾರ್ಯವನ್ನು ಯಾದವಾಡ ಗ್ರಾಮಸ್ಥರು ಅಚ್ಚುಕಟ್ಟಾಗಿ ಮಾಡಿದ್ದಾರೆ. 9 ದಿನಗಳ ಕಾಲ ಪ್ರವಚನ, ದೇವಿ ಪುರಾಣ, ಸಂಗೀತ, ಧಾರ್ಮಿಕ ವಿಧಿ ವಿಧಾನಗಳ ಮೂಲಕ ಗ್ರಾಮಸ್ಥರು ಜ್ಞಾನ ಪಡೆದಿದ್ದಾರೆ. ಗ್ರಾಮಸ್ಥರು ಒಗ್ಗಟ್ಟಾಗಿ ಯಶಸ್ವಿಯಾಗಿ ಜಾತ್ರೆ ಮಾಡಿದ್ದು ಉಳಿದವರಿಗೆ ಮಾದರಿ ಎಂದರು.9 ದಿನಗಳ ಕಾಲ ಗ್ರಾಮದ ಹಿರಿಯರು ಹಾಗೂ ಜಾತ್ರೆಯಲ್ಲಿ ಸೇವೆ ಮಾಡಿದವರಿಗೆ ಕೊನೆ ದಿನ ಶನಿವಾರ ಮುಖ್ಯ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ನಿತ್ಯ ಒಂದೊಂದು ವಾರ್ಡ್‌ನ ಜನರು ಸೇವೆ ಮೂಲಕ ಅಡುಗೆ ಮಾಡುವುದು, ಬಡಿಸುವುದು ಹಾಗೂ ಎಲ್ಲ ರೀತಿಯ ಜಾತ್ರಾ ಕಾರ್ಯಕ್ರಮದಲ್ಲಿ ಒಗ್ಗಟ್ಟಾಗಿ ಭಾಗವಹಿಸಿದ್ದು ಯಾದವಾಡ ಜಾತ್ರೆ ವಿಶೇಷ ಎನ್ನಬಹುದು.