ಭಾರತ ಸರ್ಕಾರದ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಜಿಲ್ಲಾ ಹಾಗೂ ತಾಲೂಕು ಯುವ ಒಕ್ಕೂಟ, ಮಡಿಕೇರಿ ಸ್ಪೂರ್ತಿ ಯುವ ಸಂಘ ಸಹಯೋಗದಲ್ಲಿ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ‘ಜಿಲ್ಲಾ ಮಟ್ಟದ ನೆರೆಹೊರೆಯ ಯುವ ಸಂಸತ್ತು’ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ ಸುಸ್ಥಿರ ಅಭಿವೃದ್ಧಿಗೆ ಯುವ ಜನರ ಪಾತ್ರ ಪ್ರಮುಖವಾದುದು. ಆ ನಿಟ್ಟಿನಲ್ಲಿ ಯುವಜನರು ನಾಯಕತ್ವ ಗುಣ ಬೆಳೆಸಿಕೊಳ್ಳುವಂತಾಗಬೇಕು. ಇದರಿಂದ ಪರಿಣಾಮಕಾರಿ ವ್ಯಕ್ತಿತ್ವ ರೂಪಿಸಿಕೊಳ್ಳಬಹುದಾಗಿದೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಪ್ರೊ.ಮೇ.ರಾಘವ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಸರ್ಕಾರದ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್‌ಎಸ್‌ಎಸ್ ಘಟಕ, ಜಿಲ್ಲಾ ಹಾಗೂ ತಾಲೂಕು ಯುವ ಒಕ್ಕೂಟ, ಮಡಿಕೇರಿ ಸ್ಪೂರ್ತಿ ಯುವ ಸಂಘ ಸಹಯೋಗದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ‘ಜಿಲ್ಲಾ ಮಟ್ಟದ ನೆರೆಹೊರೆಯ ಯುವ ಸಂಸತ್ತು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯುವ ಜನರು ಭವಿಷ್ಯದ ಪ್ರಜೆಗಳು, ಜೊತೆಗೆ ಸೈನಿಕರಂತೆ ರಾಷ್ಟçದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಸಾಮಾಜಿಕ ಪರಿವರ್ತನೆಯಲ್ಲಿ ಯುವಜನರ ಪಾತ್ರ ಮಹತ್ತರವಾಗಿದೆ. ಆ ನಿಟ್ಟಿನಲ್ಲಿ ಸಮಾಜದ ಅಭಿವೃದ್ಧಿ ಮತ್ತು ಬದಲಾವಣೆಯಲ್ಲಿ ಯುವಜನರು ತಮ್ಮದೇ ಆದ ಪಾತ್ರ ವಹಿಸುತ್ತಾರೆ ಎಂದು ಪ್ರೊ.ರಾಘವ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ದಯಾನಂದ ಅವರು ಮಹಿಳಾ ಸಬಲೀಕರಣ ಕುರಿತು ಮಾತನಾಡಿ, ರಾಜ್ಯ ಸರ್ಕಾರ ಶಕ್ತಿ, ಗೃಹಲಕ್ಷ್ಮೀ, ಕೇಂದ್ರ ಸರ್ಕಾರವು ನಾರಿಶಕ್ತಿ ಸ್ವ ಆಧಾರ್, ಒನ್ ಸ್ಟಾಪ್ ಸೆಂಟರ್ ಹೀಗೆ ಮಹಿಳೆಯರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ ಎಂದು ತಿಳಿಸಿದರು.
ಹೆಣ್ಣು ಮತ್ತು ಗಂಡು ಇಬ್ಬರು ಸಮಾನರು, ಸಂಸಾರದ ರಥ ಚಲಿಸಲು ಸ್ತ್ರೀ ಮತ್ತು ಪುರುಷ ಇಬ್ಬರೂ ಅಗತ್ಯ. ಆ ನಿಟ್ಟಿನಲ್ಲಿ ಹೆಣ್ಣಿಲ್ಲದೆ ಜೀವನವಿಲ್ಲ, ಹೆಣ್ಣಿನಿಂದಲೇ ಬಾಳು ಬಂಗಾರ, ಹೆಣ್ಣಿಲ್ಲದ ಬದುಕು ಊಹಿಸಲು ಅಸಾಧ್ಯ. ಹೆಣ್ಣನ್ನು ರಕ್ಷಿಸುವುದು ಮತ್ತು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಭ್ರೂಣಹತ್ಯೆ ನಿಷೇಧ, ಮಹಿಳಾ ಸಹಾಯವಾಣಿ. ಆಶ್ರಯ ಆಧಾರ, ಸುಕನ್ಯಾ ಸಮೃದ್ಧಿ, ನಾರಿಶಕ್ತಿ ಪುರಸ್ಕಾರ ಮತ್ತಿತರ ಜಾರಿಗೊಳಿಸಿದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಟಿ.ವಿಸ್ಮಯಿ ಮಾತನಾಡಿ, ರಾಷ್ಟ್ರದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಯುವಜನರು ರಾಷ್ಟ್ರದಲ್ಲಿ ತಮ್ಮದೇ ಆದ ಪಾತ್ರ ವಹಿಸುತ್ತಾರೆ ಎಂದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಗಣಕಯಂತ್ರ ವಿಭಾಗದ ಉಪನ್ಯಾಸಕ ಡಿ.ಎಸ್.ಮಾನಸ ಅವರು ‘ನನ್ನ ಭಾರತ’ ವಿಷಯ ಕುರಿತು ಮಾತನಾಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಪ್ರಸನ್ನ ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎವರೆಸ್ಟ್ ರಾಡ್ರಿಗಸ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಪಿ.ಪಿ.ಸುಕುಮಾರ್, ತಾಲೂಕು ಯುವ ಘಟಕದ ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್ ಮತ್ತಿರರು ಇದ್ದರು. ತ್ರಿವೇಣಿ ಹಾಗೂ ದೀಪ್ತಿ ಅವರು ಪ್ರಾರ್ಥಿಸಿದರು. ರಿಷಿತಾ ಸ್ವಾಗತ ನೃತ್ಯ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.