ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಕೊಟ್ಟು ₹19 ಸಾವಿರ ಕೋಟಿ ಸಾಲ ಪಡೆದು ಟನಲ್ ರಸ್ತೆ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಪ್ರಾಯೋಗಿಕವಾಗಿ ಉತ್ತರ- ದಕ್ಷಿಣ ಕಾರಿಡಾರ್ ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಹೊಸೂರು ರಸ್ತೆಯ ಸಿಲ್ಕ್‌ಬೋರ್ಡ್‌ನ ಕೆಎಸ್‌ಆರ್‌ಪಿ ಜಂಕ್ಷನ್ ವರೆಗೆ 18.5 ಕಿ.ಮೀ ಉದ್ದದ ಟನಲ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಡಿಪಿಆರ್ ಸಿದ್ಧಪಡಿಸಿ ಕಾಮಗಾರಿ ಆರಂಭಿಸುವುದಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿಯು ರಾಜ್ಯದ ಸಾಲ ಪಡೆಯುವುದಕ್ಕೆ ಮುಂದಾಗಿದೆ.
ಸುರಂಗ ರಸ್ತೆ ನಿರ್ಮಾಣ ಯೋಜನೆಗೆ ‘ಬೆಂಗಳೂರು ಟ್ವಿನ್ ಟನಲ್ ಪ್ರಾಜೆಕ್ಟ್’ ಎಂದು ಹೆಸರಿಡಲಾಗಿದೆ. ಈ ಯೋಜನೆ ಸಾಲ ನೀಡುವುದಕ್ಕೆ ಸಿದ್ಧವಿರುವ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಂದ ‘ಬಂಡವಾಳ ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸುವಿಕೆ’ಯನ್ನು ಬಿಬಿಎಂಪಿಯು ‘ಆರ್ಥಿಕ ಬಿಡ್’ ಆಹ್ವಾನಿಸಿದೆ. ಸಾಲ ನೀಡುವುದಕ್ಕೆ ಮುಂದಾಗುವ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕ್ ಗಳು ಆರ್‌ಬಿಐ ಅಥವಾ ಸಂಬಂಧಪಟ್ಟ ಪ್ರಾಧಿಕಾರದಿಂದ ನೋಂದಣಿ ಹೊಂದಿರಬೇಕು. ಕನಿಷ್ಠ 5 ವರ್ಷ ಸಾಲ ನೀಡಿದ ಅನುಭವ ಹೊಂದಿರಬೇಕೆಂದು ಷರತ್ತು ವಿಧಿಸಲಾಗಿದೆ.
ಸಾಲಕ್ಕೆ ಸರ್ಕಾರದ ಗ್ಯಾರಂಟಿ: ಬಂಡವಾಳ ಹೂಡಿಕೆ ಮಾಡುವ ಹಣಕಾಸು ಸಂಸ್ಥೆಗಳಿಗೆ ಮತ್ತು ಬ್ಯಾಂಕ್ ಗಳಿಗೆ ರಾಜ್ಯ ಸರ್ಕಾರವು ಗ್ಯಾರಂಟಿ ನೀಡಲಿದೆ. ಅದನ್ನು ಹೊರತು ಪಡಿಸಿ ಸಾಲ ನೀಡುವ ಸಂಸ್ಥೆಗಳಿಗೆ ಭದ್ರತೆ ಆಸ್ತಿ ಅಡಮಾನದ ಬಗ್ಗೆ ಈಗಲೇ ಯಾವುದೇ ನಿರ್ಧಾರ ಮಾಡಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಬಿಬಿಎಂಪಿಯು ಪಡೆಯುವ ಸಾಲಕ್ಕೆ ಯಾವುದೇ ಪೂರ್ವ ಪಾವತಿ ಮೇಲೆ ಷರತ್ತು ಇಲ್ಲದೇ ಯಾವುದೇ ಸಮಯದಲ್ಲಿ ಪೂರ್ಣವಾಗಿ ಅಥವಾ ಭಾಗಶಃ ಸಾಲದ ಮೊತ್ತವನ್ನು ಮರು ಪಾವತಿ ಮಾಡುವ ಹಕ್ಕನ್ನು ಬಿಬಿಎಂಪಿ ಹೊಂದಿರಲಿದೆ. ಬಿಬಿಎಂಪಿಯು ಅಗತ್ಯಕ್ಕೆ ಅನುಗುಣವಾಗಿ ಮೊತ್ತವನ್ನು ಡ್ರಾ ಮಾಡಲಿದೆ. ಮೊದಲ ಸಾಲದ ಕಂತನ್ನು 2025ರ ಏಪ್ರಿಲ್ 1ರ ನಂತರ ಡ್ರಾ ಮಾಡಲಿದೆ. 2027ರ ಡಿ.31ಕ್ಕೆ ಪೂರ್ಣ ಪ್ರಮಾಣದಲ್ಲಿ ಡ್ರಾ ಮಾಡಲಿದೆ ಎಂದು ಹಣಕಾಸು ಸಂಸ್ಥೆಗಳಿಗೆ ಬಿಬಿಎಂಪಿ ತಿಳಿಸಿದೆ.
ಬಡ್ಡಿ ಪ್ರಮಾಣ ತಿಳಿಸಲು ಡಿ.19 ಕೊನೆ ದಿನ: ಸುರಂಗ ರಸ್ತೆ ನಿರ್ಮಾಣಕ್ಕೆ ಬಂಡವಾಳ ಹೂಡಿಕೆ ಮಾಡುವುದಕ್ಕೆ ಆಸಕ್ತಿ ಹೊಂದಿರುವ ಹಣಕಾಸು ಸಂಸ್ಥೆಗಳು ತಾವು ಒದಗಿಸಬಹುದಾ ಸಾಲ ಮೊತ್ತ ಹಾಗೂ ಬಡ್ಡಿ ದರ ತಿಳಿಸುವುದಕ್ಕೆ ಡಿ.19 ಕೊನೆಯ ದಿನವಾಗಿದೆ. ಈ ಬಗ್ಗೆ ಗೊಂದಲ ಮತ್ತು ಸ್ಪಷ್ಟತೆ ಡಿ.9ರಿಂದ 11ವರೆಗೆ ಅವಕಾಶ ನೀಡಲಾಗಿದೆ. ಡಿ.16ರಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರ ಕಚೇರಿಯಲ್ಲಿ ಈ ಕುರಿತು ಪೂರ್ವಭಾವಿ ಸಭೆ ನಡೆಸಲಾಗುತ್ತದೆ. ಡಿ.19ರ ಸಂಜೆ 4 ಗಂಟೆಯ ಒಳಗೆ ಮುಚ್ಚಿದ ಲಕೋಟೆಯಲ್ಲಿ ಸಾಲ ಒದಗಿಸುವ ಮೊತ್ತ ಹಾಗೂ ಬಡ್ಡಿದರದ ಬಿಡ್ ಸಲ್ಲಿಕೆ ಮಾಡಬೇಕೆಂದು ಸೂಚಿಸಲಾಗಿದೆ.
3-ಲೈನ್ ಟ್ವಿನ್ ಟನಲ್ ವಿವರ: ಎಸ್ಟೀಮ್ ಮಾಲ್ ಜಂಕ್ಷನ್‌ನಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗೆ 18.5 ಕಿ.ಮೀ. ಉದ್ದದ ಸುರಂಗ ರಸ್ತೆ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ. ಸುರಂಗ ರಸ್ತೆಯು ಹೆಬ್ಬಾಳದ ಎಸ್ಟೀಮ್ ಮಾಲ್ ಜಂಕ್ಷನ್‌ನಿಂದ ಮೇಖ್ರಿ ವೃತ್ತ, ಅರಮನೆ ರಸ್ತೆ, ಗಾಲ್ಪ್ ಕೋರ್ಸ್ ರಸ್ತೆ, ಚಾಲುಕ್ಯ ವೃತ್ತ, ಕಬ್ಬನ್‌ಪಾರ್ಕ್, ಕೆ.ಎಚ್.ರಸ್ತೆ, ಲಾಲ್‌ಬಾಗ್, ಜಯನಗರ ಮಾರ್ಗವಾಗಿ ಸಿಲ್ಕ್‌ಬೋರ್ಡ್ ಜಂಕ್ಷನ್‌ಗೆ ಹಾದು ಹೋಗಲಿದೆ. ಇಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಈ ರಸ್ತೆಯಲ್ಲಿ ವಾಹನಗಳು ಗಂಟೆಗೆ 35-40 ಕಿ.ಮೀ. ವೇಗದಲ್ಲಿ ಸಂಚರಿಸಬಹುದಾಗಿದೆ. ಹೆಬ್ಬಾಳದ ಎಸ್ಟೀಮ್ ಮಾಲ್ ಜಂಕ್ಷನ್, ಅರಮನೆ ರಸ್ತೆ, ಗಾಲ್ಫ್‌ಕೋರ್ಸ್ ರಸ್ತೆ, ಜಯನಗರದ ಅಶೋಕ ಪಿಲ್ಲರ್ ಹಾಗೂ ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲಿ ಸುರಂಗ ರಸ್ತೆಯ ಪ್ರವೇಶ, ನಿರ್ಗಮನ ದ್ವಾರಗಳಿರಲಿವೆ. ತಳ ಭಾಗದ 3 ಪಥ ಮತ್ತು ಮೇಲ್ಭಾಗದ ಎ2 ಪಥದ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.