ನವದೆಹಲಿ: ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉತ್ತಮವಾದ ನಗರಗಳ ಪಟ್ಟಿ ಮಾಡುವ ಲಂಡನ್ ಮೂಲದ ಕ್ವಾಕ್ವೆರೆಲ್ಲಿ ಸೈಮಂಡ್ಸ್ ಸಂಸ್ಥೆಯ ಕ್ಯುಎಸ್ 2026 ಪಟ್ಟಿ ಮಂಗಳವಾರ ಬಿಡುಗಡೆಯಾಗಿದ್ದು, ಇದರಲ್ಲಿ ಟಾಪ್ -130 ನಗರಗಳಲ್ಲಿ ಬೆಂಗಳೂರು 108ನೇ ಸ್ಥಾನ ಪಡೆದುಕೊಂಡಿದೆ. ಜತೆಗೆ, ಕೈಗೆಟಕುವ ದರದಲ್ಲಿ ಉತ್ತಮ ಪ್ರದರ್ಶನ ನೀಡಿದ ನಗರಗಳಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.
130 ವಿದ್ಯಾರ್ಥಿಸ್ನೇಹಿ ನಗರಗಳ ಪಟ್ಟಿಯಲ್ಲಿ ಭಾರತದ ಮೆಟ್ರೋಪಾಲಿಟನ್ ನಗರಗಳಾದ ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈ ಸ್ಥಾನ ಪಡೆದಿವೆ. ನಾಲ್ಕೂ ನಗರಗಳ ಸ್ಥಾನದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಇದು ಭಾರತದ ಉನ್ನತ ಶಿಕ್ಷಣದ ಅಭಿವೃದ್ಧಿಯನ್ನು ಸೂಚಿಸುತ್ತದೆ.
ಅತ್ತ ದಕ್ಷಿಣ ಕೊರಿಯಾದ ರಾಜಧಾನಿ ಸೋಲ್, ಲಂಡನ್‌ಅನ್ನು ಹಿಂದಿಕ್ಕಿ ವಿಶ್ವದ ಅತ್ಯುತ್ತಮ ವಿದ್ಯಾರ್ಥಿಸ್ನೇಹಿ ನಗರ ಎಂಬ ಪಟ್ಟಿ ಗಿಟ್ಟಿಸಿಕೊಂಡಿದೆ. ಲಂಡನ್ 3ನೇ ಸ್ಥಾನಕ್ಕೆ ಕುಸಿದಿದೆ.
22 ಸ್ಥಾನ ಮೇಲೇರಿದ ಬೆಂಗಳೂರು:
ಕಳೆದ ವರ್ಷದ ಹೋಲಿಕೆಯಲ್ಲಿ 7 ಸ್ಥಾನ ಏರಿಕೆಯಾಗಿ 104ಕ್ಕೆ ತಲುಪಿದ ರಾಷ್ಟ್ರರಾಜಧಾನಿ ದೆಹಲಿಯು ವಿದ್ಯಾರ್ಥಿಗಳ ಪಾಲಿಗೆ ಅತಿ ಅಗ್ಗದ ನಗರವೆಂದು ಗುರುತಿಸಿಕೊಂಡಿದೆ. ಬೆಂಗಳೂರು 22 ಸ್ಥಾನ ಮೇಲೇರಿ 108ಕ್ಕೆ ತಲುಪಿದೆ. ಮುಂಬೈ 15 ಸ್ಥಾನಗಳ ಜಿಗಿತ ಕಂಡು 98ಕ್ಕೆ ಬಂದಿದೆ. 12 ಸ್ಥಾನಗಳ ಸುಧಾರಿಕೆಯೊಂದಿಗೆ ಚೆನ್ನೈ 128ನೇ ಸ್ಥಾನ ಪಡೆದುಕೊಂಡಿದೆ.
ಉದ್ಯೋಗಾವಕಾಶದಲ್ಲೂ ಪ್ರಗತಿ:
ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸುವ ವಿಷಯಕ್ಕೆ ಬಂದರೆ, ದೆಹಲಿ ಮತ್ತು ಮುಂಬೈ ಟಾಪ್ 50ರಲ್ಲಿ ಗುರುತಿಸಿಕೊಂಡಿವೆ. 41 ಸ್ಥಾನಗಳ ಜಿಗಿತದೊಂದಿಗೆ ಬೆಂಗಳೂರು 59 ನೇ ಸ್ಥಾನದಲ್ಲಿದೆ. ಚೆನ್ನೈ ಕೂಡ 29 ಸ್ಥಾನಗಳ ಏರಿಕೆ ಕಂಡಿದೆ.
ಪ್ರತಿ ವರ್ಷ ವಿಶ್ವದ 150 ನಗರಗಳನ್ನು ಪರಿಗಣಿಸಿ ಈ ರ್‍ಯಾಂಕಿಂಗ್ ಅನ್ನು ಸಿದ್ಧಪಡಿಸಲಾಗುತ್ತದೆ. ಇದಕ್ಕೆ, 2,50,000 ಜನಸಂಖ್ಯೆ ಹಾಗೂ ಕ್ಯುಎಸ್ ವರ್ಲ್ಡ್ ಯೂನಿವರ್ಸಿಟಿ ರ್‍ಯಾಂಕಿಂಗ್‌ನಲ್ಲಿ ಗುರುತಿಸಿಕೊಳ್ಳುವ 2 ವಿವಿಗಳುಳ್ಳ ನಗರವನ್ನು ಪರಿಗಣಿಸಲಾಗುತ್ತದೆ.
- ವಿಶ್ವದಲ್ಲಿ ಭಾರತದ 4 ನಗರಕ್ಕೆ ಸ್ಥಾನ
- ವಿದ್ಯಾರ್ಥಿ ಸ್ನೇಹಿ ನಗರದಲ್ಲಿ ಬೆಂಗಳೂರು ನಂ.108
- ವಿದ್ಯಾರ್ಥಿಗಳ ಪಾಲಿಗೆ ದೆಹಲಿ ಅಗ್ಗದ ನಗರ
- ಉದ್ಯೋಗಾವಕಾಶದಲ್ಲಿ ಬೆಂಗ್ಳೂರಿಗೆ 59ನೇ ಸ್ಥಾನ
- ದ.ಕೊರಿಯಾದ ಸೋಲ್ ನಂ.1 ವಿದ್ಯಾರ್ಥಿಸ್ನೇಹಿ ನಗರ