ನವಜಾತ ಶಿಶುವಿನ ಹತ್ಯೆ ಆರೋಪಿಗಳ ಬಂಧನ

KannadaprabhaNewsNetwork |  
Published : Mar 10, 2024, 01:47 AM IST
ಆರೋಪಿಗಳ ಬಂಧನ | Kannada Prabha

ಸಾರಾಂಶ

ಕುಮಾರ ಮತ್ತು ಆತನ ತಾಯಿ ಯಮುನಾ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಗದ್ದೆಹಳ್ಳ ಚೆಟ್ಟಳ್ಳಿ ರಸ್ತೆ ಬದಿಯ ಗದ್ದೆಯಲ್ಲಿ ನವಜಾತ ಶಿಶುವಿನ ಮೃತ ದೇಹ ಕಂಡುಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಂಟಿಕೊಪ್ಪ ಪೊಲೀಸರು ಆರೋಪಿಗಳಿಬ್ಬರನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಗದ್ದೆಹಳ್ಳ ಗಿರಿಯಪ್ಪ ಮನೆ ಗದ್ದೆಯಲ್ಲಿ ವಾಸವಾಗಿರುವ ಕುಮಾರ ಮತ್ತು ಆತನ ತಾಯಿ ಯಮುನಾ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಹುಟ್ಟಿದ ಮಗುವಿನ ಕತ್ತು ಹಿಸುಕಿ ಸಾಯಿಸಿ ನಂತರ ಹೂತು ಹಾಕಿರುವುದನ್ನು ಪೊಲೀಸರ ವಿಚಾರಣೆ ಸಂದರ್ಭ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಕ್ರಮ ಸಂಬಂಧ ಎರವಾಯಿತು: ವಿವಾಹಿತನಾಗಿರುವ ಕುಮಾರನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಈತ ಚೆಟ್ಟಳ್ಳಿ ಸಮೀಪದ ಗ್ರಾಮವೊಂದರ ಮಹಿಳೆ ಒಬ್ಬಳೊಂದಿಗೆ ಅಕ್ರಮ ಸಂಬಂಧ ಇರಿಸಿದ್ದು ಇದರ ಫಲವಾಗಿ ಆಕೆ ಗರ್ಭಿಣಿಯಾಗಿದ್ದಳು. ಇನ್ನೇನು ಪ್ರಸವದ ದಿವಸ ಸಮೀಪಿಸುತ್ತಿದ್ದಂತೆ ನಾನೇ ಮನೆಯಲ್ಲಿರಿಸಿಕೊಂಡು ಹೆರಿಗೆ ಮಾಡಿಸಿ ಆರೈಕೆ ಮಾಡುತ್ತೇನೆ ಎಂದು ಅವಳ ಮನೆಯವರಿಗೆ ಹೇಳಿ ಆಕೆಯನ್ನು ತನ್ನ ಮನೆಯಲ್ಲಿರಿಸಿಕೊಂಡಿದ್ದಾನೆ. 6 ರಂದು ರಾತ್ರಿ ಕುಮಾರ ಮತ್ತು ಅವನ ತಾಯಿ ಯಮುನಾ ತುಂಬು ಗರ್ಭಿಣಿಗೆ ಬಲವಂತವಾಗಿ ಹೆರಿಗೆ ಮಾಡಿಸಿದ್ದಾರೆ. ಮಗು ಹುಟ್ಟಿದ ತಕ್ಷಣ ಜೀವಂತವಿದ್ದ ನವಜಾತ ಶಿಶುವಿನ ಕತ್ತುಹಿಸುಕಿ ಅದರ ಜೀವ ಕಿತ್ತುಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಮರುದಿನ ಮುಂಜಾನೆ ಕುಮಾರ ಮತ್ತು ಯಮುನಾ ರಸ್ತೆ ಬದಿಯ ಗದ್ದೆಯಲ್ಲಿ ಗುಂಡಿ ತೋಡಿ ನವಜಾತ ಶಿಶುವನ್ನು ಹೂತಿದ್ದಾರೆ.

ಸಂಜೆ ನವಜಾತ ಶಿಶುವಿನ ಮೃತ ದೇಹ ಪತ್ತೆಯಾದ ವಿಚಾರ ಹರಡಿದೆ. ಕುಮಾರ ಕೂಡ ಅದನ್ನು ನೋಡಲು ಬಂದಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಸುಂಟಿಕೊಪ್ಪ ಪೊಲೀಸರು ಜಿಲ್ಲಾ ವರಿಷ್ಠಾಧಿಕಾರಿ ಕೆ.ರಾಮರಾಜನ್ ಆದೇಶದ ಮೇರೆಗೆ ಡಿವೈಎಸ್‌ಪಿ ಗಂಗಾಧರಪ್ಪ, ವೃತ್ತನಿರೀಕ್ಷಕರಾದ ರಾಜೇಶ್ ಕೋಟ್ಯಾನ್ ಮಾರ್ಗದರ್ಶನದ ತನಿಖೆಯ ಜಾಡು ಹಿಡಿದ ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಮತ್ತು ಸಿಬ್ಬಂದಿ ತಂಡ ಆರೋಪಿಗಳಾದ ಕುಮಾರ ಹಾಗೂ ಆತನ ತಾಯಿ ಯಮುನಾಳನ್ನು ಶುಕ್ರವಾರ ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸಿ, ಆರೋಪಿಗಳನ್ನು ನ್ಯಾಯಾಲಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ