ಇಂದಿನಿಂದ ಆಸ್ಟ್ರೇಲಿಯನ್ ಗ್ರ್ಯಾನ್‌ಸ್ಲಾಂ ಟೆನಿಸ್‌: ಜೋಕೋ, ಆಲ್ಕರಜ್‌, ಸಿನ್ನರ್‌ ಪ್ರಮುಖ ಆಕರ್ಷಣೆ

KannadaprabhaNewsNetwork | Updated : Jan 12 2025, 04:13 AM IST

ಸಾರಾಂಶ

ಮಾಜಿ ವಿಶ್ವ ನಂ.1 ಜೋಕೋ 2023ರ ಅಂತ್ಯಕ್ಕೆ 24 ಗ್ರ್ಯಾನ್‌ಸ್ಲಾಂ ಪ್ರಶಸ್ತಿ ವೀರ ಎನಿಸಿಕೊಂಡಿದ್ದರು. ದಾಖಲೆಯ 25 ಗ್ರ್ಯಾನ್‌ಸ್ಲಾಂ ಕಿರೀಟದ ಕನಸನ್ನು ಆಸ್ಟ್ರೇಲಿಯಾದಲ್ಲಿ ಈಡೇರಿಸುವ ತವಕದಲ್ಲಿದ್ದಾರೆ.

ಮೆಲ್ಬರ್ನ್‌: ವರ್ಷದ ಮೊದಲ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಾಗಿರುವ ಆಸ್ಟ್ರೇಲಿಯನ್‌ ಓಪನ್‌ ಶನಿವಾರ ಆರಂಭಗೊಳ್ಳಲಿದೆ. 10 ಬಾರಿ ಚಾಂಪಿಯನ್‌ ನೋವಾಕ್‌ ಜೋಕೋವಿಚ್‌, ಹಾಲಿ ಚಾಂಪಿಯನ್‌ಗಳಾದ ಯಾನಿಕ್‌ ಸಿನ್ನರ್‌, ಅರೈನಾ ಸಬಲೆಂಕಾ, ಯುವ ಸೂಪರ್‌ಸ್ಟಾರ್‌ ಕಾರ್ಲೊಸ್‌ ಆಲ್ಕರಜ್‌ ಸೇರಿ ಘಟಾನುಘಟಿ ಟೆನಿಸಿಗರು ಟೂರ್ನಿಯ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ.

ವಿಶ್ವ ರ್‍ಯಾಂಕಿಂಗ್‌ನಲ್ಲಿ 7ನೇ ಸ್ಥಾನಕ್ಕೆ ಕುಸಿದಿರುವ ಸರ್ಬಿಯಾದ ಜೋಕೋ, ಆರಂಭಿಕ ಸುತ್ತಿನಲ್ಲಿ ಭಾರತ ಮೂಲದ ನಿಶೇಶ್‌ ಬಸವರೆಡ್ಡಿ ವಿರುದ್ಧ ಸೆಣಸಾಡಲಿದ್ದಾರೆ. ಸತತ 2ನೇ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಇಟಲಿಯ ಸಿನ್ನರ್‌ಗೆ ಚಿಲಿಯ ನಿಕೋಲಸ್‌ ಜಾರಿ ಸವಾಲು ಎದುರಾಗಲಿದೆ. 

4 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ಸ್ಪೇನ್‌ನ ಆಲ್ಕರಜ್‌, ಕಜಕಸ್ತಾನದ ಅಲೆಕ್ಸಾಂಡರ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ. ಈ ಮೂವರೂ ಸೋಮವಾರ ಕಣಕ್ಕಿಳಿಯಲಿದ್ದಾರೆ. ಆಲ್ಕರಜ್‌ ಹಾಗೂ ಸಿನ್ನರ್‌ ಕಳೆದ ವರ್ಷ ತಲಾ 2 ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿದ್ದು, ಈ ಬಾರಿ ಮತ್ತಷ್ಟು ಪೈಪೋಟಿ ಎದುರಾಗಬಹುದು.ಇನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಬೆಲಾರಸ್‌ನ ಸಬಲೆಂಕಾ ಹ್ಯಾಟ್ರಿಕ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. 

ವಿಶ್ವ ನಂ.2 ಇಗಾ ಸ್ವಿಯಾಟೆಕ್‌ 6ನೇ ಗ್ರ್ಯಾನ್‌ಸ್ಲಾಂ ಗೆಲ್ಲುವ ಕಾತರದಲ್ಲಿದ್ದಾರೆ. 3ನೇ ಶ್ರೇಯಾಂಕಿತ ಕೊಕೊ ಗಾಫ್‌, ಕಳೆದ ಬಾರಿ ರನ್ನರ್‌ಅಪ್‌ ಜೆಸ್ಸಿಕಾ ಪೆಗುಲಾ ಕೂಡಾ ಕಣದಲ್ಲಿದ್ದಾರೆ.

ನನಸಾಗುತ್ತಾ ಜೋಕೋ 25 ಗ್ರ್ಯಾನ್‌ಸ್ಲಾಂ ಕನಸು?

ಮಾಜಿ ವಿಶ್ವ ನಂ.1 ಜೋಕೋ 2023ರ ಅಂತ್ಯಕ್ಕೆ 24 ಗ್ರ್ಯಾನ್‌ಸ್ಲಾಂ ಪ್ರಶಸ್ತಿ ವೀರ ಎನಿಸಿಕೊಂಡಿದ್ದರು. ಕಳೆದ ವರ್ಷ 4 ಗ್ರ್ಯಾನ್‌ಸ್ಲಾಂ ಪೈಕಿ ಒಂದರಲ್ಲೂ ಗೆದ್ದಿಲ್ಲ. ದಾಖಲೆಯ 25 ಗ್ರ್ಯಾನ್‌ಸ್ಲಾಂ ಕಿರೀಟದ ಕನಸನ್ನು ಆಸ್ಟ್ರೇಲಿಯಾದಲ್ಲಿ ಈಡೇರಿಸುವ ತವಕದಲ್ಲಿದ್ದಾರೆ. 

ಬೋಪಣ್ಣ, ನಗಾಲ್‌, ಭಾಂಬ್ರಿ, ಶ್ರೀರಾಂ ಕಣಕ್ಕೆ

ಟೂರ್ನಿಯಲ್ಲಿ ಭಾರತದ ಹಲವು ಟೆನಿಸಗರು ಸ್ಪರ್ಧಿಸಲಿದ್ದಾರೆ. ಸಿಂಗಲ್ಸ್‌ನಲ್ಲಿ ಸುಮಿತ್‌ ನಗಾಲ್‌ ಏಕೈಕ ಭಾರತೀಯ ಎನಿಸಿಕೊಂಡಿದ್ದು, ಕರ್ನಾಟಕದ ರೋಹನ್‌ ಬೋಪಣ್ಣ, ಶ್ರೀರಾಮ್‌ ಬಾಲಾಜಿ, ಯೂಕಿ ಭಾಂಬ್ರಿ, ರಿತ್ವಿಕ್‌ ಚೌಧರಿ ಪುರುಷರ ಡಬಲ್ಸ್‌ನಲ್ಲಿ ಬೇರೆ ಬೇರೆ ದೇಶಗಳ ಟೆನಿಸಿಗರ ಜೊತೆಗೂಡಿ ಆಡಲಿದ್ದಾರೆ.

Share this article