ಕುಂಬ್ಳೆ ಬಳಿಕ ಭಾರತದ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್‌ ಆರ್‌.ಅಶ್ವಿನ್‌ ನಿವೃತ್ತಿ ಘೋಷಣೆ!

KannadaprabhaNewsNetwork | Updated : Dec 19 2024, 04:07 AM IST

ಸಾರಾಂಶ

14 ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ದಿಢೀರ್‌ ನಿವೃತ್ತಿ ಘೋಷಣೆ. ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್‌, ಆಲ್ರೌಂಡರ್‌ಗಳಲ್ಲಿ ಓರ್ವರಾಗಿರುವ ಆರ್‌.ಅಶ್ವಿನ್‌

ಬ್ರಿಸ್ಬೇನ್‌: ಭಾರತದ ಹಿರಿಯ ಕ್ರಿಕೆಟಿಗ, ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್‌ ಹಾಗೂ ಆಲ್ರೌಂಡರ್‌ಗಳಲ್ಲಿ ಓರ್ವರಾಗಿರುವ ರವಿಚಂದ್ರನ್‌ ಅಶ್ವಿನ್‌ ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ. 

ಆಸ್ಟ್ರೇಲಿಯಾ ವಿರುದ್ಧ 3ನೇ ಟೆಸ್ಟ್‌ ಪಂದ್ಯ ಕೊನೆಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿ ಅಚ್ಚರಿ ಮೂಡಿಸಿದರು. ತಮಿಳುನಾಡಿನ 38 ವರ್ಷದ ಅಶ್ವಿನ್‌ ಆಸ್ಟ್ರೇಲಿಯಾ ಸರಣಿಯ ಕೊನೆ 2 ಪಂದ್ಯಗಳಿಗೆ ಲಭ್ಯವಿಲ್ಲ. ಪರ್ತ್‌ನಲ್ಲಿ ಸರಣಿಯ ಮೊದಲ ಟೆಸ್ಟ್‌ ಆಡಿದ್ದೇ ಅವರ ವೃತ್ತಿಬದುಕಿನ ಕೊನೆ ಪಂದ್ಯ. ‘ಇದು ಎಲ್ಲಾ ಮಾದರಿಯಲ್ಲೂ ಭಾರತೀಯ ಕ್ರಿಕೆಟ್‌ನಲ್ಲಿ ನನ್ನ ಕೊನೆ ದಿನ. ನನ್ನಲ್ಲಿನ್ನೂ ಕ್ರಿಕೆಟ್‌ ಉಳಿದಿದೆ.

 ಅದನ್ನು ಇನ್ನು ಕ್ಲಬ್‌ ಮಟ್ಟದಲ್ಲಿ ಪ್ರದರ್ಶಿಸುತ್ತೇನೆ. ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಗೆ ಇನ್ನು ನನ್ನ ಅಗತ್ಯ ಇಲ್ಲ ಎಂದು ಭಾವಿಸಿದ್ದೇನೆ. ಹೀಗಾಗಿ ಕ್ರಿಕೆಟ್‌ಗೆ ಈಗಲೇ ನಿವೃತ್ತಿ ಪ್ರಕಟಿಸುವುದು ಸೂಕ್ತ’ ಎಂದು ರೋಹಿತ್‌ ಶರ್ಮಾ ಜೊತೆಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅಶ್ವಿನ್‌ ತಿಳಿಸಿದರು.

2010ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಅಶ್ವಿನ್‌, 14 ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು ಈ ವರೆಗೂ 116 ಏಕದಿನ ಪಂದ್ಯದಲ್ಲಿ 156 ವಿಕೆಟ್‌, 65 ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ 72 ಹಾಗೂ 106 ಟೆಸ್ಟ್‌ನಲ್ಲಿ 537 ವಿಕೆಟ್‌ ಕಬಳಿಸಿದ್ದಾರೆ. 

ಟೆಸ್ಟ್‌ನಲ್ಲಿ 6 ಶತಕಗಳೊಂದಿಗೆ 3503 ರನ್‌ ಕಲೆಹಾಕಿರುವ ಅವರು, ಏಕದಿನದಲ್ಲಿ 707, ಅಂ.ರಾ. ಟಿ20ಯಲ್ಲಿ 184 ರನ್‌ ಸಿಡಿಸಿದ್ದಾರೆ. ಅಶ್ವಿನ್‌ 2011ರ ಏಕದಿನ ವಿಶ್ವಕಪ್‌, 2013ರ ಚಾಂಪಿಯನ್ಸ್‌ ಟ್ರೋಫಿ ವಿಜೇತ ಭಾರತ ತಂಡದಲ್ಲಿದ್ದರು. 2022ರಲ್ಲಿ ಇಂಗ್ಲೆಂಡ್‌ ವಿರುದ್ಧ ಟಿ20 ವಿಶ್ವಕಪ್‌ ಪಂದ್ಯದ ಮೂಲಕ ಭಾರತ ಪರ ಕೊನೆ ಟಿ20 ಆಡಿರುವ ಅವರು, ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಕೊನೆ ಬಾರಿ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.ಅಶ್ವಿನ್‌ಗೆ ಕಳೆದೆರಡು ವರ್ಷಗಳಿಂದ ಹೆಚ್ಚಾಗಿ ತವರಿನ ಟೆಸ್ಟ್‌ ಪಂದ್ಯಗಳಲ್ಲಿ ಮಾತ್ರ ಅವಕಾಶ ಸಿಗುತ್ತಿತ್ತು. ಈ ಬಾರಿ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿದ್ದ ಅವರು, ಮೊದಲ ಪಂದ್ಯ ಆಡಿದ್ದರು. ಬಳಿಕ 2 ಪಂದ್ಯಗಳಿಗೆ ಅವಕಾಶ ಸಿಕ್ಕಿಲ್ಲ.

765 ವಿಕೆಟ್‌: ಅಶ್ವಿನ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 765 ವಿಕೆಟ್‌. ಭಾರತೀಯರ ಪೈಕಿ 2ನೇ ಗರಿಷ್ಠ. ಅಗ್ರಸ್ಥಾನದಲ್ಲಿ ಅನಿಲ್‌ ಕುಂಬ್ಳೆ(956 ವಿಕೆಟ್‌). ಒಟ್ಟಾರೆ ವಿಶ್ವದ 11ನೇ ಗರಿಷ್ಠ ವಿಕೆಟ್‌ ಸಾಧಕ.

537 ವಿಕೆಟ್‌: ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 537 ವಿಕೆಟ್‌ ಪಡೆದಿದ್ದಾರೆ. ಇದು ಭಾರತೀಯ ಬೌಲರ್‌ನ 2ನೇ ಶ್ರೇಷ್ಠ ಸಾಧನೆ. ಅನಿಲ್‌ ಕುಂಬ್ಳೆ 619 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ವಿಶ್ವದಲ್ಲೇ ಗರಿಷ್ಠ ಟೆಸ್ಟ್‌ ವಿಕೆಟ್‌ ಪಟ್ಟಿಯಲ್ಲಿ ಅಶ್ವಿನ್‌ಗೆ 7ನೇ ಸ್ಥಾನ.

383 ವಿಕೆಟ್‌: ಭಾರತದಲ್ಲಿ ಅತಿ ಹೆಚ್ಚು ಟೆಸ್ಟ್‌ ಕಿತ್ತ ಸಾಧಕರ ಪಟ್ಟಿಯಲ್ಲಿ ಅಶ್ವಿನ್‌ಗೆ ಅಗ್ರಸ್ಥಾನ. ಅವರು 65 ಪಂದ್ಯಗಳಲ್ಲಿ 383 ವಿಕೆಟ್‌ ಕಬಳಿಸಿದ್ದಾರೆ.

156 ವಿಕೆಟ್‌: ಆರ್‌.ಅಶ್ವಿನ್‌ ಏಕದಿನ ಕ್ರಿಕೆಟ್‌ನಲ್ಲಿ 156 ವಿಕೆಟ್‌ ಪಡೆದಿದ್ದಾರೆ. ಭಾರತೀಯ ಸ್ಪಿನ್ನರ್‌ಗಳ ಪೈಕಿ 4ನೇ ಗರಿಷ್ಠ. 

11 ಸರಣಿಶ್ರೇಷ್ಠ: ಅಶ್ವಿನ್‌ ಟೆಸ್ಟ್‌ನಲ್ಲಿ 11 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ವಿಶ್ವದ ಯಾವುದೇ ಆಟಗಾರನ ಪೈಕಿ ಗರಿಷ್ಠ.

 37 ಬಾರಿ: ಅಶ್ವಿನ್‌ ಟೆಸ್ಟ್‌ನಲ್ಲಿ 37 ಬಾರಿ 5+ ವಿಕೆಟ್‌ ಕಿತ್ತಿದ್ದಾರೆ. ಇದು 2ನೇ ಶ್ರೇಷ್ಠ. ಶ್ರೀಲಂಕಾದ ಮುರಳೀಧರನ್‌ 67 ಬಾರಿ ಸಾಧನೆ ಮಾಡಿದ್ದಾರೆ.

ಭಾವನಾತ್ಮಕ ಕ್ಷಣಗಳಿಗೆ ಡೆಸ್ಸಿಂಗ್‌ ಕೋಣೆ ಸಾಕ್ಷಿ!

ಅಶ್ವಿನ್‌ ನಿವೃತ್ತಿ ಘೋಷಣೆ ಬಳಿಕ ಆಟಗಾರರ ಡ್ರೆಸ್ಸಿಂಗ್‌ ಕೋಣೆ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ತಮಗೆ ನಿವೃತ್ತಿ ವಿಷಯ ತಿಳಿಸಿದ ಅಶ್ವಿನ್‌ರನ್ನು ಕುಳಿತಲ್ಲಿಂದಲೇ ವಿರಾಟ್‌ ಕೊಹ್ಲಿ ಆಲಿಂಗಿಸಿದ ದೃಶ್ಯ ವ್ಯಾಪಕ ವೈರಲ್‌ ಆಗಿದೆ. ಇನ್ನು, ಸುದ್ದಿಗೋಷ್ಠಿ ಬಳಿಕ ಡ್ರೆಸ್ಸಿಂಗ್‌ ಕೋಣೆಗೆ ಆಗಮಿಸಿದ ಅಶ್ವಿನ್‌ರನ್ನು ಆಟಗಾರರು, ಸಹಾಯಕ ಸಿಬ್ಬಂದಿ ಆಲಿಂಗಿಸಿ ಅಭಿನಂದನೆ ಸಲ್ಲಿಸಿದರು. ಕೇಕ್‌ ಕತ್ತರಿಸಿ ಅಶ್ವಿನ್‌ಗೆ ಶುಭ ಕೋರಿದರು. ಆಸ್ಟ್ರೇಲಿಯಾ ಆಟಗಾರರ ಹಸ್ತಾಕ್ಷರವಿರುವ ಜೆರ್ಸಿಯನ್ನು ಅಶ್ವಿನ್‌ಗೆ ನೀಡಲಾಯಿತು.

Share this article