2027ರ ಏಕದಿನ ವಿಶ್ವಕಪ್‌ಗೆ ತಮಿಳುನಾಡಿನ ಎಡಗೈ ಬ್ಯಾಟರ್‌ ಬಿ. ಸಾಯಿ ಸುದರ್ಶನ್‌

KannadaprabhaNewsNetwork |  
Published : Mar 30, 2025, 03:02 AM ISTUpdated : Mar 30, 2025, 04:05 AM IST
ಸಾಯಿ ಸುದರ್ಶನ್‌ | Kannada Prabha

ಸಾರಾಂಶ

 ತಮಿಳುನಾಡಿನ ಎಡಗೈ ಬ್ಯಾಟರ್‌ ಬಿ.ಸಾಯಿ ಸುದರ್ಶನ್‌, 2025ರ ಐಪಿಎಲ್‌ನಲ್ಲೂ ತಮ್ಮ ಮಿಂಚಿನಾಟ ಮುಂದುವರಿಸಿದ್ದಾರೆ. ಆ ಮೂಲಕ 2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಬೇಕಿರುವ ಎಲ್ಲಾ ಪ್ರಯತ್ನ ನಡೆಸಿದ್ದಾರೆ.

ಅಹಮದಾಬಾದ್: 2024ರ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ತೋರಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ತಮಿಳುನಾಡಿನ ಎಡಗೈ ಬ್ಯಾಟರ್‌ ಬಿ.ಸಾಯಿ ಸುದರ್ಶನ್‌, 2025ರ ಐಪಿಎಲ್‌ನಲ್ಲೂ ತಮ್ಮ ಮಿಂಚಿನಾಟ ಮುಂದುವರಿಸಿದ್ದಾರೆ. ಆ ಮೂಲಕ 2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಬೇಕಿರುವ ಎಲ್ಲಾ ಪ್ರಯತ್ನ ನಡೆಸಿದ್ದಾರೆ.

ಶನಿವಾರ ಇಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಸುದರ್ಶನ್‌ ಆಕರ್ಷಕ ಅರ್ಧಶತಕ ಸಿಡಿಸಿದರು. ಗುಜರಾತ್‌ ಟೈಟಾನ್ಸ್‌ನ ಆರಂಭಿಕ ಬ್ಯಾಟರ್‌ ಆಗಿ ಕಣಕ್ಕಿಳಿದ ಅವರು, ಮುಂಬೈನ ಬಲಿಷ್ಠ ಬೌಲಿಂಗ್‌ ಪಡೆಯ ಎದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿ, 41 ಎಸೆತದಲ್ಲಿ 4 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 63 ರನ್‌ ಸಿಡಿಸಿದರು. ಈ ಐಪಿಎಲ್‌ನಲ್ಲಿ ಇದು ಅವರ ಸತತ 2ನೇ ಅರ್ಧಶತಕ. ಅಹಮದಬಾದ್‌ನಲ್ಲೇ ನಡೆದಿದ್ದ ಮೊದಲ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಸುದರ್ಶನ್‌ ಆಕರ್ಷಕ 74 ರನ್‌ ಗಳಿಸಿದ್ದರು.

ಭಾರತ ಪರ ಕೇವಲ 3 ಏಕದಿನ ಪಂದ್ಯಗಳನ್ನು ಆಡಿದ್ದರೂ, 2 ಅರ್ಧಶತಕ ಬಾರಿಸಿ ತಾವು ಅಂ.ರಾ. ಕ್ರಿಕೆಟ್‌ಗೂ ಸೈ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲೂ ಆಡಿದ ಅನುಭವ ಪಡೆದಿರುವ ಸುದರ್ಶನ್‌, ಭಾರತ ಟೆಸ್ಟ್‌ ತಂಡಕ್ಕೂ ಸೂಕ್ತ ಆಟಗಾರ ಎನ್ನುವ ಅಭಿಪ್ರಾಯಗಳು ಹಲವು ಕ್ರಿಕೆಟ್‌ ತಜ್ಞರಿಂದ ವ್ಯಕ್ತವಾಗಿದೆ. ಐಪಿಎಲ್‌ ಮುಗಿದ ಬಳಿಕ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಆಡಲು ತೆರಳಲಿರುವ ಭಾರತ ತಂಡದೊಂದಿಗೆ ಸುದರ್ಶನ್‌ ಸಹ ಪ್ರಯಾಣಿಸುವ ಸಾಧ್ಯತೆ ಇದೆ. ಪ್ರಧಾನ ತಂಡದಲ್ಲಿ ಅವರಿಗೆ ಸ್ಥಾನ ಸಿಗದಿದ್ದರೂ ಮೀಸಲು ಆಟಗಾರನಾಗಿ ಅವರು ಇಂಗ್ಲೆಂಡ್‌ಗೆ ವಿಮಾನ ಹತ್ತಬಹುದು ಎಂದು ಹೇಳಲಾಗುತ್ತಿದೆ.

2027ರ ಏಕದಿನ ವಿಶ್ವಕಪ್‌ ವರೆಗೂ ರೋಹಿತ್‌ ಶರ್ಮಾ ಆಡುವ ನಿರೀಕ್ಷೆ ಇದೆ. ಆದರೂ, ಒಂದು ವೇಳೆ ರೋಹಿತ್‌ ನಿವೃತ್ತಿ ಘೋಷಿಸಿದರೆ ಶುಭ್‌ಮನ್‌ ಗಿಲ್‌ ಜೊತೆಗೆ ಆರಂಭಿಕನನ್ನಾಗಿ ಸಾಯಿ ಸುದರ್ಶನ್‌ರನ್ನೇ ಆಯ್ಕೆ ಮಾಡಬೇಕು ಎನ್ನುವ ಅಭಿಪ್ರಾಯಗಳು ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾಗುತ್ತಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!