ಪುರುಷರ ಸಿಂಗಲ್ಸ್‌ನಲ್ಲಿ ಇಟಲಿಯ ಯಾನ್ನಿಕ್‌ ಸಿನ್ನರ್‌ ಮಡಿಲಿಗೆ ಆಸ್ಟ್ರೇಲಿಯನ್‌ ಓಪನ್‌ ಟ್ರೋಫಿ

KannadaprabhaNewsNetwork | Updated : Jan 27 2025, 04:58 AM IST

ಸಾರಾಂಶ

ಇಟಲಿಯ ಯಾನ್ನಿಕ್‌ ಸಿನ್ನರ್‌ 2025ರ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಮೆಲ್ಬರ್ನ್‌: ಇಟಲಿಯ ಯಾನ್ನಿಕ್‌ ಸಿನ್ನರ್‌ 2025ರ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ 6-3, 7-6 (4), 6-3 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು.

2024ರಲ್ಲೂ ಪ್ರಶಸ್ತಿ ಜಯಿಸಿದ್ದ ವಿಶ್ವ ನಂ.1 ಆಟಗಾರ, ಸತತ 2ನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಫೈನಲ್‌ನ ಸ್ಕೋರ್‌ ನೋಡಿದರೆ, ಪಂದ್ಯ ಏಕಪಕ್ಷೀಯವಾಗಿತ್ತು ಎನ್ನುವುದು ತಿಳಿಯಲಿದೆಯಾದರೂ, ಸಿನ್ನರ್‌ರ ಪ್ರಾಬಲ್ಯ ಎಷ್ಟಿತ್ತು ಎನ್ನುವುದನ್ನು ಅರಿಯಲು ಕೆಲ ಪ್ರಮುಖ ಅಂಕಿ-ಅಂಶಗಳ ಕಡೆ ಗಮನ ಹರಿಸಲೇಬೇಕು.

ಇಡೀ ಪಂದ್ಯದಲ್ಲಿ ಸಿನ್ನರ್‌ ಒಂದೇ ಒಂದು ಬ್ರೇಕ್‌ ಪಾಯಿಂಟ್‌ ಎದುರಿಸಲಿಲ್ಲ. ಆದರೆ, ತಾವು 10 ಬ್ರೇಕ್‌ ಪಾಯಿಂಟ್‌ಗಳನ್ನು ಗಳಿಸಿದರು. ಸಿನ್ನರ್‌ 27 ಅಡ್ವಾಂಟೇಜ್‌ ಅಂಕಗಳನ್ನು ಪಡೆದರೆ, ಜ್ವೆರೆವ್‌ಗೆ ಸಿಕ್ಕಿದ್ದು 13 ಅಂಕ. ಸಿನ್ನರ್‌ ಕೇವಲ 27 ಅನ್‌ಫೋರ್ಸ್ಡ್‌ ಎರರ್‌ಗಳನ್ನು ಮಾಡಿದರೆ, ಜ್ವೆರೆವ್‌ 45 ಬಾರಿ ತಪ್ಪೆಸಗಿ ಅಂಕ ಬಿಟ್ಟುಕೊಟ್ಟರು. ಆಟದ ಎಲ್ಲಾ ವಿಭಾಗಗಳಲ್ಲೂ ಸಿನ್ನರ್‌ ಸಂಪೂರ್ಣ ಮೇಲುಗೈ ಸಾಧಿಸಿ ನಿರಾಯಾಸವಾಗಿ ಪಂದ್ಯ ತಮ್ಮದಾಗಿಸಿಕೊಂಡರು.

ಪಂದ್ಯದ ಬಳಿಕ ಸಿನ್ನರ್‌ ಬಗ್ಗೆ ಜ್ವೆರೆವ್‌ ಆಡಿದ ಮಾತುಗಳು, ಇಟಲಿಯ ಟೆನಿಸಿಗನ ಆಟದ ತೂಕವನ್ನು ಎತ್ತಿಹಿಡಿಯುವಂತಿತ್ತು. ‘ಸದ್ಯ ನೀವು ವಿಶ್ವದ ಶ್ರೇಷ್ಠ ಆಟಗಾರ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಇಂದು ನಾನು ನಿಮಗೆ ಪ್ರಬಲ ಪೈಪೋಟಿ ನೀಡಬೇಕೆಂದು ಕಣಕ್ಕಿಳಿದೆ. ಆದರೆ ನನ್ನಿಂದ ಸಾಧ್ಯವಾಗಲಿಲ್ಲ. ನಿಮ್ಮ ಆಟದ ಲೆವೆಲ್‌ ಬೇರೆಯೇ ಇದೆ’ ಎಂದು ಜ್ವೆರೆವ್‌ ಹೇಳಿದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ಜ್ವೆರೆವ್‌ರಿಂದ ಇಂಥ ಪ್ರಶಂಸೆ ಬರಬೇಕಿದ್ದರೆ, ನಿಜಕ್ಕೂ ಸಿನ್ನರ್‌ರ ಆಟ ಎಷ್ಟು ಯೋಜನಾಭರಿತವಾಗಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಸಿನ್ನರ್‌ಗೆ 3ನೇ ಗ್ರ್ಯಾನ್‌ಸ್ಲಾಂ

2024ರ ಆರಂಭದಿಂದ ಈ ವರೆಗೂ ಸಿನ್ನರ್‌ 3 ಗ್ರ್ಯಾನ್‌ ಸ್ಲಾಂ ಟ್ರೋಫಿಗಳನ್ನು ಗೆದ್ದಿದ್ದಾರೆ. 2024ರ ಆಸ್ಟ್ರೇಲಿಯನ್‌ ಓಪನ್‌, 2024ರ ಯುಎಸ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದ ಸಿನ್ನರ್‌, ಈ ಅವಧಿಯಲ್ಲಿ 80-6 ಗೆಲುವು-ಸೋಲಿನ ದಾಖಲೆ ಹೊಂದಿದ್ದಾರೆ. ಒಟ್ಟಾರೆ 9 ಎಟಿಪಿ ಪ್ರಶಸ್ತಿಗಳನ್ನು ಜಯಿಸಿರುವ ಸಿನ್ನರ್‌, ಸದ್ಯ 21 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದ್ದಾರೆ. ಜ್ವೆರೆವ್‌ಗೆ ಮತ್ತೆ ನಿರಾಸೆ!

ಅಲೆಕ್ಸಾಂಡರ್‌ ಜ್ವೆರೆವ್‌ 3ನೇ ಬಾರಿಗೆ ಗ್ರ್ಯಾನ್‌ ಸ್ಲಾಂ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ. 2020ರ ಯುಎಸ್‌ ಓಪನ್‌, 2024ರ ಫ್ರೆಂಚ್‌ ಓಪನ್‌, 2025ರ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ಗಳಲ್ಲಿ ಸೋಲುಂಡಿದ್ದಾರೆ. 27 ವರ್ಷದ ಟೆನಿಸಿಗ ಚೊಚ್ಚಲ ಗ್ರ್ಯಾನ್‌ ಸ್ಲಾಂ ಗೆಲ್ಲಲು ಇನ್ನಷ್ಟು ದಿನ ಕಾಯಬೇಕಿದೆ. --

₹19.05 ಕೋಟಿ

ಚಾಂಪಿಯನ್‌ ಸಿನ್ನರ್‌ಗೆ ಸಿಕ್ಕ ಬಹುಮಾನ ಮೊತ್ತ. ₹10.34 ಕೋಟಿ

ರನ್ನರ್‌-ಅಪ್‌ ಜ್ವೆರೆವ್‌ಗೆ ಸಿಕ್ಕ ಬಹುಮಾನ ಮೊತ್ತ.

 ಗಳಗಳನೆ ಅತ್ತ ಜ್ವೆರೆವ್‌:

ಸಂತೈಸಿದ ಸಿನ್ನರ್‌!

3ನೇ ಬಾರಿಗೆ ಗ್ರ್ಯಾನ್‌ ಸ್ಲಾಂ ಫೈನಲ್‌ನಲ್ಲಿ ಸೋಲುಂಡ ಬಳಿಕ ಜ್ವೆರೆವ್‌ ಭಾವುಕರಾದರು. ಆಗ ಸಿನ್ನರ್‌, ಜ್ವೆರೆವ್‌ರ ಹೆಗಲ ಮೇಲೆ ಕೈ ಹಾಕಿ ಅವರನ್ನು ಸಂತೈಸಿದರು. ಆ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

Share this article