ಸ್ಮಶಾನ ಸಮಸ್ಯೆ: ರಸ್ತೆ ಬದಿಯಲ್ಲಿ ಶವ ಸಂಸ್ಕಾರ

| Published : Jun 17 2024, 01:33 AM IST / Updated: Jun 17 2024, 04:59 AM IST

death of newborn baby

ಸಾರಾಂಶ

ಸ್ಮಶಾನ ಇಲ್ಲದ ಕಾರಣ ರಸ್ತೆ ಬದಿಯಲ್ಲಿಯೇ ಶವ ಸಂಸ್ಕಾರ ನೆರವೇರಿಸಿರುವ ಘಟನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತವರು ಜಿಲ್ಲೆ ರಾಮನಗರದಲ್ಲಿ ಭಾನುವಾರ ನಡೆದಿದೆ.

 ರಾಮನಗರ : ಗ್ರಾಮದಲ್ಲಿ ಸ್ಮಶಾನ ಇಲ್ಲದ ಕಾರಣ ರಸ್ತೆ ಬದಿಯಲ್ಲಿಯೇ ಶವ ಸಂಸ್ಕಾರ ನೆರವೇರಿಸಿರುವ ಘಟನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತವರು ಜಿಲ್ಲೆ ರಾಮನಗರದಲ್ಲಿ ಭಾನುವಾರ ನಡೆದಿದೆ.ರಾಮನಗರ ತಾಲೂಕಿನ ಕೂಟಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂನಮುದ್ದನಹಳ್ಳಿ ಗ್ರಾಮದ ರುದ್ರಪ್ಪ(60) ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆದರೆ, ಗ್ರಾಮದಲ್ಲಿ ಅಧಿಕೃತವಾಗಿ ಯಾವುದೇ ಸ್ಮಶಾನ ಇಲ್ಲದ್ದರಿಂದ ದಿಕ್ಕು ತೋಚದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ರಸ್ತೆ ಪಕ್ಕದಲ್ಲಿಯೇ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಇಷ್ಟು ದಿನದವರೆಗೆ ಖಾಸಗಿಯವರ ಜಮೀನಿನಲ್ಲಿ ಗ್ರಾಮಸ್ಥರು ಅಂತ್ಯಸಂಸ್ಕಾರ ನಡೆಸುತ್ತಿದ್ದರು. ಆದರೆ, ಈ ಬಾರಿ ಜಮೀನು ಮಾಲೀಕರು ಅವಕಾಶ ಕೊಡಲಿಲ್ಲ. ಈ ಹಿನ್ನೆಲೆಯಲ್ಲಿ ಬದಲಿ ವ್ಯವಸ್ಥೆ ಮಾಡಲು ಕುಟುಂಬಸ್ಥರು ಬಹಳ ಪ್ರಯತ್ನ ಪಟ್ಟಿದ್ದರು. ಆದರೆ, ಯಾವುದೇ ವ್ಯವಸ್ಥೆಯಾಗಲಿಲ್ಲ. ಮನೆಯಲ್ಲಿ ಹೆಚ್ಚು ಹೊತ್ತು ಶವ ಇಡುವಂತೆಯೂ ಇರಲಿಲ್ಲ. ಹೀಗಾಗಿ ಬೇರೆ ದಾರಿ ಕಾಣದೆ ಕುಟುಂಬಸ್ಥರು, ಗ್ರಾಮಸ್ಥರು ರಸ್ತೆ ಪಕ್ಕದಲ್ಲಿಯೇ ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದ್ದಾರೆ.ಈ ಗ್ರಾಮದಲ್ಲಿ ಸುಮಾರು 250ಕ್ಕೂ ಅಧಿಕ ಕುಟುಂಬಗಳಿದ್ದು, ಇದರಲ್ಲಿ 100 ರಿಂದ 125 ಕುಟುಂಬಗಳಿಗೆ ಸ್ವಂತ ಜಮೀನು ಇಲ್ಲ. ಅಲ್ಲದೆ, ಗ್ರಾಮದಲ್ಲಿ ಯಾವುದೇ ಸ್ಮಶಾನವೂ ಇಲ್ಲ.

ಗ್ರಾಮಸ್ಥರೇ 13 ಗುಂಟೆ ಜಮೀನು ಗುರುತಿಸಿ ಸ್ಮಶಾನಕ್ಕೆ ಅವಕಾಶ ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಖಾಸಗಿ ಜಮೀನು ಮಾಲೀಕರು ಆ ಜಾಗದಲ್ಲಿ ಕಲ್ಲುಗಳನ್ನು ನೆಟ್ಟಿದ್ದರಿಂದ ರಸ್ತೆ ಮತ್ತು ಕಲ್ಯಾಣಿ ಮಾತ್ರ ಉಳಿದುಕೊಂಡಿತು.ಅಲ್ಲದೆ, ಸ್ಮಶಾನಕ್ಕಾಗಿ ಮೀಸಲಿಡುವಂತೆ ಗ್ರಾಮದಲ್ಲಿರುವ ಖರಾಜು ಜಮೀನಿನ ಸರ್ವೆ ನಂಬರ್ ಗಳನ್ನು ಕೊಟ್ಟಿದ್ದರು. ಈ ವಿಚಾರವನ್ನು ಶಾಸಕ ಬಾಲಕೃಷ್ಣ ಅವರ ಗಮನಕ್ಕೂ ತಂದಿದ್ದರು. ಆದರೂ ಸ್ಮಶಾನಕ್ಕೆ ಭೂಮಿ ಕಲ್ಪಿಸುವ ಕೆಲಸ ಆಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ರಿವಾರ್ಡ್ಸ್ ಪಾಯಿಂಟ್ಸ್ ಆಸೆಗೆ ಬಿದ್ದು ₹44 ಸಾವಿರ ಕಳಕೊಂಡ 

ರಾಮನಗರ: ರಿವಾರ್ಡ್ಸ್ ಪಾಯಿಂಟ್ಸ್ ಪಡೆಯುವ ಆಸೆಗೆ ಬಿದ್ದ ವ್ಯಕ್ತಿಯೊಬ್ಬ ₹44 ಸಾವಿರ ಕಳೆದುಕೊಂಡಿರುವ ಘಟನೆ ನಡೆದಿದೆ. ಚನ್ನಪಟ್ಟಣ ತಾಲೂಕು ವಿರುಪಾಕ್ಷಿಪುರ ಹೋಬಳಿ ಕಲಿಕೆರೆ ಗ್ರಾಮದ ಕೆ.ಟಿ.ಶಿವಕುಮಾರ್ ವಂಚನೆಗೊಳಗಾದವರು.

ಗ್ರಾಮೀಮ ಕೂಟ ಸ್ಟಾಪ್ ಎಂಬ ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ SBI Reward.apk ಎಂಬ ಲಿಂಕ್ ಬಂದಿದ್ದು, ಆ ಲಿಂಕ್ ಮುಖಾಂತರ ₹9980 ರಿವಾರ್ಡ್ಸ್ ಪಾಯಿಂಟ್ ಅನ್ನು ಪಡೆಯಬಹುದು ಎಂದು ತಿಳಿಸಿದ್ದರು. ಇದನ್ನು ನಂಬಿದ ಶಿವಕುಮಾರ್ ಆ ಲಿಂಕ್ ಓಪನ್ ಮಾಡಿದಾಗ ಎಸ್‌ಬಿಐ ಯೊನೊ ಆಪ್ ಓಪನ್ ಆಗಿ ಯುಜರ್ ನೇಮ್ ಮತ್ತು ಪಾಸ್ ವರ್ಡ್ ಕೇಳಿದೆ. ಬ್ಯಾಂಕ್ ಖಾತೆಗೆ ನೇರವಾಗಿ ಹಣ ಬರುತ್ತದೆ ಎಂಬ ನಂಬಿ ಯುಜರ್ ನೇಮ್ ಮತ್ತು ಪಾಸ್ ವರ್ಡ್ ಅನ್ನು ಹಾಕಿದ ತಕ್ಷಣ ಖಾತೆಯಿಂದ ₹44 ಸಾವಿರ ಕಡಿತಗೊಂಡಿದೆ. ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿದಾಗ ಬೇರೆ ಖಾತೆಗೆ ಹಣ ವರ್ಗಾವಣೆ ಆಗಿರುವುದಾಗಿ ತಿಳಿಸಿದ್ದಾರೆ. ತಾನು ವಂಚನೆಗೊಂಡಿರುವುದನ್ನು ಅರಿತ ಶಿವಕುಮಾರ್ ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನೆಟ್‌ ಬ್ಯಾಂಕಿಂಗ್‌ಗೆ ಲಾಗಿನ್‌ ಆಗಿ ₹1 ಲಕ್ಷ ಹಣ ದೋಚಿದ್ರು

ರಾಮನಗರ: ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ವಂಚಕರು 1 ಲಕ್ಷ ರುಪಾಯಿ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಘಟನೆ ನಡೆದಿದೆ. ತಾಲೂಕಿನ ಕೂಟಗಲ್ ಹೋಬಳಿ ಚಾಮನಹಳ್ಳಿ ಗ್ರಾಮದ ಸಿದ್ದರಾಜು ಪತ್ನಿ ಧನಲಕ್ಷ್ಮಿ ಹಣ ಕಳೆದುಕೊಂಡವರು. ರಾಮನಗರದಲ್ಲಿರುವ ಕೆನರಾ ಬ್ಯಾಂಕಿನಲ್ಲಿ ಧನಲಕ್ಷ್ಮಿ ಖಾತೆ ಹೊಂದಿದ್ದಾರೆ. ಅವರು ಬ್ಯಾಂಕಿನ ನೆಟ್ ಬ್ಯಾಂಕಿಂಗ್ ಲಾಗಿನ್ ಲಾಗಿನ್ ಆಗಿರುವ ಬಗ್ಗೆ ಮೆಸೇಜ್ ಬಂದಿದೆ. ನಂತರ ಓಟಿಪಿಯೂ ಬಂದಿದ್ದು, ಅದನ್ನು ಯಾರಿಗೂ ಹೇಳಿಲ್ಲ. ಆದರೂ ಬ್ಯಾಂಕ್ ಖಾತೆಯಿಂದ ₹1 ಲಕ್ಷ ಕಡಿತವಾಗಿರುವುದಾಗಿ ಮೊಬೈಲ್‌ಗೆ ಮೆಸೇಜ್ ಬಂದಿದೆ. ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಖಾತೆಯಿಂದ ಹಣ ವರ್ಗಾವಣೆಯಾಗಿರುವುದನ್ನು ತಿಳಿಸಿದ್ದಾರೆ. ಧನಲಕ್ಷ್ಮಿ ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.