ದರ್ಶನ್‌ ಗ್ಯಾಂಗ್‌ ಅಳಿಸಿದ್ದ ರಕ್ತದ ಕಲೆ ಪತ್ತೆಗೆ ಲೂಮಿನಾರ್‌ ಟೆಸ್ಟ್‌!

| Published : Jun 16 2024, 08:02 AM IST

Darshan Thoogudeepa Kannad Star

ಸಾರಾಂಶ

ರಕ್ತದ ಕಲೆಗಳು ಸೇರಿದಂತೆ ಇತರೆ ಪುರಾವೆಗಳ ಸಂಗ್ರಹಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್‌ಎಲ್‌) ತಜ್ಞರ ಸಹಕಾರದಲ್ಲಿ ಪೊಲೀಸರು ಲೂಮಿನಾರ್ ಪರೀಕ್ಷೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು  : ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ರಾಜರಾಜೇಶ್ವರಿನಗರದ ಪಟ್ಟಣಗೆರೆ ಶೆಡ್‌ನಲ್ಲಿ ಹತ್ಯೆಗೈದ ಬಳಿಕ ಅಳಿಸಿ ಹಾಕಿದ್ದ ರಕ್ತದ ಕಲೆಗಳು ಸೇರಿದಂತೆ ಇತರೆ ಪುರಾವೆಗಳ ಸಂಗ್ರಹಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್‌ಎಲ್‌) ತಜ್ಞರ ಸಹಕಾರದಲ್ಲಿ ಪೊಲೀಸರು ಲೂಮಿನಾರ್ ಪರೀಕ್ಷೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹ ಸಾಗಾಣಿಕೆಗೆ ಬಳಸಿದ್ದ ಸ್ಕಾರ್ಪಿಯೋ ಕಾರು ಹಾಗೂ ಶೆಡ್‌ನಲ್ಲಿ ಮೃತನ ಮೇಲೆ ಹಲ್ಲೆ ನಡೆಸಲು ಬಳಸಿದ್ದ ದೊಣ್ಣೆಗಳಲ್ಲಿ ಅಂಟಿದ್ದ ರಕ್ತದ ಕಲೆಗಳನ್ನು ಎಫ್‌ಎಸ್‌ಎಲ್‌ ತಜ್ಞರು ಸಂಗ್ರಹಿಸಿದ್ದರು. ನಂತರ ಪಟ್ಟಣಗೆರೆ ಶೆಡ್‌ನಲ್ಲಿ ಸಾಕ್ಷ್ಯಗಳನ್ನು ಅಳಿಸಿ ಹಾಕಿದ್ದ ಸ್ಥಳದಲ್ಲಿ ಸಂಗ್ರಹಿಸಲಾದ ವಸ್ತುಗಳಿಗೆ ಹೋಲಿಕೆ ಮಾಡಿ ಎಫ್‌ಎಸ್‌ಎಲ್ ತಜ್ಞರು ವರದಿ ಸಲ್ಲಿಸಲಿದ್ದಾರೆ. ಇಲ್ಲಿ ನಾಶಗೊಳಿಸಿದ್ದ ರಕ್ತದ ಕಲೆಗಳನ್ನು ಲೂಮಿನಾರ್ ಪರೀಕ್ಷೆಯಲ್ಲಿ ಪತ್ತೆ ಹಚ್ಚಬಹುದಾಗಿದೆ.

ಏನಿದು ಲೂಮಿನಾರ್‌ ಟೆಸ್ಟ್‌?: ಹಿಟ್ ಅಂಡ್ ರನ್ ಅಪಘಾತ ಪ್ರಕರಣದಲ್ಲಿ ಲೂಮಿನಾರ್ ಪರೀಕ್ಷೆಯನ್ನು ಪೊಲೀಸರು ಹೆಚ್ಚು ಬಳಸುತ್ತಾರೆ. ಕೆಲ ಕೊಲೆ ಕೃತ್ಯಗಳಲ್ಲಿ ಸಹ ಈ ಪರೀಕ್ಷೆ ನಡೆದಿದೆ. ವಾಹನಗಳ ಚಕ್ರಗಳಿಗೆ ಅಂಟಿದ ರಕ್ತವನ್ನು ಮೃತನ ರಕ್ತಕ್ಕೆ ಹೋಲಿಕೆ ಮಾಡಿ ಎಫ್‌ಎಸ್ಎಲ್ ತಜ್ಞರು ವರದಿ ನೀಡುತ್ತಾರೆ. ಈ ಪರೀಕ್ಷೆಯಲ್ಲಿ ರಕ್ತ ಮಾದರಿ ಹೋಲಿಕೆಯಾದರೆ ಮಹತ್ವದ ಪುರಾವೆಯಾಗಲಿದೆ.

ಇದೇ ರೀತಿ ಲೂಮಿನಾರ್ ವರದಿ ಆಧರಿಸಿ ನಾಗರಬಾವಿ ಹೊರವರ್ತುಲ ರಸ್ತೆಯಲ್ಲಿ ನಡೆದಿದ್ದ ಹಿಟ್‌ ಅಂಡರ್‌ ರನ್‌ ಪ್ರಕರಣದಲ್ಲಿ ಮೂರು ತಿಂಗಳ ಬಳಿಕ ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದರು. ಈಗ ರೇಣುಕಾಸ್ವಾಮಿ ಕೊಲೆ ಕೃತ್ಯದಲ್ಲಿ ಕೂಡ ಲೂಮಿನಾರ್ ಪರೀಕ್ಷೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಎನ್‌ಐಎ, ಸಿಬಿಐ ವಕೀಲ ಪ್ರಸನ್ನ ದರ್ಶನ್‌ ಕೇಸಲ್ಲಿ ವಿಶೇಷ ಅಭಿಯೋಜಕ: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಶೇಷ ಅಭಿಯೋಜಕರನ್ನಾಗಿ ಭಯೋತ್ಪಾದಕ ಕೃತ್ಯಗಳ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಎಐ) ಪ್ರತಿನಿಧಿಸುವ ಹಿರಿಯ ವಕೀಲ ಪಿ.ಪ್ರಸನ್ನಕುಮಾರ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಶನಿವಾರ ಆದೇಶಿಸಿದೆ. ಹಾಗೇ ಎಸ್‌ಪಿಪಿ ಸಹಾಯಕರಾಗಿ ವಕೀಲ ಸಿ.ಸಚಿನ್‌ ಅವರನ್ನು ಸರ್ಕಾರ ನಿಯೋಜಿಸಿದೆ. ರಾಷ್ಟ್ರ ಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಮುಗಿಸಿ ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ದೊರಕಿಸಲು ಸರ್ಕಾರ ಮುಂದಾಗಿದೆ. ಈ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಅ‍ವರ ಪ್ರಿಯತಮೆ ಪವಿತ್ರಾಗೌಡ ಸೇರಿದಂತೆ 16 ಮಂದಿ ಬಂಧನವಾಗಿದೆ. ಹೀಗಾಗಿಯೇ ಎನ್‌ಐಎ, ಸಿಬಿಐ ಹಾಗೂ ಇಡಿ ಎಸ್‌ಪಿಪಿ ಆಗಿರುವ ಪ್ರಸನ್ನ ಕುಮಾರ್ ಅವರನ್ನೇ ನಟ ದರ್ಶನ್ ಗ್ಯಾಂಗ್‌ ವಿರುದ್ಧ ವಾದಿಸಲು ಸರ್ಕಾರ ನೇಮಿಸಿದೆ.