ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮನೆಯಲ್ಲಿ ಕುಳಿತೇ ಲಕ್ಷ ಲಕ್ಷ ರುಪಾಯಿ ಸಂಪಾದಿಸಬಹುದು ಎಂದು ಆಸೆ ತೋರಿಸಿ ಜನರಿಗೆ ಟೋಪಿ ಹಾಕಿ ಹಣ ದೋಚುತ್ತಿದ್ದ ವಿದೇಶಿ ಮೂಲದ ಸೈಬರ್ ವಂಚಕನನ್ನು ಹಿಡಿದು ಗೋವಿಂದಪುರ ಠಾಣೆ ಪೊಲೀಸರಿಗೆ ಆಟೋ ಚಾಲಕನೊಬ್ಬ ಒಪ್ಪಿಸಿದ್ದಾನೆ.ತೈವಾನ್ ದೇಶದ ಸುಸನ್ ಲಿನ್ ಅಲಿಯಾಸ್ ಡೇವಿಡ್ ಚಾಕ್ಲಿಂಗ್ ಬಂಧಿತನಾಗಿದ್ದು, ಆರೋಪಿಯಿಂದ ದಾಖಲೆಗಳು ಹಾಗೂ ಹಣ ಜಪ್ತಿ ಮಾಡಲಾಗಿದೆ.
ನಾಗವಾರದ ಆಟೋ ಚಾಲಕ ಸೈಯದ್ ಮುದಾಸೀರ್ ನಾಜರ್ ಶೌರ್ಯ ಮೆರೆದಿದ್ದು, ಅವರಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಅಭಿನಂದಿಸಿದ್ದಾರೆ. ಕೆಲ ದಿನಗಳಿಂದ ತನ್ನ ಆಟೋದಲ್ಲಿ ಪ್ರಯಾಣಿಕನಾಗಿದ್ದ ಡೇವಿಡ್ ನಡವಳಿಕೆ ಬಗ್ಗೆ ಸೈಯದ್‌ಗೆ ಅನುಮಾನ ಮೂಡಿತ್ತು. ಹೀಗಿರುವಾಗ ಮೂರು ದಿನಗಳ ಹಿಂದೆ ವಂಚನೆ ಕೃತ್ಯದಲ್ಲಿ ಸಂಪಾದಿಸಿದ ಹಣವನ್ನು ಪಡೆಯಲು ಕಮಿಷನ್ ಆಸೆ ತೋರಿಸಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ಸೈಯದ್‌ಗೆ ಡೇವಿಡ್ ಹೇಳಿದ್ದ.ಈ ಮಾತಿನಿಂದ ಮತ್ತಷ್ಟು ಶಂಕೆಗೊಂಡು ತಕ್ಷಣವೇ ಗೋವಿಂದಪುರ ಠಾಣೆ ಪೊಲೀಸರಿಗೆ ವಿದೇಶಿ ಪ್ರಯಾಣಿಕನ ಬಗ್ಗೆ ಆಟೋ ಚಾಲಕ ಮಾಹಿತಿ ನೀಡಿದ್ದಾನೆ. ಈ ವಿಚಾರ ತಿಳಿದು ಜಾಗೃತರಾದ ಪೊಲೀಸರು, ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸೈಬರ್ ವಂಚನೆ ಕೃತ್ಯಗಳು ಬಯಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೇಗೆ ವಂಚನೆ?:ಇದೇ ವರ್ಷದ ಆಗಸ್ಟ್‌ನಲ್ಲಿ ತೈವಾನ್‌ನಿಂದ ಚೀನಾದ ಸ್ನೇಹಿತನ ಮೂಲಕ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಡೇವಿಡ್, ಬಳಿಕ ನಗರಕ್ಕೆ ಬಂದು ಕೋರಮಂಗಲ ಸಮೀಪ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದಿದ್ದ. ಸಾಮಾಜಿಕ ಜಾಲತಾಣಗಳು ಸೇರಿ ಆನ್‌ಲೈನ್‌ನಲ್ಲಿ ಕೆಲಸದ ಆಫರ್ ನೀಡುವ ಪೋಸ್ಟ್‌ಗಳನ್ನು ಆತ ಹಾಕಿ ವೆಬ್‌ಸೈಟ್‌ಗೆ ಲಿಂಕ್ ಶೇರ್ ಮಾಡುತ್ತಿದ್ದ. ಮನೆಯಲ್ಲಿ ಕುಳಿತೇ ಲಕ್ಷ ಲಕ್ಷ ರು. ಸಂಪಾದಿಸಬಹುದು ಎಂದು ಡೇವಿಡ್ ಆಫರ್ ಕೊಟ್ಟಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ಜನರನ್ನು ತನ್ನ ಮೋಸ ಜಾಲಕ್ಕೆ ಬೀಳಿಸಿಕೊಂಡು ಆತ ವಂಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲಿ ಆತ ಟಾಸ್ಕ್ ಕೊಡುತ್ತಿದ್ದ. ಈ ಟಾಸ್ಕ್ ಪೂರ್ಣಗೊಳಿಸಿದರೆ ಇಂತಿಷ್ಟು ಪಾಯಿಂಟ್ಸ್ ಆಧರಿಸಿ ಡೇವಿಡ್ ಹಣ ಕೊಡುವುದಾಗಿ ಹೇಳಿದ್ದ. ಅಂತೆಯೇ ಆರಂಭದಲ್ಲಿ ₹10-20 ಸಾವಿರ ಹಾಕಿದ್ದಾನೆ. ಆಗ ಉತ್ತೇಜಿತರಾಗಿ ಜನರು ಮುಂದುವರೆದಾಗ ಶುಲ್ಕದ ನೆಪದಲ್ಲಿ ಯಮಾರಿಸಿ ಹಣ ಲಪಟಾಯಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.5 ತಿಂಗಳಿಂದ ಒಂದೇಆಟೋ ಬುಕ್ ಮಾಡ್ತಿದ್ದ
ನಗರದಲ್ಲಿ ಸುತ್ತಾಡಲು ಸೈದಯ್ ಆಟೋವನ್ನೇ ಕೋರಮಂಗಲದಲ್ಲಿ ನೆಲೆಸಿದ್ದ ಡೇವಿಡ್ ಬುಕ್ ಮಾಡಿದ್ದ. ಒಂದು ಬಾರಿ ಸೈಯದ್ ಆಟೋ ಏರಿದ್ದ ಆರೋಪಿ, ಬಳಿಕ ಆತನಿಂದ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ. ಹೀಗೆ ಕಳೆದ ಐದು ತಿಂಗಳಿಂದ ಆಟೋ ಚಾಲಕನಿಗೆ ಆರೋಪಿ ಖಾಯಂ ಗಿರಾಕಿಯಾಗಿದ್ದ. ಆದರೆ ಪ್ರಯಾಣದ ವೇಳೆ ಆಗಾಗ್ಗೆ ಎಟಿಎಂಗಳಿಗೆ ಹೋಗಿ ಎರಡ್ಮೂರು ಲಕ್ಷದವರೆಗೆ ಹಣ ಪಡೆದು ಬರುತ್ತಿದ್ದ ಡೇವಿಡ್ ಮೇಲೆ ಸೈಯದ್‌ಗೆ ಶಂಕೆ ಮೂಡಿದೆ. ಹೀಗಿರುವಾಗ ಸೈಯದ್‌ಗೆ ‘ನಿಮ್ಮ ಎಟಿಎಂ ಕಾರ್ಡ್‌ನಲ್ಲಿ ವಿತ್ ಡ್ರಾ ಲಿಮಿಟ್ಸ್ ಎಷ್ಟಿದೆ. ನನಗೆ ಬ್ಯಾಂಕ್ ಖಾತೆಗಳಿಂದ ಹಣ ಡ್ರಾ ಮಾಡಲು ಸಹಾಯ ಮಾಡಿದರೆ ಶೇಕಡ 1ರಿಂದ 5 ಕಮಿಷನ್ ಕೊಡುವುದಾಗಿ ಆರೋಪಿ ಆಫರ್ ನೀಡಿದ್ದ. ಇದರಿಂದ ಶಂಕೆಗೊಂಡ ಸೈಯದ್, ತಕ್ಷಣವೇ ಗೋವಿಂದಪುರ ಠಾಣೆ ಪೊಲೀಸರಿಗೆ ತಿಳಿಸಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.10 ರಾಜ್ಯಗಳಜನರಿಗೆ ಟೋಪಿ
ಕೆಲಸ ಕೊಡಿಸುವ ನೆಪದಲ್ಲಿ ಉತ್ತರ ಭಾರತದ 10 ರಾಜ್ಯಗಳಲ್ಲಿ ಜನರಿಗೆ ವಂಚಿಸಿದ ಬಗ್ಗೆ ಡೇವಿಡ್ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಗೋವಿಂದಪುರ ಹಾಗೂ ಮಾರತ್ತಹಳ್ಳಿ ಠಾಣೆಗಳಲ್ಲಿ ಆತನ ಕೃತ್ಯ ಎಸಗಿರುವುದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.