ವಿಧಾನಸೌಧ ಸಚಿವಾಲಯದ ಭದ್ರತಾ ವ್ಯವಸ್ಥೆ ಬದಲಾವಣೆಗೆ ಡಿಪಿಎಆರ್‌ ಕಾರ್ಯದರ್ಶಿ ಆಕ್ಷೇಪ

| N/A | Published : Feb 01 2025, 01:33 AM IST / Updated: Feb 01 2025, 04:29 AM IST

Vidhan soudha

ಸಾರಾಂಶ

ವಿಧಾನಸೌಧದ ಸಚಿವಾಲಯದ ಭದ್ರತಾ ವ್ಯವಸ್ಥೆಯನ್ನು ಪರಿಷ್ಕರಿಸಿ ಮುಖ್ಯ ಭದ್ರತಾ ಅಧಿಕಾರಿ (ಇನ್ಸ್‌ಪೆಕ್ಟರ್) ಹುದ್ದೆ ರದ್ದುಪಡಿಸಿದ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್‌ ಅವರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿಗಳು ಪತ್ರ ಬರೆದು ತೀವ್ರ ಅಸಮಾಧಾನ  

 ಬೆಂಗಳೂರು : ವಿಧಾನಸೌಧದ ಸಚಿವಾಲಯದ ಭದ್ರತಾ ವ್ಯವಸ್ಥೆಯನ್ನು ಪರಿಷ್ಕರಿಸಿ ಮುಖ್ಯ ಭದ್ರತಾ ಅಧಿಕಾರಿ (ಇನ್ಸ್‌ಪೆಕ್ಟರ್) ಹುದ್ದೆ ರದ್ದುಪಡಿಸಿದ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್‌ ಅವರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿಗಳು ಪತ್ರ ಬರೆದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಅಲ್ಲದೆ ಡಿಪಿಎಆರ್‌ಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ಮಾಡುವ ಮುನ್ನ ಕಡ್ಡಾಯವಾಗಿ ಡಿಪಿಎಆರ್‌ ಸಹಮತಿಯನ್ನು ಪಡೆಯುವಂತೆ ಕಾರ್ಯದರ್ಶಿಗಳು ಹೇಳಿದ್ದಾರೆ. ಇನ್ನು ಡಿಜಿಪಿ ಅವರಿಗೆ ಕಾರ್ಯದರ್ಶಿಗಳು ಬರೆದಿರುವ ಪತ್ರವು ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ. ಕೆಲ ದಿನಗಳ ಹಿಂದೆ ಸಚಿವಾಲಯದ ಭದ್ರತೆ ಸಂಬಂಧ ಡಿಪಿಎಆರ್‌ಗೆ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿ ಹುದ್ದೆಯನ್ನು ಡಿಜಿಪಿ ಅಲೋಕ್‌ ಮೋಹನ್‌ ಪರಿಷ್ಕರಿಸಿದ್ದರು. ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿರುವ ಡಿಪಿಎಆರ್‌ ಕಾರ್ಯದರ್ಶಿ ಜಿ.ಸತ್ಯವತಿ ಅವರು, ಕೂಡಲೇ ಭದ್ರತಾ ವಿಭಾಗದ ಹುದ್ದೆಗಳ ರದ್ದತಿ ಆದೇಶ ಹಿಂಪಡೆದು ಹಳೇ ವ್ಯವಸ್ಥೆ ಮುಂದುವರೆಸುವಂತೆ ಕೋರಿದ್ದಾರೆ.

ಸಚಿವಾಲಯಕ್ಕೆ ಕಾನ್‌ಸ್ಟೇಬಲ್‌ಗಳಷ್ಟೇ ಭದ್ರತೆ ಎಂದ ಡಿಜಿಪಿ:

2019ರಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್‌)ಗೆ ತತ್ಸಮಾನ ವೃಂಧದ ಅಧಿಕಾರಿಯನ್ನು ನಿಯೋಜನೆ ಮಾಡಲಾಗಿತ್ತು. ಅಂತೆಯೇ ಮುಖ್ಯ ಭದ್ರತಾ ಅಧಿಕಾರಿ (ಸಿವಿಲ್ ಪೊಲೀಸ್ ಇನ್ಸ್‌ಪೆಕ್ಟರ್‌), ಆರು ಭದ್ರತಾ ಅಧಿಕಾರಿಗಳು ( ಸಿವಿಎಲ್‌ ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌ಗಳು), ಮೂವರು ಸಹಾಯಕ ಭದ್ರತಾ ಅಧಿಕಾರಿ (ಸಿವಿಎಲ್‌ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ಗಳು) ಹಾಗೂ 14 ಕರ್ತವ್ಯಾಧಿಕಾರಿ (ಸಿವಿಎಲ್ ಹೆಡ್ ಕಾನ್‌ಸ್ಟೇಬಲ್‌ಗಳು) ಸೇರಿ 24 ಹುದ್ದೆಗಳನ್ನು ಮಂಜೂರು ಆಗಿದ್ದವು. ಆದರೆ ಈ ವ್ಯವಸ್ಥೆಯನ್ನು ಪರಿಷ್ಕರಿಸಿದ ಡಿಜಿಪಿ ಅವರು, ಇನ್ಸ್‌ಪೆಕ್ಟರ್‌ ಹಾಗೂ ಪಿಎಸ್‌ಐ ಹುದ್ದೆಗಳನ್ನು ರದ್ದುಗೊಳಿಸಿದ್ದಾರೆ. ಅಲ್ಲದೆ ಹೆಡ್‌ ಕಾನ್‌ಸ್ಟೇಬಲ್‌ ಹುದ್ದೆಗಳನ್ನು ಕಾನ್‌ಸ್ಟೇಬಲ್ ಹುದ್ದೆಗೆ ಪರಿವರ್ತಿಸಲಾಗಿದೆ. ಹೊಸ ಆದೇಶದ್ವನ್ವಯ ಮುಖ್ಯಭದ್ರತಾ ಅಧಿಕಾರಿ ಹಾಗೂ ಭದ್ರತಾ ಅಧಿಕಾರಿ ಹುದ್ದೆಗಳು ರದ್ದುಗೊಂಡಿದ್ದು, ಮೂವರು ಎಎಸ್‌ಐಗಳು ಹಾಗೂ 14 ಕಾನ್‌ಸ್ಟೇಬಲ್‌ಗಳು ಮಾತ್ರ ನಿಯುಕ್ತಿಗೊಂಡಿದ್ದಾರೆ ಎನ್ನಲಾಗಿದೆ.

ಸಚಿವಾಲಯ ಪ್ರದೇಶ ಅತ್ಯಂತ ಸೂಕ್ಷ್ಮ ವಲಯ-ಕಾರ್ಯದರ್ಶಿ:

ಸಚಿವಾಲಯದ ಭದ್ರತೆ ಸಂಬಂಧ ಪೊಲೀಸ್ ಇಲಾಖೆಯಿಂದ ನಿಯೋಜಿಸುವ ಅಧಿಕಾರಿ ಮತ್ತು ಸಿಬ್ಬಂದಿ ನೇರವಾಗಿ ಡಿಪಿಎಆರ್‌ಗೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಸಚಿವಾಲಯವು ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳನ್ನು ಒಳಗೊಂಡಿದ್ದು, ಅತಿಸೂಕ್ಷ್ಮ ಪ್ರದೇಶವಾಗಿದೆ. ಈ ವಲಯವು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಇಲಾಖಾ ಮುಖ್ಯಸ್ಥರುಗಳಾದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮಾತ್ರವಲ್ಲದೆ ಆಯೋಗಗಳ ಅಧ್ಯಕ್ಷರು (ಸರ್ವೋಚ್ಛ ಹಾಗೂ ಉಚ್ಛ ನ್ಯಾಯಾಲಯಗಳ ನಿವೃತ್ತರ ನ್ಯಾಯಮೂರ್ತಿಗಳು) ಕಾರ್ಯವ್ಯಾಪ್ತಿ ಒಳಗೊಂಡಿದೆ. ಈ ಮೂರು ಕಟ್ಟಡಗಳ ಆಂತರಿಕ ಭದ್ರತೆಯು ಭದ್ರತಾ ವಿಭಾಗದ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆಂತರಿಕ ಭದ್ರತೆಗೆ ನುರಿತ ಅಧಿಕಾರಿ ಮತ್ತು ಸಿಬ್ಬಂದಿ ಅತ್ಯಗತ್ಯವಾಗಿರುತ್ತದೆ ಎಂದು ಪತ್ರದಲ್ಲಿ ಕಾರ್ಯದರ್ಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಹೀಗಿದ್ದರೂ ಪ್ರಸುತ್ತವಿರುವ ಒಂದೇ ಒಂದು ಪೊಲೀಸ್ ಇನ್ಸ್‌ಪೆಕ್ಟರ್‌ ಹುದ್ದೆಯನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ಹೆಡ್ ಕಾನ್‌ ಸ್ಟೇಬಲ್‌ಗಳ ಹುದ್ದೆಗಳಿಗೆ ಕಾನ್‌ಸ್ಟೇಬಲ್‌ಗಳ ಹುದ್ದೆಗಳಾಗಿ ಪರಿಷ್ಕರಿಸಲಾಗಿದೆ. ಆದರೆ ಸಚಿವಾಲಯವು ಸೂಕ್ಷ್ಮ ಪ್ರದೇಶದ ಜಾಗದಲ್ಲಿ ಕಾರ್ಯನಿರ್ವಹಿಸಲು ಸೇವಾ ಹಿರಿತನ, ಜವಾಬ್ದಾರಿ ಮತ್ತು ಅನುಭವವನ್ನು ಹೊಂದಿರುವ ಸಿಬ್ಬಂದಿ ಅತ್ಯಾವಶ್ಯಕತೆ ಇರುತ್ತದೆ. ಹೀಗಾಗಿ ಎಚ್‌ಸಿ ಹುದ್ದೆಗಳನ್ನು ಮುಂದುವರೆಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯ ಪರಿಷ್ಕರಣೆ ರದ್ದುಪಡಿಸಿ ಹಳೇ ವ್ಯವಸ್ಥೆಯನ್ನು ಮುಂದುವರೆಸಬೇಕು ಹಾಗೂ ಮುಂದಿನ ದಿನಗಳಲ್ಲಿ ಡಿಪಿಎಆರ್‌ಗೆ ಸಂಬಂಧಿಸಿದ ಪೊಲೀಸ್ ಇಲಾಖೆಯಿಂದ ಬದಲಾವಣೆ ಮಾಡುವಾಗ ಡಿಪಿಎಆರ್‌ ಸಹಮತಿ ಸಹ ಕಡ್ಡಾಯವಾಗಿ ಪಡೆಯುವಂತೆ ಕಾರ್ಯದರ್ಶಿ ಕೋರಿದ್ದಾರೆ.