ಸಾರಾಂಶ
ಬೆಂಗಳೂರು : ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಬಳಿಕ ಭೇಟಿಯಾಗಲು ವಿದೇಶದಿಂದ ಬಂದಿದ್ದು, ದೆಹಲಿ ವಿಮಾನ ನಿಲ್ದಾಣದಲ್ಲಿ ಕೊಂಚ ಸಮಸ್ಯೆಯಾಗಿದೆ ಎಂದು ಮಹಿಳಾ ಟೆಕಿಯಿಂದ 28.75 ಲಕ್ಷ ರು. ಹಣ ಪಡೆದು ವಂಚಿಸಿದ ಆರೋಪದಡಿ ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ.ಆರ್.ಪುರದ 34 ವರ್ಷದ ಪುಷ್ಪ ಕುಮಾರಿ (ಹೆಸರು ಬದಲಿಸಲಾಗಿದೆ) ವಂಚನೆಗೆ ಒಳಗಾದ ಟೆಕಿ. ಇವರು ನೀಡಿದ ದೂರಿನ ಮೇರೆಗೆ ರೋಶನ್ ಶಂಕರ್ ಎಂಬಾತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66(ಸಿ), ಬಿಎನ್‌ಎಸ್ ಕಲಂ 318(4), 319(2) ಅಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?:
ದೂರುದಾರೆ ಪುಷ್ಪ ಕುಮಾರಿ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾಗಲು ವರನ ಹುಡುಕಾಟದಲ್ಲಿದ್ದರು. ಹೀಗಾಗಿ ಮ್ಯಾಟ್ರಿಮೊನಿ ಶಾದಿ ಡಾಟ್ ಕಾಮ್ ವೆಬ್‌ಸೈಟ್‌ನಲ್ಲಿ ತಮ್ಮ ವಿವರಗಳನ್ನು ಹಾಕಿದ್ದಾರೆ. ಡಿ.14ರಂದು ಡಾ.ರೋಶನ್ ಶಂಕರ್ ಹೆಸರಿನ ಅಪರಿಚಿತ ವ್ಯಕ್ಯಿ ಇ-ಮೇಲ್‌ನಿಂದ ಪುಷ್ಪ ಕುಮಾರಿ ಇ-ಮೇಲ್‌ಗೆ ತನ್ನ ವಿವರ ಕಳುಹಿಸಿದ್ದಾನೆ. ಮದುವೆಯಾಗಲು ಆಸಕ್ತನಾಗಿರುವುದಾಗಿ ತಿಳಿಸಿದ್ದಾನೆ. ಬಳಿಕ ಇಬ್ಬರು ಪರಸ್ಪರ ಪರಿಚಿತವಾಗಿ ಮೊಬೈಲ್ ಸಂದೇಶ, ವಾಟ್ಸಾಪ್ ಚಾಟ್, ವಾಯ್ಸ್ ಕಾಲ್ ಮುಖಾಂತರ ಮಾತನಾಡಿದ್ದಾರೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಸಮಸ್ಯೆ:
ಈ ವೇಳೆ ಆರೋಪಿ ರೋಶನ್ ಶಂಕರ್ ತಾನು ಅಮೆರಿಕದಲ್ಲಿ ವೈದ್ಯನಾಗಿದ್ದು, ಭಾರತಕ್ಕೆ ಬಂದು ನೆಲೆಸುತ್ತೇನೆ. ಮದುವೆ ಬಳಿಕ ಭಾರತದಲ್ಲೇ ಆಸ್ಪತ್ರೆ ತೆರೆದು ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾನೆ. ಜ.13ರಂದು ನಿಮ್ಮನ್ನು ಭೇಟಿಯಾಗಲು ಭಾರತಕ್ಕೆ ಬರುತ್ತಿರುವುದಾಗಿ ಪುಷ್ಪ ಕುಮಾರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾನೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಸಮಸ್ಯೆಯಾಗಿದ್ದು, ಮುಂದಿನ ತನಿಖೆಗೆ ಹಣದ ಅಗತ್ಯವಿದೆ ಎಂದು ಹೇಳಿದ್ದಾನೆ.
ವಿವಿಧ ಹಂತಗಳಲ್ಲಿ 28.75 ಲಕ್ಷ ರು. ವರ್ಗಾವಣೆ:
ಆತನ ಮಾತು ನಂಬಿದ ಪುಷ್ಪ ಕುಮಾರಿ ಆತ ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ವಿವಿಧ ಹಂತಗಳಲ್ಲಿ ಒಟ್ಟು 28.75 ಲಕ್ಷ ರು. ಹಣ ವರ್ಗಾಯಿಸಿದ್ದಾರೆ. ಬಳಿಕ ಆರೋಪಿ ರೋಶನ್ ಶಂಕರ್ ಸಂಪರ್ಕ ಕಡಿತಗೊಳಿಸಿದ್ದಾನೆ. ಪುಷ್ಪ ಕುಮಾರಿ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ತಾನು ಸೈಬರ್ ವಂಚಕನ ಬಲೆಗೆ ಬಿದ್ದು ಹಣ ಕಳೆದುಕೊಂಡಿರುವುದು ಅರಿವಿಗೆ ಬಂದಿದೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ವಂಚಕನ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.