ಸಾರಾಂಶ
ಬೆಂಗಳೂರು : ನಗರ ಸಂಚಾರ ಪೊಲೀಸರು ಕಳೆದ 10 ತಿಂಗಳ ಅವಧಿಯಲ್ಲಿ ನಡೆಸಲಾದ ವಿಶೇಷ ಕಾರ್ಯಾಚರಣೆ ವೇಳೆ ಮದ್ಯ ಸೇವಿಸಿ ಶಾಲಾ ವಾಹನಗಳ ಚಾಲನೆ ಮಾಡಿದ 120 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾ ವಾಹನಗಳ ಚಾಲಕರು ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದರ ವಿರುದ್ಧ ಕಳೆದ 10 ತಿಂಗಳಲ್ಲಿ 12 ಬಾರಿ ವಿಶೇಷ ಕಾರ್ಯಾಚರಣೆ ಕೈಗೊಂಡು ಸುಮಾರು 20 ಸಾವಿರಕ್ಕೂ ಅಧಿಕ ಶಾಲಾ ವಾಹನಗಳ ಚಾಲಕರನ್ನು ತಪಾಸಣೆ ಮಾಡಲಾಗಿದೆ. ಈ ಪೈಕಿ ಮದ್ಯ ಸೇವಿಸಿ ಶಾಲಾ ವಾಹನ ಚಲಾಯಿಸಿದ 120 ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ರಹದಾರಿ ರದ್ದು ಕೋರಿ ಪತ್ರ:
ಪಾನಮತ್ತ ಚಾಲಕರ ವಿರುದ್ಧ ಪ್ರಕರಣ ದಾಖಲಿಸುವುದರ ಜತೆಗೆ ಅವರ ಚಾಲನಾ ಪರವಾನಗಿ(ಡಿಎಲ್) ಅಮಾನತುಗೊಳಿಸಲು ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿದೆ. ಇತ್ತೀಚೆಗೆ ಶಾಲಾ ವಾಹನಗಳ ರಹದಾರಿ(ಪರ್ಮಿಟ್) ರದ್ದುಗೊಳಿಸಲು ಸಾರಿಗೆ ಇಲಾಖೆಗೆ ಪತ್ರವನ್ನೂ ಬರೆಯಲಾಗಿದೆ ಎಂದರು. ಶಾಲಾ ವಾಹನಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದೊಯ್ಯಲಾಗುತ್ತಿದೆ. ಇದರ ವಿರುದ್ಧವೂ ನಗರದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ಸಂಬಂಧ ಶಾಲಾ ಆಡಳಿತ ಮಂಡಳಿಗೂ ನೋಟಿಸ್ ನೀಡಲಾಗುತ್ತಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮುಂದಿನ ದಿನಗಳಲ್ಲಿಯೂ ಈ ವಿಶೇಷ ಕಾರ್ಯಾಚರಣೆ ಮುಂದುವರೆಸುವುದಾಗಿ ಎಂ.ಎನ್.ಅನುಚೇತ್ ಹೇಳಿದರು.
ಡಿಎಲ್ ಇಲ್ಲದೆ ವಾಹನ ಚಾಲನೆ: ಮದ್ಯ ಸೇವಿಸಿ ವಾಹನ ಚಲಾಯಿಸುವವರ ಪೈಕಿ ಚಾಲನಾ ಪರವಾನಗಿ(ಡಿಎಲ್) ಇಲ್ಲದೆ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮದ್ಯ ಸೇವಿಸಿ, ಡಿಎಲ್ ಇಲ್ಲದೆ ವಾಹನ ಚಲಾಯಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತಿದೆ. ಭಾನುವಾರ ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ಎಂ.ಎನ್.ಅನುಚೇತ್ ತಿಳಿಸಿದರು.