ಸಾರಾಂಶ
ಬೆಂಗಳೂರು ದಕ್ಷಿಣ: ತನ್ನ ಪ್ರೇಯಸಿಯ ಜೊತೆ ವಿಲಾಸಿ ಜೀವನ ನಡೆಸುವ ಸಲುವಾಗಿ ಹಾಗೂ ಪ್ರೇಯಸಿಯ ಪೋಷಕರ ಆಸ್ಪತ್ರೆ ವೆಚ್ಚಗಳನ್ನು ಪೂರೈಸಲು ಬೈಕ್ ಕಳ್ಳತನ ಮತ್ತು ಚಿನ್ನದ ಸರಗಳನ್ನು ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಜಿಗಣಿ ಠಾಣಾ ಪೋಲಿಸರು ಬಂಧಿಸಿದ್ದಾರೆ.
ಸೈಯದ್ ಅಲಿ ಬಾಳಸಾಹೇಬ ನಡಾಫ್ (25) ಬಂಧಿತ ಆರೋಪಿ. ಆರೋಪಿಯು ಮೂಲತಃ ಗದಗ ಜಿಲ್ಲೆಯ ಲಕ್ಷೇಶ್ವರದ ಹುಲೂರು ಗ್ರಾಮದ ನಿವಾಸಿಯಾಗಿದ್ದು, ಬೆಂಗಳೂರಿನ ಜಯನಗರದ ಸರಸ್ವತಿ ಪಿಜಿಯಲ್ಲಿದ್ದುಕೊಂಡು ನೃತ್ಯ ಸಂಯೋಜಕರಾಗಿ ಕೆಲಸ ಮಾಡಿಕೊಂಡಿದ್ದ. ಆರೋಪಿಯು ಹರ್ಷವರ್ಧನ್ ಎಂದು ಹೆಸರು ಬದಲಾಯಿಸಿಕೊಂಡು ಪಿಜಿಯಲ್ಲಿ ನೆಲೆಸಿದ್ದು, ಜಿಗಣಿ ಹೋಬಳಿಯ ಸತ್ತಾರ್ ಸಾಬ್ ದಿಣ್ಣೆಯಲ್ಲಿ ರತ್ನಮ್ಮ ಕೋಂ ರಾಮಚಂದ್ರಪ್ಪ ಅಂಗಡಿಯಲ್ಲಿ ಖರೀದಿ ಮಾಡುವ ನೆಪದಲ್ಲಿ ಬಂದು ಕತ್ತಿನಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ಜಿಗಣಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಜಿಗಣಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು ₹8 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿಚಾರಣೆಯಿಂದ ಹುಳಿಮಾವು, ಬಾಗಲುಗುಂಟೆ ಸೇರಿ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ.
ಕಾರ್ಯಾಚರಣೆಯಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಗಣಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಎಸ್.ಮಂಜುನಾಥ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಶಿವಲಿಂಗನಾಯಕ್, ಶಬಾನಾ ಯಾಸೀನ್ ಮಕಾನದಾ, ಅಪರಾಧ ವಿಭಾಗದ ಸಿಬ್ಬಂದಿ ಭಾಗಿಯಾಗಿದ್ದರು.