ಸಾರಾಂಶ
ಬೆಂಗಳೂರು : ಇತ್ತೀಚೆಗೆ ವಿಕ್ಟೋರಿಯಾ ಲೇಔಟ್‌ನ ಆಕ್ಸಿಸ್ ಬ್ಯಾಂಕ್ ಎಟಿಎಂ ಘಟಕದಲ್ಲಿ ₹20.12 ಲಕ್ಷ ದೋಚಿದ್ದ ಎಟಿಎಂಗೆ ಹಣ ತುಂಬಿಸುವ ಖಾಸಗಿ ಏಜೆನ್ಸಿಯ ಮಾಜಿ ಹಾಗೂ ಹಾಲಿ ನೌಕರರು ಸೇರಿದಂತೆ ಮೂವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮುರುಳಿ ಅಲಿಯಾಸ್ ಮುರುಳಿ ಮೋಹನ್, ಪೊತುಲಾ ಸಾಯಿತೇಜಾ ಹಾಗೂ ಎರಿಕಲಾ ವೆಂಕಟೇಶ ಬಂಧಿತರಾಗಿದ್ದು, ಆರೋಪಿಗಳಿಂದ ಎಟಿಎಂ ಘಟಕದಲ್ಲಿ ದೋಚಿದ್ದ ₹20.12 ಲಕ್ಷವನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ವಿಕ್ಟೋರಿಯಾ ಲೇಔಟ್‌ನ ಆಕ್ಸಿಸ್ ಬ್ಯಾಂಕ್ ಎಟಿಎಂ ಘಟಕದಲ್ಲಿ ಹಣ ತುಂಬಿದ್ದ ಯಂತ್ರದ ಪಾಸ್ ವರ್ಡ್ ಬಳಸಿ ಆರೋಪಿಗಳು ಹಣ ದೋಚಿದ್ದರು. ಈ ಬಗ್ಗೆ ಆಕ್ಸಿಸ್ ಬ್ಯಾಂಕ್‌ನ ವ್ಯವಸ್ಥಾಪಕ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ವಿವೇಕನಗರ ಠಾಣೆ ಇನ್‌ಸ್ಪೆಕ್ಟರ್ ಜಿ.ಎಸ್.ಅನಿಲ್ ಕುಮಾರ್ ನೇತೃತ್ವದ ತಂಡವು, ಆರೋಪಿಗಳನ್ನು ಹಣದ ಸಮೇತ ಬಂಧಿಸಿದೆ.
ಆಂಧ್ರಪ್ರದೇಶ ಚುನಾವಣೆ ವೇಳೆ ಸ್ಕೆಚ್:
ಆರೋಪಿಗಳು ಹಲವು ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದರು. ಮಡಿವಾಳದಲ್ಲಿರುವ ಎಟಿಎಂ ಘಟಕಗಳಿಗೆ ಹಣ ತುಂಬಿಸುವ ಸೆಕ್ಯೂರ್ ವ್ಯಾಲ್ಯೂವ್ ಇಂಡಿಯಾ ಲಿ. ಏಜೆನ್ಸಿಯಲ್ಲಿ ಮುರುಳಿ ಹಾಗೂ ವೆಂಕಟೇಶ್ ನೌಕರಿಯಲ್ಲಿದ್ದರು. ಆ ಏಜೆನ್ಸಿಯಲ್ಲಿ ಎಟಿಎಂ ಹಣ ತುಂಬಿಸುವ ಮಾರ್ಗದ ಕಸ್ಟೋಡಿಯನ್‌ಗಳಾಗಿ ಇಬ್ಬರು ಕಾರ್ಯನಿರ್ವಹಿಸಿದ್ದರು. ಆದರೆ ಎರಡು ವರ್ಷಗಳ ಹಿಂದೆ ಕೆಲಸ ತೊರೆದು ಊರಿಗೆ ಮುರಳಿ ಮರಳಿದ್ದರೆ, ಅದೇ ಏಜೆನ್ಸಿಯಲ್ಲಿ ವೆಂಕಟೇಶ್ ಕೆಲಸ ಮುಂದುವರೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ನಗರದ ವಿವಿಧ ಬ್ಯಾಂಕ್‌ಗಳ ಎಟಿಎಂ ಘಟಕಗಳಿಗೆ ಹಣ ಪೂರೈಸುವ ಗುತ್ತಿಗೆ ಪಡೆದಿದ್ದ ಸೆಕ್ಯೂರ್ ವ್ಯಾಲ್ಯೂವ್ ಏಜೆನ್ಸಿ, ಆ ಹಣ ಪೂರೈಸುವಾಗ ಕಸ್ಟೋಡಿಯನ್‌ಗಳಿಗೆ ಪಾಸ್ ವರ್ಡ್ ನೀಡುತ್ತಿತ್ತು. ಈ ಪಾಸ್‌ವರ್ಡ್‌ಗಳನ್ನು ಕಸ್ಟೋಡಿಯನ್ ಬಳಸಿ ಎಟಿಎಂ ಘಟಕದ ಯಂತ್ರಗಳಿಗೆ ಹಣ ತುಂಬುತ್ತಿದ್ದರು. ಆದರೆ ಒಬ್ಬರು ಪಾಸ್ ವರ್ಡ್ ಮರೆತರೂ ಹಣ ತುಂಬಲು ಸಾಧ್ಯವಾಗುತ್ತಿರಲ್ಲ.
ಮೇ 13ರಂದು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗೆ ಮತ ಚಲಾಯಿಸಲು ಊರಿಗೆ ಹೋಗಿದ್ದಾಗ ವೆಂಕಟೇಶ್‌ಗೆ ಸ್ನೇಹಿತ ಮುರಳಿ ಭೇಟಿಯಾಗಿದ್ದ. ಆಗ ಎಟಿಎಂನಲ್ಲಿ ಹಣ ದೋಚುವ ಸಂಚನ್ನು ಗೆಳೆಯನಿಗೆ ಮುರಳಿ ಹೇಳಿದ್ದ. ಕೊನೆಗೆ ಹಣದಾಸೆಗೆ ಆತ ಕೈ ಜೋಡಿಸಲು ಒಪ್ಪಿದ. ಬಳಿಕ ತಮಗೆ ಪಾಸ್‌ವರ್ಡ್ ಗೊತ್ತಿರುವ ವಿಕ್ಟೋರಿಯಾ ಲೇಔಟ್‌ನ ಆಕ್ಸಿಸ್ ಬ್ಯಾಂಕ್ ಎಟಿಎಂ ಅನ್ನು ಟಾರ್ಗೆಟ್ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೋಚಿದ್ದು ಹೇಗೆ?
ಅಂತೆಯೇ ಮೇ 30ರಂದು ರಾತ್ರಿ ಆಕ್ಸಿಸ್ ಬ್ಯಾಂಕ್ ಎಟಿಎಂ ಘಟಕಕ್ಕೆ ಮುರುಳಿ ಹಾಗೂ ವೆಂಕಟೇಶ್ ನುಗ್ಗಿದರೆ, ಮತ್ತೊಬ್ಬ ಹೊರಗೆ ನಿಂತು ಕಾವಲು ಕಾಯುತ್ತಿದ್ದ. ಅಲ್ಲಿನ ಎಟಿಎಂ ಮತ್ತು ಸಿಡಿಎಂ ಲಾಕರ್ ಕೀಯನ್ನು ಯಂತ್ರದ ಮೇಲಿಟ್ಟಿದ್ದನ್ನು ತೆಗೆದು ತಮಗೆ ಮೊದಲೇ ಗೊತ್ತಿದ್ದ ಪಾಸ್ ವರ್ಡ್ ಬಳಸಿ ಲಾಕರ್ ಅನ್ನು ಮುರುಳಿ ಮತ್ತು ವೆಂಕಟೇಶ್ ತೆರೆದರು. ಆನಂತರ ಬ್ಯಾಗ್‌ಗಳಲ್ಲಿ ಎಟಿಎಂನಲ್ಲಿ ಹಣ ತುಂಬಿಕೊಂಡು ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಏಜೆನ್ಸಿಯಲ್ಲಿ ಕೆಲಸ ಮಾಡಿದ್ದರಿಂದ ವಿಕ್ಟೋರಿಯಾ ಲೇಔಟ್‌ನ ಎಟಿಎಂ ಘಟಕಕ್ಕೆ ಕಾವಲುಗಾರನಿಲ್ಲ ಎಂಬ ಸಂಗತಿ ಆರೋಪಿಗಳಿಗೆ ಗೊತ್ತಾತ್ತಿತ್ತು. ಅಲ್ಲದೆ ಇದೇ ಎಟಿಎಂಗೆ ಎರಡ್ಮೂರು ಬಾರಿ ಹಣ ತುಂಬಲು ಬಂದ್ದಿದ್ದ ಕಾರಣ ಮುರುಳಿ ಹಾಗೂ ವೆಂಕಟೇಶ್ ಪಾಸ್ ವರ್ಡ್ ತಿಳಿದುಕೊಂಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಹಣದ ಚೀಲ ತಂದು ರೈಲ್ವೆನಿಲ್ದಾಣದಲ್ಲಿ ಸಿಕ್ಕಿಬಿದ್ದರು!
ಮರುದಿನ ಎಟಿಎಂನಲ್ಲಿ ಹಣ ಕಳ್ಳತನ ಬಗ್ಗೆ ಬ್ಯಾಂಕ್ ಮ್ಯಾನೇಜರ್ ದೂರು ಆಧರಿಸಿ ತನಿಖೆಗಿಳಿದ ಇನ್‌ಸ್ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡವು, ಆರಂಭದಲ್ಲೇ ಕೃತ್ಯದಲ್ಲಿ ಎಟಿಎಂಗೆ ಹಣ ತುಂಬಿಸುವ ಏಜೆನ್ಸಿ ನೌಕರರ ಮೇಲೆ ಅನುಮಾನಿಸಿತು. ಅಂತೆಯೇ 60ಕ್ಕೂ ಹೆಚ್ಚು ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಕೃತ್ಯ ಎಸಗಿದ ಬಳಿಕ ಎರಡು ದಿನಗಳು ಮಡಿವಾಳ ಸಮೀಪ ಪಿಜಿಯಲ್ಲಿದ್ದ ಮುರುಳಿ ಹಾಗೂ ಸಾಯಿ, ಜೂ.2ರಂದು ಅನಂತಪುರಕ್ಕೆ ತೆರಳಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಆ ವೇಳೆ ಅವರ ಬ್ಯಾಗನ್ನು ರೈಲ್ವೆ ಪೊಲೀಸರು ಪರಿಶೀಲಿಸಿದಾಗ ದೊಡ್ಡ ಮೊತ್ತ ಕಂಡು ಶಂಕಿಸಿದರು. ಈ ಹಣದ ಬಗ್ಗೆ ತೀವ್ರವಾಗಿ ಪ್ರಶ್ನಿಸಿದಾಗ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಆನಂತರ ಈ ಆರೋಪಿಗಳ ಸುಳಿವು ಆಧರಿಸಿ ಮತ್ತೊಬ್ಬನನ್ನು ಅನಂತಪುರದಲ್ಲಿ ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.
ಪಾಸ್ ವರ್ಡ್‌ಗೆ ₹6 ಲಕ್ಷ!
ಎಟಿಎಂ ಪಾಸ್ ವರ್ಡ್ ನೀಡಿದರೆ ವೆಂಕಟೇಶ್‌ನಿಗೆ ₹6 ಲಕ್ಷ ಹಾಗೂ ಕೃತ್ಯಕ್ಕೆ ಸಹಕರಿಸಿದರೆ ಸಾಯಿಗೆ ₹1 ಲಕ್ಷ ಕೊಡುವುದಾಗಿ ಮುರಳಿ ಭರವಸೆ ಕೊಟ್ಟಿದ್ದ. ಈ ಹಣದಾಸೆಗೆ ಇಬ್ಬರು ಕೈಜೋಡಿಸಿದ್ದರು ಎನ್ನಲಾಗಿದೆ.
ಆರೋಪಿ ಪಶು ವೈದ್ಯ ವಿದ್ಯಾರ್ಥಿ
ಎರಡು ವರ್ಷಗಳ ಹಿಂದೆ ಸೆಕ್ಯೂರ್ ವ್ಯಾಲ್ಯೂವ್ ಏಜೆನ್ಸಿ ಕೆಲಸ ತೊರೆದು ಊರಿಗೆ ಮರಳಿ ಪಶು ವೈದ್ಯ ಕಾಜೇಲಿನಲ್ಲಿ ಮುರಳಿ ವ್ಯಾಸಂಗ ಮುಂದುವರೆಸಿದ್ದ. ವಿವಾಹವಾಗಿದ್ದರಿಂದ ಆತನಿಗೆ ಓದಿಗೆ ಹಾಗೂ ಕುಟುಂಬ ನಿರ್ವಹಣೆಗೆ ಹಣದ ಸಮಸ್ಯೆ ಎದುರಾಗಿತ್ತು. ಹೀಗಾಗಿ ಈ ಕೃತ್ಯ ಎಸಗಿದ್ದಾಗಿ ಆತ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ಹೇಳಿವೆ.