ಶಾಲಾ ಆವರಣದಲ್ಲಿದ್ದ 5 ಶ್ರೀಗಂಧ ಮರಗಳ ಕಳವು

| Published : Jun 08 2024, 12:36 AM IST / Updated: Jun 08 2024, 04:57 AM IST

ಸಾರಾಂಶ

ಮಂಡ್ಯದ ಚಾಮುಂಡೇಶ್ವರಿ ನಗರದ 22 ಸೆಕೆಂಡ್‌ ಸೆಂಚುರಿ ಪಬ್ಲಿಕ್‌ ಶಾಲೆಯ ಆವರಣದಲ್ಲಿ ಸುಮಾರು 5ಕ್ಕೂ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಸಿತ್ತು. ಗುರುವಾರ ರಾತ್ರಿ ಶಾಲಾವರಣಕ್ಕೆ ಲಗ್ಗೆ ಇಟ್ಟ ಐದಾರು ಮಂದಿ ಕಳ್ಳರು ಕಾವಲುಗಾರರನ್ನು ಬೆದರಿಸಿ ಶ್ರೀಗಂಧದ ಮರಗಳನ್ನು ಕದ್ದೊಯ್ದಿದ್ದಾರೆ.

 ಮಂಡ್ಯ :  ಶಾಲಾವರಣದಲ್ಲಿ ಬೆಳೆದಿದ್ದ 5ಕ್ಕೂ ಹೆಚ್ಚು ಶ್ರೀಗಂಧದ ಮರಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ಇಲ್ಲಿನ ಚಾಮುಂಡೇಶ್ವರಿ ನಗರದ 22 ಸೆಕೆಂಡ್‌ ಸೆಂಚುರಿ ಪಬ್ಲಿಕ್‌ ಶಾಲೆಯಲ್ಲಿ ನಡೆದಿದೆ.

ಆಡಳಿತ ಮಂಡಳಿ ಶಾಲೆಯ ಆವರಣದಲ್ಲಿ ಸುಮಾರು 5ಕ್ಕೂ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಸಿತ್ತು. ಗುರುವಾರ ರಾತ್ರಿ ಶಾಲಾವರಣಕ್ಕೆ ಲಗ್ಗೆ ಇಟ್ಟ ಐದಾರು ಮಂದಿ ಕಳ್ಳರು ಕಾವಲುಗಾರರನ್ನು ಬೆದರಿಸಿ ಶ್ರೀಗಂಧದ ಮರಗಳನ್ನು ಕದ್ದೊಯ್ದಿದ್ದಾರೆ. ಸುಮಾರು 10 ವರ್ಷ ವಯಸ್ಸಿನ ಮರಗಳ ಬುಡ ಕತ್ತರಿಸಿರುವ ಕಳ್ಳರು ಕಾಂಡದ ಭಾಗವನ್ನು ಮಾತ್ರ ಹೊತ್ತೊಯ್ದಿದ್ದಾರೆ. ಟೊಳ್ಳಾಗಿರುವ ಭಾಗವನ್ನು ಶಾಲಾವರಣದಲ್ಲೇ ಬಿಟ್ಟು ಹೋಗಿದ್ದಾರೆ. ಶ್ರೀಗಂಧ ಮರಗಳ ಕಳ್ಳತನ ಕುರಿತು ಮಂಡ್ಯದ ಪಶ್ಚಿಮ ಠಾಣಾ ಪೊಲೀಸರಿಗೆ ದೂರು.

ಅಕ್ರಮ ಮರಳು ಗಣಿಗಾರಿಕೆ: ಟಿಪ್ಪರ್ ಲಾರಿಗೆ 1 ಲಕ್ಷ ರು.ದಂಡ

ಮದ್ದೂರು: ಕಾವೇರಿ ನದಿ ಪಾತ್ರದಿಂದ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಿ ಸಾಗಾಣಿಕೆ ಮಾಡುತ್ತಿದ್ದ ಟಿಪ್ಪರ್ ಲಾರಿಗೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ 1 ಲಕ್ಷ ರು. ದಂಡ ವಿಧಿಸಿದೆ. ಕೊಳ್ಳೇಗಾಲ ಸಮೀಪದ ಕಾವೇರಿ ನದಿಯಿಂದ ಅಕ್ರಮವಾಗಿ ಬೆಂಗಳೂರಿಗೆ ಮರಳು ಸಾಗಾಣಿಕೆ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಅರಿತ ತಹಸೀಲ್ದಾರ್ ಸೋಮಶೇಖರ್ ಮದ್ದೂರು- ಮಳವಳ್ಳಿ ರಸ್ತೆಯ ಕುದರಗುಂಡಿ ಗೇಟ್ ಬಳಿ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ ಪರವಾನಗಿ ಇಲ್ಲದೆ ಮರಳು ಸಾಗಾಣಿಕೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ತಹಸೀಲ್ದಾರ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲು ಮಾಡಿಕೊಂಡ ಗಣಿ ಇಲಾಖೆ ಅಧಿಕಾರಿಗಳು ಲಾರಿ ಮಾಲೀಕನಿಗೆ ಒಂದು ಲಕ್ಷ ರು. ದಂಡ ವಿಧಿಸಿದ್ದಾರೆ.

ಅಂಗಡಿಯಲ್ಲಿ ನಕಲಿ ಪೈಪ್ ಮಾರಾಟ, 40 ಸಾವಿರ ಮೌಲ್ಯದ ಪೈಪ್ ಗಳ ವಶ

ಶ್ರೀರಂಗಪಟ್ಟಣ:ಆಶೀರ್ವಾದ್ ಪೈಪ್ ಹೆಸರಿನ ನಕಲಿ ಪೈಪ್‌ಗಳನ್ನು ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಕಂಪನಿ ಲಿಗಲ್ ತಂಡ ದಾಳಿ ಮಾಡಿ 40 ಸಾವಿರ ರು. ಮೌಲ್ಯದ ಪೈಪ್‌ಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕರ ವಿರುದ್ಧ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಲೂಕಿನ ಮೊಗರಹಳ್ಳಿಯ ಕೆಆರ್‌ಎಸ್-ಮೈಸೂರು ಮುಖ್ಯ ರಸ್ತೆಯ ಹನುಮಾನ್ ಎಲೆಕ್ಟ್ರಿಕಲ್ ಹಾಗೂ ಹಾರ್ಡ್‌ವೇರ್ ಅಂಗಡಿ ಮಾಲೀಕ ಪಾರಸ್ ಮಾಲ್ ಆಶೀರ್ವಾದ್ ಪೈಪ್ ಪ್ರವೇಟ್ ಕಂಪನಿ ನಕಲಿ ಪೈಪ್‌ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೂರು ದಾಖಲಾಗಿದೆ.ಹಲವು ದಿನಗಳಿಂದ ಸಾರ್ವಜನಿಕರಿಗೆ ಮೋಸ ಮಾಡಿ ಆರ್ಶಿವಾದ್ ಕಂಪನಿ ಹೆಸರಿನ ನಕಲಿ ಪೈಪ್ ಮಾರಾಟ ಮಾಡುತ್ತಿರುವ ಮಾಹಿತಿ ಪಡೆದ ಆರ್ಶಿವಾದ್ ಪೈಪ್ ಪ್ರವೇಟ್ ಕಂಪನಿ ಪೋ.ಬಾಲನ್ ನೇತೃತ್ವದ ಲಿಗಲ್ ತಂಡ ದಾಳಿ ನಡೆಸಿ 40 ಸಾವಿರ ಮೌಲ್ಯದ ನಕಲಿ ಪೈಪ್‌ಗಳನ್ನು ವಶಪಡಿಸಿಕೊಂಡು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜನರಿಗೆ ನಕಲಿ ಪೈಪ್ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಅಂಗಡಿಗೆ ನೀಡಿರುವ ಪರವಾನಿಗೆ ರದ್ದು ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.