ಸಾರಾಂಶ
ಮಾನಸಿಕ ಒತ್ತಡ, ಖಿನ್ನತೆ, ಆತಂಕದಿಂದ ನಿಮ್ಹಾನ್ಸ್‌ನ ಟೆಲಿಮನಸ್ ಸಹಾಯವಾಣಿಗೆ (14416) ಕರೆಮಾಡುವ ಯುವ ಸಮುದಾಯದ ಸಂಖ್ಯೆ ಹೆಚ್ಚಾಗಿದೆ.
ಬೆಂಗಳೂರು : ಮಾನಸಿಕ ಒತ್ತಡ, ಖಿನ್ನತೆ, ಆತಂಕದಿಂದ ನಿಮ್ಹಾನ್ಸ್‌ನ ಟೆಲಿಮನಸ್ ಸಹಾಯವಾಣಿಗೆ (14416) ಕರೆಮಾಡುವ ಯುವ ಸಮುದಾಯದ ಸಂಖ್ಯೆ ಹೆಚ್ಚಾಗಿದೆ. ವರ್ಷದ ಹಿಂದೆ 15-30 ವಯೋಮಾನದವರಿಂದ ತಿಂಗಳಿಗೆ ಸುಮಾರು 3 ಸಾವಿರದಷ್ಟು ಬರುತ್ತಿದ್ದ ಕರೆಗಳ ಸಂಖ್ಯೆ ಈಗ 9,500ಕ್ಕೆ ಏರಿಕೆಯಾಗಿದೆ.
2022ರಿಂದ ನಿಮ್ಹಾನ್ಸ್‌ನಲ್ಲಿ ಈ ಸಹಾಯವಾಣಿ ತೆರೆಯಲಾಗಿದೆ. ಮಾನಸಿಕ ಒತ್ತಡ, ಆತಂಕ ಸೇರಿ ಇತರೆ ಸಮಸ್ಯೆಗಳಿಂದ ಪರಿಹಾರ ಬಯಸಿದವರು ಸಹಾಯವಾಣಿಗೆ ಕ್ಕೆ ಕರೆ ಮಾಡಿದಲ್ಲಿ ಸಮಾಲೋಚನೆ ಮೂಲಕ ಪರಿಹರಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ 15-30 ವಯೋಮಾನದ ಜನ ಸಹಾಯವಾಣಿಗೆ ಹೆಚ್ಚಾಗಿ ಕರೆ ಮಾಡುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸಹಾಯವಾಣಿ ತಾಂತ್ರಿಕ ನೆರವು ನೀಡುವ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಬೆಂಗಳೂರು (ಐಐಐಟಿ-ಬಿ) ಪ್ರಕಾರ, 2022ರ ಅಕ್ಟೋಬರ್‌ನಿಂದ ಈ ವಯಸ್ಸಿನವರಿಂದ ಸುಮಾರು 1,13,500 ಕರೆ ಸ್ವೀಕರಿಸಲಾಗಿದೆ. ವರ್ಷದ ಹಿಂದೆ ಈ ವಯಸ್ಸಿನವರಿಂದ ತಿಂಗಳಿಗೆ ಸುಮಾರು 3,000 ಕರೆಗಳು ಬರುತ್ತಿದ್ದವು, ಆದರೆ ಈಗ ತಿಂಗಳಿಗೆ ಸರಾಸರಿ 9,500 ಕರೆ ಬರುತ್ತಿದೆ ಎಂದು ಹೇಳಿದೆ.
ನಿಮ್ಹಾನ್ಸ್ ಸಮುದಾಯ ಮನೋವೈದ್ಯಶಾಸ್ತ್ರದ ಮುಖ್ಯಸ್ಥ ಡಾ.ನವೀನ್ ಕುಮಾರ್ ಸಿ., ಮಾನಸಿಕ ಒತ್ತಡದಿಂದ ಬಳಲಿಕೆ ಬಗ್ಗೆ ಸಂಸ್ಥೆಯಿಂದ ನಿರಂತರ ಅರಿವು ಮೂಡಿಸಲಾಗುತ್ತಿದೆ. ಜಾಗೃತಿ ಮೂಡಿರುವ ಕಾರಣದಿಂದಲೆ ನೆರವು ಕೇಳುವವರು ಹೆಚ್ಚಾಗಿದ್ದಾರೆ ಎಂದರು.
ಐಐಐಟಿ-ಬಿಯ ಪ್ರಧಾನ ತನಿಖಾಧಿಕಾರಿ ಟಿ.ಕೆ.ಶ್ರೀಕಾಂತ್ ಮಾತನಾಡಿ, ವಿದ್ಯಾರ್ಥಿಗಳು ಸಹಾಯವಾಣಿಗೆ ಕರೆ ಮಾಡಿ ಪರೀಕ್ಷಾ ಸಿದ್ಧತೆ, ಸಮಯ ನಿರ್ವಹಣೆ, ನಿದ್ರಾ ತೊಂದರೆ, ಮತ್ತು ಸಂಬಂಧಿತ ಕಾಳಜಿಗಳಿಗೆ ಸಹಾಯ ಪಡೆಯುತ್ತಾರೆ. ನಿದ್ರೆಯ ತೊಂದರೆ, ಹೆಚ್ಚಿದ ಒತ್ತಡ, ಬದಲಾಗುವ ಮನಸ್ಥಿತಿ, ಅಸಮರ್ಪಕ ಅಧ್ಯಯನದ ಭಯ, ಸೋಲು, ಸಂಭಾವ್ಯ ವಿಫಲತೆ ಬಗ್ಗೆ ಆತಂಕದಿಂದ ಕರೆ ಮಾಡುತ್ತಾರೆ. ಅಗತ್ಯ ಹಂತದಲ್ಲಿ ಕೌನ್ಸೆಲಿಂಗ್ ಮೂಲಕ ಆತಂಕ ದೂರ ಮಾಡಲಾಗುತ್ತಿದೆ ಎಂದರು.