ಸಾರಾಂಶ
ಮೈಷುಗರ್ ಕಾರ್ಖಾನೆಯಲ್ಲಿ 60 ವರ್ಷ ಮೀರಿರುವ ವ್ಯವಸ್ಥಾಪಕ (ತಾಂತ್ರಿಕ)ರಾಗಿ ಸೇವೆ ಸಲ್ಲಿಸುತ್ತಿರುವ ಅಪ್ಪಾಸಾಹೇಬ್ ಪಾಟೀಲ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚನೆ.
ಮಂಡ್ಯ : ಮೈಷುಗರ್ ಕಾರ್ಖಾನೆಯಲ್ಲಿ ೬೦ ವರ್ಷ ಮೀರಿರುವ ವ್ಯವಸ್ಥಾಪಕ (ತಾಂತ್ರಿಕ)ರಾಗಿ ಸೇವೆ ಸಲ್ಲಿಸುತ್ತಿರುವ ಅಪ್ಪಾಸಾಹೇಬ್ ಪಾಟೀಲ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಮತ್ತು ಮೀಸಲಾತಿ ನಿಯಮ ಮೀರಿ 46 ಮಂದಿ ನೌಕರರನ್ನು ನೇಮಕ ಮಾಡಿರುವ ಕಂಪನಿ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಬ್ಬು ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಸೂಚನೆ ನೀಡಿದ್ದಾರೆ.
ಬಿಜೆಪಿ ರೈತ ಮೋರ್ಚಾ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕೆಂಪಯ್ಯ ಅವರ ದೂರಿನ ಮೇರೆಗೆ ಕಬ್ಬು ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಸೂಚನೆ ನೀಡಿದ್ದು, ಮೈಷುಗರ್ ಕಾರ್ಖಾನೆಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅಪ್ಪಾಸಾಹೇಬ್ ಪಾಟೀಲ ವಿರುದ್ಧ ನಿವೃತ್ತ ನ್ಯಾಯಮೂರ್ತಿಯ ಏಕಸದಸ್ಯ ಆಯೋಗ ವಿಚಾರಣೆ ನಡೆಸಿ ನೀಡಿರುವ ವರದಿಯನ್ವಯ ಕ್ರಮಕ್ಕೆ ಸೂಚನೆ ನೀಡಿದೆ.
ವ್ಯವಸ್ಥಾಪಕ ಅಪ್ಪಾಸಾಹೇಬ್ ಪಾಟೀಲ ಅವರನ್ನು ಈ ಹಿಂದೆ ೨೦೨೪ರ ಸೆ. ೧೧ರಿಂದ ೨೦೨೪ರ ಜ.೧೭ರಂದು ಆಡಳಿತ ಮಂಡಳಿ ತೀರ್ಮಾನದಂತೆ ವಿಚಾರಣೆ ನಡೆಸಲು ತೀರ್ಮಾನಿಸಿದ್ದರೂ ಇದುವರೆವಿಗೂ ವಿಚಾರಣೆ ನಡೆಸದೆ ವಿಳಂಬ ಧೋರಣೆ, ಬೇಜವಾಬ್ದಾರಿತನ ಪ್ರದರ್ಶನ ಹಾಗೂ ನಿವೃತ್ತ ನೌಕರರಾಗಿರುವ ಇವರನ್ನು ಪುನಃ ಕರ್ತವ್ಯಕ್ಕೆ ನೇಮಕ ಮಾಡಿರುವುದು ಕಾನೂನಿಗೆ ವಿರುದ್ಧವಾಗಿರುವ ಕಾರಣ ತಕ್ಷಣವೇ ಅವರನ್ನು ಹುದ್ದೆಯಿಂದ ವಜಾಗೊಳಿಸಿ ವಿಚಾರಣೆ ಮುಂದುವರಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ.
ಜೊತೆಗೆ ಕಂಪನಿಗೆ ಆಗಿರುವ ನಷ್ಟವನ್ನು ಅಪ್ಪಾಸಾಹೇಬ್ ಪಾಟೀಲ ಅವರಿಂದಲೇ ಭರಿಸುವುದು ಮತ್ತು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸರ್ಕಾರದ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಯಾವುದೇ ಕಂಪನಿ ಅಥವಾ ಸರ್ಕಾರದ ಇಲಾಖೆಗಳಲ್ಲಿ ೨೦ಕ್ಕಿಂತ ಹೆಚ್ಚಿನ ನೌಕರರನ್ನು ನೇಮಕಾತಿ ಮಾಡಿಕೊಳ್ಳುವಾಗ ಕಡ್ಡಾಯವಾಗಿ ಮೀಸಲಾತಿ ನಿಯಮ ಪಾಲಿಸುವುದು ಅಗತ್ಯ. ಆದರೆ, ಮೈಷುಗರ್‌ನಲ್ಲಿ ೪೬ ಮಂದಿ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಮೀಸಲಾತಿ ನಿಯಮವನ್ನು ಪಾಲಿಸದೆ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಂಡಿರುವುದು ಕಾನೂನು ಬಾಹಿರವಾಗಿದೆ ಎಂದು ಕಬ್ಬು ಅಭಿವೃದ್ಧಿ ಆಯುಕ್ತರು ತಿಳಿಸಿದ್ದಾರೆ.
ಮಾರಣಾಂತಿಕ ಹಲ್ಲೆ: ಅಪರಾಧಿಗಳಿಗೆ 10 ವರ್ಷ ಕಠಿಣ ಶಿಕ್ಷೆ, 1.12 ಲಕ್ಷ ರು. ದಂಡ
ಮಂಡ್ಯ: ನಿವೃತ್ತ ಪೊಲೀಸ್ ಅಧಿಕಾರಿ ಮತ್ತವರ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಅಪರಾಧಿಗಳಿಗೆ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಮತ್ತು 1.12 ಲಕ್ಷ ರು. ದಂಡ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಕೀಲಾರ ಗ್ರಾಮದ ಕೆ.ಎಚ್.ದೇವರಾಜು, ಕೆ.ಎಚ್.ವೀರೇಶ್ ಇವರ ತಾಯಿ ಪುಟ್ಟಮ್ಮ ಶಿಕ್ಷೆಗೊಳಗಾದವರು.
ನಿವೃತ್ತ ಪೊಲೀಸ್ ಅಧಿಕಾರಿ ನಾಗರಾಜು ಅವರ ಪುತ್ರ ಶಿವಶಂಕರ್, ತಾಯಿ ಚಂದ್ರಮ್ಮ ಅವರ ಮೇಲೆ ದೇವರಾಜು ಇತರರು ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಶಿವಶಂಕರ್ ಕೆರಗೋಡು ಪೊಲೀಸರಿಗೆ ದೂರು ಸಲ್ಲಿಸಿದ್ದರು.
ದೂರು ದಾಖಲಿಸಿಕೊಂಡ ಅಂದಿನ ಪಿಎಸ್‌ಐ ಎನ್.ಮುನಿಯಪ್ಪ ಅಪರಾಧಿಗಳ ವಿರುದ್ಧ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸುಬ್ರಮಣಿ ಅವರು ವಿಚಾರಣೆ ನಡೆಸಿ ಆರೋಪ ಸಾಭೀತಾದ ಕಾರಣ ಮೂವರು ಅಪರಾಧಿಗಳಿಗೆ 10 ವರ್ಷ ಕಠಿಣ ಸಜೆ ಮತ್ತು ತಲಾ 37 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಅಭಿಯೋಜಕ ಎಚ್.ಸಿ.ರಾಮಲಿಂಗೇಗೌಡ ವಾದ ಮಂಡಿಸಿದ್ದರು.