ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಕಾರ್ಖಾನೆಯಲ್ಲಿ ನಿವೃತ್ತರಾದ ಸ್ವಯಂ ನಿವೃತ್ತಿ ಪಡೆದವರನ್ನು ಮರು ನೇಮಕ ಮಾಡಿಕೊಂಡಿರುವ ಪ್ರಕರಣ ಕುರಿತಂತೆ ಪರಿಶೀಲಿಸಿ ವಾಸ್ತವಾಂಶವುಳ್ಳ ವರದಿಯೊಂದಿಗೆ ಸ್ಪಷ್ಟೀಕರಣ ನೀಡುವಂತೆ ತಿಳಿಸಿದ್ದರೂ ಕಾರ್ಖಾನೆಯಿಂದ ಯಾವುದೇ ವರದಿ ಸ್ವೀಕೃತವಾಗದಿರುವ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶಾಂತಾರಾಮ ಗರಂ ಆಗಿದ್ದಾರೆ.ನಗರಸಭಾ ಮಾಜಿ ಸದಸ್ಯ ಕೆ.ಶಿವಕುಮಾರ್, ಎಚ್.ಚಂದ್ರಶೇಖರ್, ಎಂ.ಶಿವಶಂಕರ್ ಸೇರಿ ಹಲವು ರೈತ ಮುಖಂಡರು ಸರ್ಕಾರಕ್ಕೆ ಬರೆದಿರುವ ಪತ್ರಗಳನ್ನು ಉಲ್ಲೇಖಿಸಿ, ಕಾರ್ಖಾನೆಯ ವ್ಯವಸ್ಥಾಪಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಮೇ ೩೧ರಂದೇ ಪತ್ರ ಬರೆದು ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನೌಕರರನ್ನು ನೇಮಕ ಮಾಡಿಕೊಂಡಿರುವ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿದ್ದರೂ ವರದಿ ಸ್ವೀಕೃತವಾಗಿರುವುದಿಲ್ಲ. ತಾಂತ್ರಿಕ ವ್ಯವಸ್ಥಾಪಕ ಅಪ್ಪಾಸಾಹೇಬ್ ಚನ್ನೇಗೌಡ ಪಾಟೀಲ ನೇಮಕವೂ ಸೇರಿದಂತೆ ಕಂಪನಿಯಲ್ಲಿ ನಿವೃತ್ತರಾದ, ವಜಾಗೊಂಡಿರುವ, ಸ್ವಯಂ ನಿವೃತ್ತಿ ಪಡೆದಿರುವ ನೌಕರರನ್ನು ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವುದು. ಸರ್ಕಾರದ ಆದೇಶ ಮತ್ತು ನಿರ್ದೇಶನಗಳನ್ನು ಉಲ್ಲಂಘಿಸಿರುವ, ಇಲಾಖಾ ವಿಚಾರಣೆ ಬಾಕಿ ಇರುವ ಸಿಬ್ಬಂದಿಯನ್ನು ಪುನರ್‌ನೇಮಕ ಮಾಡಿಕೊಂಡಿರುವುದು, ಭ್ರಷ್ಟಾಚಾರ, ಅಕ್ರಮ ನಡೆಸಿರುವ ಕುರಿತಂತೆ ಸಾಕಷ್ಟು ದೂರುಗಳು ಬಂದಿವೆ.ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದ ಸಾರ್ವಜನಿಕ ವಲಯ ಮತ್ತು ಸಹಕಾರಿ ವಲಯದಲ್ಲಿರುವ ಸಕ್ಕರೆ ಕಾರ್ಖಾನೆಗಳಲ್ಲಿ ಇನ್ನು ಮುಂದೆ ಗ್ರೂಪ್ ಎ, ಬಿ, ಸಿ, ಡಿ ವೃಂದದಲ್ಲಿರುವ ತಾಂತ್ರಿಕ- ತಾಂತ್ರಿಕೇತರ ಅಧಿಕಾರಿ, ಕಾರ್ಮಿಕ, ನೌಕರರನ್ನು ನೇರ ನೇಮಕಾತಿ, ಗುತ್ತಿಗೆ, ಹೊರಗುತ್ತಿಗೆ ಮೂಲಕ ಅಥವಾ ಇನ್ನಾವುದೇ ವಿಧಾನದ ಮೂಲಕ ನೇಮಕಾತಿ ಮಾಡಿಕೊಳ್ಳುವ ಸಮಯದಲ್ಲಿ ಸರ್ಕಾರದ ಪೂರ್ವಾನುಮೋದನೆ ಪಡೆಯಬೇಕು. ಒಮ್ಮೆ ಸರ್ಕಾರದಿಂದ ಪೂರ್ವಾನುಮೋದನೆ ಪಡೆಯದೆ ನೇಮಕಾತಿ ಮಾಡಿಕೊಂಡಲ್ಲಿ ಆ ಸಹಕಾರಿ ವಲಯದ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ, ವ್ಯವಸ್ಥಾಪಕ ನಿರ್ದೇಶಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಸರ್ಕಾರ ೩೦ ಅಕ್ಟೋಬರ್ ೨೦೨೪ರಲ್ಲಿನ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅಧಿಕಾರಿ- ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂಬ ಬಗ್ಗೆ ಹತ್ತು ದಿನಗಳ ಒಳಗೆ ಸಮಜಾಯಿಷಿ ನೀಡುವಂತೆ ಇಲ್ಲವಾದಲ್ಲಿ ನಿಯಮಾನುಸಾರ ಕ್ರಮ ಜರುಗಿಸುವುದಾಗಿ ಪತ್ರ ಮುಖೇನ ಎಚ್ಚರಿಸಿದ್ದಾರೆ.ಕೇಂದ್ರ ಸಚಿವರಿಂದಲೂ ಪರಿಶೀಲನೆಗೆ ಪತ್ರ:
ಮೈಷುಗರ್ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಅಪ್ಪಾ ಸಾಹೇಬ ಪಾಟೀಲ ಅವರ ವಿರುದ್ಧ ೪೦ ಕೋಟಿ ರು. ಭ್ರಷ್ಟಾಚಾರದ ಬಗ್ಗೆ ದೂರು ಸಲ್ಲಿಸಿರುವ ನಗರಸಭೆ ಮಾಜಿ ಸದಸ್ಯ ಕೆ.ಶಿವಕುಮಾರ್ ನೀಡಿರುವ ದೂರಿನ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವ ಮತ್ತು ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಮುಖೇನ ಸೂಚಿಸಿದ್ದಾರೆ.