ಸಾರಾಂಶ
ಗಣೇಶ ಮೆರವಣಿಗೆಗೆ ಸಂಬಂಧಿಸಿದಂತೆ ಕೋಮು ಸೌಹಾರ್ದತೆ ಹಾಳು ಮಾಡಿ ಸಮಾಜದ ಶಾಂತಿ ಸುವ್ಯವಸ್ಥೆಗೆ ಭಂಗವುಂಟಾಗುವ ರೀತಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸಿರುವ ಆರೋಪದ ಹಿನ್ನೆಲೆಯಲ್ಲಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಸ್ವಯಂ ದೂರು ದಾಖಲಾಗಿದೆ.
ನಾಗಮಂಗಲ : ಗಣೇಶ ಮೆರವಣಿಗೆಗೆ ಸಂಬಂಧಿಸಿದಂತೆ ಕೋಮು ಸೌಹಾರ್ದತೆ ಹಾಳು ಮಾಡಿ ಸಮಾಜದ ಶಾಂತಿ ಸುವ್ಯವಸ್ಥೆಗೆ ಭಂಗವುಂಟಾಗುವ ರೀತಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸಿರುವ ಆರೋಪದ ಹಿನ್ನೆಲೆಯಲ್ಲಿ ಪಟ್ಟಣದ ಕೆಂಪೇಗೌಡ ಅಲಿಯಾಸ್ ಕೋಳಿ ರಾಮ ಮತ್ತು ಕಾರ್ತಿಕ್ ಎಂಬುವರ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಸ್ವಯಂ ದೂರು ದಾಖಲಾಗಿದೆ.
ಪಟ್ಟಣ ವ್ಯಾಪ್ತಿಯ ಹಲವು ಕಡೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ನಾಗಮಂಗಲ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಕಾನೂನು ಸುವ್ಯವಸ್ಥೆ ಮೇಲೆ ನಿಗಾವಹಿಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಸಂದೇಶಗಳು ಮತ್ತು ವಿಡಿಯೋಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಠಾಣೆಯ ಗುಪ್ತಚರ ಮಾಹಿತಿ ಸಿಬ್ಬಂದಿ ಮತ್ತು ಸೋಷಿಯಲ್ ಮೀಡಿಯಾ ಮಾನಿಟರ್ ಸೆಲ್ ಸಿಬ್ಬಂದಿ ಯೂಟೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ನಿರಂತರವಾಗಿ ವೀಕ್ಷಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಪಟ್ಟಣದ ವಾಸಿ ಕೆಂಪೇಗೌಡ ಅಲಿಯಾಸ್ ಕೋಳಿ ರಾಮ ಮತ್ತು ಕಾರ್ತಿಕ್ ಎಂಬುವರು ಪಟ್ಟಣದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಸಂಬಂಧಿಸಿದಂತೆ ಎರಡು ಕೋಮುಗಳ ನಡುವೆ ಸೌಹಾರ್ದತೆ ಹಾಳು ಮಾಡಿ ಸಮಾಜದಲ್ಲಿನ ಶಾಂತಿ ಸುವ್ಯವಸ್ಥೆಯನ್ನು ಕದಡುವ ಉದ್ದೇಶದಿಂದ ಇಲ್ಲ ಸಲ್ಲದ ಅಪಪ್ರಚಾರದ ಹೇಳಿಕೆ ನೀಡಿರುವ 15 ನಿಮಿಷದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣವಾದ ಯೂಟ್ಯೂಬ್‌ನಲ್ಲಿ ಶನಿವಾರ ಮಧ್ಯಾಹ್ನ 12ಗಂಟೆ ಸಮಯದಲ್ಲಿ ಹರಿದಾಡಿದ್ದು ಬಹಳಷ್ಟು ಜನರು ಇದನ್ನು ವೀಕ್ಷಣೆ ಮಾಡಿರುವುದನ್ನು ಠಾಣೆಯ ಗುಪ್ತಚರ ಮಾಹಿತಿ ಸಿಬ್ಬಂದಿ ಮತ್ತು ಸೋಷಿಯಲ್ ಮೀಡಿಯಾ ಮಾನಿಟರ್ ಸೆಲ್ ಸಿಬ್ಬಂದಿ ಪತ್ತೆಹಚ್ಚಿದ್ದಾರೆ.
ಈ ಸಂಬಂಧ ಕೆಂಪೇಗೌಡ ಅಲಿಯಾಸ್ ಕೋಳಿ ರಾಮ ಮತ್ತು ಕಾರ್ತಿಕ್ ಎಂಬುವರ ವಿರುದ್ಧ ಕಲಂ 196(1)(ಎ), 196(1)(ಬಿ) ಬಿಎನ್‌ಎಸ್ 2023ರ ರೀತ್ಯಾ ಸ್ವಯಂ ದೂರು ದಾಖಲಿಸಿರುವ ಪಟ್ಟಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್ ಮುಂದಿನ ಕಾನೂನು ಕ್ರಮವಹಿಸಿದ್ದಾರೆ.
ವದಂತಿಗಳಿಗೆ ಕಿವಿಕೊಡಬೇಡಿ
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬಹಳಷ್ಟು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಯಾವುದೇ ಭಯವಿಲ್ಲದೆ ಸಂಭ್ರಮ ಮತ್ತು ಶ್ರದ್ಧಾಭಕ್ತಿಯಿಂದ ಗಣೇಶೋತ್ಸವ ಆಚರಿಸಬಹುದು. ಸಾರ್ವಜನಿಕರು ಶಾಂತಿ ಸುವ್ಯವಸ್ಥೆ ಕಾಪಾಡುವ ಜೊತೆಗೆ ಸಣ್ಣ ಪುಟ್ಟ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಗಣೇಶ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಡಚಣೆಯಾಗದಂತೆ ಸೂಕ್ತ ಪೊಲೀಸ್ ಭದ್ರತೆಯ ಜೊತೆಗೆ ಇಲಾಖೆ ವತಿಯಿಂದ ಏನೆಲ್ಲಾ ಸಹಕಾರ ನೀಡಬೇಕೋ ಎಲ್ಲವನ್ನೂ ನೀಡಲಾಗುವುದು. ಜನರು ಸುಳ್ಳು ವದಂತಿಗಳಿಗೆ ಕಿವಿಕೊಡಬಾರದು. ಶಾಂತಿ ನೆಮ್ಮದಿ ಕದಡಲು ಯತ್ನಿಸುವವರ ವಿರುದ್ಧ ನಿರ್ಧಾಕ್ಷೀಣ್ಯ ಕ್ರಮ ಜರುಗಿಸಲಾಗುವುದು.
-- ಬಿ.ಚಲುವರಾಜು, ನಾಗಮಂಗಲ ಡಿವೈಎಸ್‌ಪಿ