ಧಾರ್ಮಿಕ ಭಾವನೆಗೆ ಧಕ್ಕೆ: ಸಮೀರ್ ವಿರುದ್ಧ ದೂರು ದಾಖಲು

| Published : Aug 24 2025, 02:00 AM IST

ಸಾರಾಂಶ

ಉಪ್ಪಿನಂಗಡಿಯ ಕೋಟೆ ನಿವಾಸಿ ಆದೇಶ್ ಶೆಟ್ಟಿ ಲಿಖಿತ ದೂರು ಸಲ್ಲಿಸಿದ್ದು, ಆರೋಪಿತನು ಧರ್ಮಸ್ಥಳ ಅಸಹಜ ಸಾವುಗಳು, ಗುಪ್ತ ಸಮಾಧಿಗಳು ಇತ್ಯಾದಿ ಬಗ್ಗೆ ಅಸತ್ಯ ಮಾಹಿತಿ ಮತ್ತು ಸುಳ್ಳು ವಿಡಿಯೋಗಳನ್ನು ಪ್ರಕಟಿಸಿರುವುದರಿಂದ, ಕೋಟ್ಯಾಂತರ ಹಿಂದೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಹಾನಿಯಾಗಿವೆ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಹಿಂದೂ ಧಾರ್ಮಿಕ ಕೇಂದ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಹಾಗೂ ಅಲ್ಲಿನ ಧರ್ಮಾಧಿಕಾರಿಯವರ ಬಗ್ಗೆ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಬರುವಂತೆ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು, ಕೃತಕ (ಎಐ ಆಧಾರಿತ) ಹಾಗೂ ಅಪ್ರಮಾಣಿತ ವೀಡೀಯೋಗಳನ್ನು ಪ್ರಕಟಿಸಿರುವ ಸಮೀರ್ ಎಂ.ಡಿ. ಎಂಬಾತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಉಪ್ಪಿನಂಗಡಿಯಲ್ಲಿ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಲಾಯಿತು.ಉಪ್ಪಿನಂಗಡಿಯ ಕೋಟೆ ನಿವಾಸಿ ಆದೇಶ್ ಶೆಟ್ಟಿ ಲಿಖಿತ ದೂರು ಸಲ್ಲಿಸಿದ್ದು, ಆರೋಪಿತನು ಧರ್ಮಸ್ಥಳ ಅಸಹಜ ಸಾವುಗಳು, ಗುಪ್ತ ಸಮಾಧಿಗಳು ಇತ್ಯಾದಿ ಬಗ್ಗೆ ಅಸತ್ಯ ಮಾಹಿತಿ ಮತ್ತು ಸುಳ್ಳು ವಿಡಿಯೋಗಳನ್ನು ಪ್ರಕಟಿಸಿರುವುದರಿಂದ, ಕೋಟ್ಯಾಂತರ ಹಿಂದೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಹಾನಿಯಾಗಿವೆ. ಅವನು ಉದ್ದೇಶ ಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ನೋವು ಪಡಿಸಿ, ಧರ್ಮ ಮತ್ತು ಧರ್ಮಗಳ ನಡುವೆ ದ್ವೇಷವನ್ನು ಬಿತ್ತಲು ಪ್ರಯತ್ನಿಸಿದ್ದಾನೆ. ಇದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ, ಧಾರ್ಮಿಕ ಸಂಘರ್ಷ ಸೃಷ್ಟಿಸುವ ಸಾಧ್ಯತೆ ಉಂಟಾಗಿದೆ. ಈ ಕಾರಣದಿಂದ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂದರ್ಭ ಪ್ರಮುಖರಾದ ಜಯಂತ ಪೊರೋಳಿ, ಧನಂಜಯ್ ನಟ್ಟಿಬೈಲ್, ಉಷಾ ಮುಳಿಯ, ರವೀಂದ್ರ ಆಚಾರ್ಯ, ತಿಮ್ಮಪ್ಪ ಗೌಡ, ಪ್ರಸಾದ್ ಭಂಡಾರಿ, ಪ್ರಶಾಂತ್ ರಾಮಕುಂಜ, ಕಿಶೋರ್ ನೀರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.