ಸಾರಾಂಶ
‘ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾ*ರಕ್ಕೆ ಒಳಗಾಗಿ ಕೊಲೆಯಾದ ನೂರಾರು ಅನಾಮಧೇಯ ಮಹಿಳೆಯರ ಶವಗಳನ್ನು ನಾನು ಹೂತಿದ್ದೆ. ಈ ಕೃತ್ಯದ ಹಿಂದೆ ಪ್ರಭಾವಿಗಳಿದ್ದರು’ ಎಂದು ಅನಾಮಿಕ ಮುಸುಕುಧಾರಿ ವ್ಯಕ್ತಿ ಆರೋಪಿಸಿದ್ದ ಪ್ರಕರಣ ಭಾರೀ ತಿರುವು ಪಡೆದುಕೊಂಡಿದೆ.
ಮಂಗಳೂರು/ ಬೆಳ್ತಂಗಡಿ : ‘ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ನೂರಾರು ಅನಾಮಧೇಯ ಮಹಿಳೆಯರ ಶವಗಳನ್ನು ನಾನು ಹೂತಿದ್ದೆ. ಈ ಕೃತ್ಯದ ಹಿಂದೆ ಪ್ರಭಾವಿಗಳಿದ್ದರು’ ಎಂದು ಅನಾಮಿಕ ಮುಸುಕುಧಾರಿ ವ್ಯಕ್ತಿ ಆರೋಪಿಸಿದ್ದ ಪ್ರಕರಣ ಭಾರೀ ತಿರುವು ಪಡೆದುಕೊಂಡಿದೆ. ಈತನನ್ನು ಶನಿವಾರ ನಸುಕಿನಲ್ಲಿ ಎಸ್‌ಐಟಿ ತಂಡ ಬಂಧಿಸಿದ್ದು, 10 ದಿನ ವಿಚಾರಣೆಗಾಗಿ ತನ್ನ ವಶಕ್ಕೆ ತೆಗೆದುಕೊಂಡಿದೆ. ಹೀಗಾಗಿ ಪ್ರಕರಣದ ಹಿಂದೆ ಇನ್ನೂ ಯಾರಿದ್ದಾರೆ ಎಂಬುದು ಶೀಘ್ರದಲ್ಲೇ ಬಯಲಾಗುವ ಸಾಧ್ಯತೆ ಇದೆ.
ಇದರ ಜತೆಗೆ ಮುಸುಕುಧಾರಿಗೆ ನೀಡಿದ್ದ ಸಾಕ್ಷಿ ಸಂರಕ್ಷಣಾ ಭದ್ರತೆಯನ್ನು ತೆಗೆದು ಹಾಕಿ ಆತನನ್ನೇ ಆರೋಪಿಯನ್ನಾಗಿ ಹೆಸರಿಸಿದೆ. ಜತೆಗೆ ಆತನ ಹೆಸರು, ವಿಳಾಸವನ್ನು ಎಸ್‌ಐಟಿ (ವಿಶೇಷ ತನಿಖಾ ತಂಡ) ಮೊದಲ ಬಾರಿ ಬಹಿರಂಗಡಿಸಿದೆ. ಇದರೊಂದಿಗೆ ಮಾಸ್ಕ್ ಮ್ಯಾನ್ ತಲೆ ಬುರುಡೆ ಪುರಾಣ ಈಗ ಮತ್ತೊಂದು ಮಜಲು ಪಡೆದುಕೊಂಡಿದೆ.
ಬಂಧಿತ ಯಾರು? ಬಂಧನ ಏಕೆ?:
ಅನಾಮಧೇಯ ಮುಸುಕುಧಾರಿ ಮಂಡ್ಯ ಜಿಲ್ಲೆ ಚಿಕ್ಕಬಳ್ಳಿ ನಿವಾಸಿ ನಂಜಯ್ಯ ಪುತ್ರ ಚಿನ್ನಯ್ಯ (44) ಎಂದು ಅಧಿಕೃತವಾಗಿ ಖಚಿತವಾಗಿದೆ. ಅಲ್ಲದೆ ತಾನು ನೂರಾರು ಶವ ಹೂತಿರುವುದಾಗಿ ನೀಡಿದ್ದ ಹೇಳಿಕೆಯನ್ನು ಸಾಬೀತು ಪಡಿಸಲು ವಿಫಲವಾಗಿದ್ದಾನೆ, ಮಾತ್ರವಲ್ಲ ತಾನು ಪೊಲೀಸ್ ಠಾಣೆಗೆ ತಂದಿದ್ದ ತಲೆಬುರುಡೆ ಅತ್ಯಾಚಾರಕ್ಕೆ ಒಳಗಾದ ಮಹಿಳೆಯದ್ದು ಎಂದು ಸಾಬೀತುಪಡಿಸಲು ಕೂಡ ವಿಫಲನಾಗಿದ್ದಾನೆ. ಇದು ಆತನ ಬಂಧನಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ,
ಚಿನ್ನಯ್ಯ ಹೇಳಿದ್ದಂತೆ ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ 17 ಸ್ಥಳಗಳಲ್ಲಿ ಶವಗಳಿಗಾಗಿ ಎಸ್‌ಐಟಿ ಶೋಧ ನಡೆಸಿತ್ತು. ಆದರೆ ‘ಸ್ಥಳ ಸಂಖ್ಯೆ-6ರಲ್ಲಿ’ (ಸ್ಪಾಟ್ ನಂ.6) ಮಾತ್ರ ಮೂಳೆ ಸಿಕ್ಕಿದ್ದು, ಸ್ಥಳ 13ರಲ್ಲಿ ಶೋಧ ನಡೆಸುತ್ತಿದ್ದಾಗ ಸಮೀಪದಲ್ಲಿಯೇ ಭೂಮಿ ಮೇಲೆ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ ಆಗಿತ್ತು. ಉಳಿದ ಕಡೆ ಶವ ಸಿಕ್ಕಿರಲಿಲ್ಲ.
ಮೇಲಾಗಿ ತಾನು ತಂದಿದ್ದು ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳ ತಲೆಬುರುಡೆ ಎಂದು ಹೇಳಿದ್ದ. ಇದು ಮಹಿಳೆಯದ್ದಲ್ಲ, ಪುರುಷನದ್ದು ಎಂದು ಎಂದು 7 ವಿಧಿವಿಜ್ಞಾನ ಪ್ರಯೋಗದಲ್ಲಿ ದೃಢಪಟ್ಟಿದೆ. ಮೇಲಾಗಿ ಆತ ತಂದಿದ್ದ ತಲೆಬುರುಡೆಗೆ ಅಂಟಿದ್ದ ಮಣ್ಣು ಧರ್ಮಸ್ಥಳ ಪರಿಸರದ್ದಲ್ಲ. ಬೇರೆ ಪ್ರದೇಶದ್ದು ಎಂದು ಕೂಡ ಫೊರೆನ್ಸಿಕ್ ಪರೀಕ್ಷೆಯಿಂದ ದೃಢಪಟ್ಟಿದೆ.
ಬೆಳಗ್ಗೆ 5ರವರೆಗೆ ವಿಚಾರಣೆ:
ಈ ಬಗ್ಗೆ ಎಸ್‌ಐಟಿ ಶುಕ್ರವಾರ ಇಡೀ ರಾತ್ರಿ ತೀವ್ರವಾಗಿ ಚಿನ್ನಯ್ಯನ ವಿಚಾರಣೆ ನಡೆಸಿತು. ನಸುಕಿನ 5 ಗಂಟೆವರೆಗೆ ಸತತ 18 ತಾಸು ಕಾಲ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಆತನನ್ನು ತನಿಖೆಗೆ ಒಳಪಡಿಸಿದರು. ಆತನ ಹೇಳಿಕೆಗಳಲ್ಲಿ ಭಾರಿ ವ್ಯತ್ಯಾಸ ಕಂಡುಬಂದ ಕಾರಣ ಸುಳ್ಳುಗಳು ಬಹಿರಂಗವಾಗಿ ಕೊನೆಗೆ ಬಂಧನಕ್ಕೆ ಒಳಪಡಿಸಲಾಯಿತು ಎಂದು ಮೂಲಗಳು ಹೇಳಿವೆ.
ಬಳಿಕ ಸಕ್ಷಮ ಪ್ರಾಧಿಕಾರದ ಗಮನಕ್ಕೆ ತಂದು ಸಾಕ್ಷಿ ಸಂರಕ್ಷಣಾ ಕಾಯ್ದೆಯನ್ನು ರದ್ದುಪಡಿಸಲಾಯಿತು. ಇದರೊಂದಿಗೆ ಚಿನ್ನಯ್ಯನಿಗೆ ಈವರೆಗೆ ನೀಡಿದ್ದ ಸಾಕ್ಷಿ ಸಂರಕ್ಷಣಾ ಭದ್ರತೆಯನ್ನು ತೆಗೆದು ಹಾಕಲಾಯಿತು. ನಂತರ ಈತನ ಹೆಸರನ್ನು ತನಿಖಾ ತಂಡ ಬಹಿರಂಗಗೊಳಿಸಿದೆ ಎಂದು ಗೊತ್ತಾಗಿದೆ.
ಚಿನ್ನಯ್ಯ ನೀಡಿದ ಮಾಹಿತಿಯಂತೆ ಆತನ ಅಣ್ಣ ತಾನಾಸಿಯನ್ನೂ ವಶಕ್ಕೆ ಪಡೆಯಲಾಗಿದೆ. ಚಿನ್ನಯ್ಯನಿಗೆ ಸಹಕರಿಸಿದ ಹಾಗೂ ಬುರುಡೆ ಪ್ರಹಸನಕ್ಕೆ ಸಂಚು ರೂಪಿಸಿದ ಸೂತ್ರಧಾರಿಗಳನ್ನು ಕೂಡ ತನಿಖಾ ತಂಡ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ಖಚಿತಪಡಿಸಿವೆ.
ಕೋರ್ಟಿಗೆ ಹಾಜರು, 10 ದಿನ ವಶಕ್ಕೆ:
ಆರೋಪಿ ಚಿನ್ನಯ್ಯನನ್ನು ಎಸ್‌ಐಟಿ ಪೊಲೀಸರು ಶನಿವಾರ ಬೆಳಗ್ಗೆ ಬೆಳ್ತಂಗಡಿ ಎಸ್‌ಐಟಿ ಕಚೇರಿಯಿಂದ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯದಲ್ಲಿ ಆರೋಪಿಯು ತಾನು ಶವ ಹೂತಿದ್ದು ನಿಜ. ಆದರೆ ಶವಗಳ ಅಸ್ಥಿ ಸಿಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾನೆ.
ಈ ವೇಳೆ ಹೆಚ್ಚಿನ ವಿಚಾರಣೆಗೆ ಎಸ್‌ಐಟಿ ತನ್ನ ವಶಕ್ಕೆ ನೀಡುವಂತೆ ವಾದಿಸಿತು. ಇದನ್ನು ಪರಿಗಣಿಸಿದ ನ್ಯಾಯಾಲಯ 10 ದಿನ ಚಿನ್ನಯ್ಯನನ್ನು ಎಸ್‌ಐಟಿ ಕಸ್ಟಡಿಗೆ ನೀಡಿತು. ಇದರೊಂದಿಗೆ ಇಡೀ ಪ್ರಕರಣದಲ್ಲಿ ಸೂತ್ರಧಾರಿಗಳಿಗೂ ಬಂಧನ ಭೀತಿ ಎದುರಾಗಿದೆ.
ಒಂದೊಂದೇ ಕುತಂತ್ರ ಬಯಲು:
ಇದೇ ವೇಳೆ ಮಾಸ್ಕ್‌ಮ್ಯಾನ್ ದೂರು ನೀಡದ ನಂತರ, ‘ನನ್ನ ಪುತ್ರಿ ಅನನ್ಯಾ ಭಟ್ ಧರ್ಮಸ್ಥಳಕ್ಕೆ ಬಂದವಳು 2003ರಲ್ಲೇ ಕಾಣೆಯಾಗಿದ್ದಾಳೆ’ ಎಂದು ಎಸ್‌ಐಟಿಗೆ ಸುಜಾತಾ ಭಟ್ ಎಂಬಾಕೆ ದೂರಿದ್ದರು. ನಂತರ ಆ.22ರಂದು ‘ಅನನ್ಯಾ ಭಟ್ ನನ್ನ ಮಗಳೇ ಇಲ್ಲ, ಇವೆಲ್ಲ ಸುಳ್ಳು’ ಎಂದು ಮಾಧ್ಯಮದ ಮುಂದೆ ತಪ್ಪೊಪ್ಪಿಗೆ ನೀಡಿದ್ದಳು. ಈಗ ಅ.23ರಂದು ಚಿನ್ನಯ್ಯನ ಕುತಂತ್ರದ ರಹಸ್ಯವನ್ನು ಎಸ್‌ಐಟಿ ಭೇದಿಸಿದೆ. ಇದರೊಂದಿಗೆ ಬುರುಡೆ ಆರೋಪ ಷಡ್ಯಂತ್ರದ ಭಾಗ ಎಂಬುದು ಖಚಿತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.