ಕಲ್ಯಾಣ ಮಂಟಪಗಳಲ್ಲಿ ಕದ್ದ ದುಡ್ಡಲ್ಲಿ 3 ಸೈಟ್ ಖರೀದಿಸಿ, 1 ಮನೆ ಕಟ್ಟಿದ!

| N/A | Published : Aug 27 2025, 01:00 AM IST / Updated: Aug 27 2025, 04:02 AM IST

Money Rupees

ಸಾರಾಂಶ

 ! ಮದುವೆ ಮನೆಯಲ್ಲಿ ಕದ್ದ ಚಿನ್ನಾಭರಣಗಳಿಂದಲೇ ಮೂರು ನಿವೇಶನ ಖರೀದಿಸಿ, ಇರಲಿಕ್ಕೊಂದು ಸ್ವಂತ ಮನೆಕಟ್ಟಿಕೊಂಡು ಹೆಂಡತಿ-ಮಕ್ಕಳ ಜತೆಗೆ ಸಂಸಾರ ಮಾಡಿಕೊಂಡಿದ್ದ ವೃತ್ತಿಪರ ಖದೀಮನೊಬ್ಬಇದೀಗ ಪೊಲೀಸರ ಅತಿಥಿ 

  ಬೆಂಗಳೂರು :  ಈತ ಟಿಪ್‌ಟಾಪ್‌ ಆಗಿ ಕಲ್ಯಾಣ ಮಂಟಪಕ್ಕೆ ಕಾಲಿಟ್ಟನೆಂದರೆ ಅಲ್ಲಿ ವಧು-ವರರ ಕುಟುಂಬಕ್ಕೆ ಸೇರಿದವರ ಚಿನ್ನಾಭರಣ, ನಗದು ಮಂಗಮಾಯ ಗ್ಯಾರಂಟಿ! ಮದುವೆ ಮನೆಯಲ್ಲಿ ಕದ್ದ ಚಿನ್ನಾಭರಣಗಳಿಂದಲೇ ಮೂರು ನಿವೇಶನ ಖರೀದಿಸಿ, ಇರಲಿಕ್ಕೊಂದು ಸ್ವಂತ ಮನೆಕಟ್ಟಿಕೊಂಡು ಹೆಂಡತಿ-ಮಕ್ಕಳ ಜತೆಗೆ ಸಂಸಾರ ಮಾಡಿಕೊಂಡಿದ್ದ ವೃತ್ತಿಪರ ಖದೀಮನೊಬ್ಬಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ತುಮಕೂರು ಜಿಲ್ಲೆ ಗುಬ್ಬಿ ನಿವಾಸಿ ಪರಮೇಶ್ ಈ ಖತರ್‌ನಾಕ್‌ ಕಳ್ಳ. ಕಲ್ಯಾಣ ಮಂಟಪಗಳಿಗೆ ಅತಿಥಿಯ ಸೋಗಿನಲ್ಲಿ ತೆರಳಿ ವಧು-ವರರ ಕೊಠಡಿಗಳಲ್ಲಿ ಚಿನ್ನಾಭರಣ ಕದಿಯುತ್ತಿದ್ದ ಈ ಚಾಲಾಕಿ ಕಳ್ಳನನ್ನು ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 36.91 ಲಕ್ಷ ರು. ಮೌಲ್ಯದ 400 ಗ್ರಾಂ. ಚಿನ್ನಾಭರಣ, 91 ಸಾವಿರ ರು. ನಗದು ವಶಕ್ಕೆ ಪಡೆಯಲಾಗಿದೆ.

ರಾಜಾಜಿನಗರದ ಮದುವೆಯಲ್ಲಿ ಕೈಚಳಕ:

ಕೆಲ ದಿನಗಳ ಹಿಂದೆ ರಾಜಾಜಿನಗರ ಕೈಗಾರಿಕಾ ಪ್ರದೇಶದ ಸಮುದಾಯ ಭವನದಲ್ಲಿ ನಡೆದ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ನಾಯಕ ಶಿವಶಂಕರ್ ಮಗಳ ಮದುವೆಯಲ್ಲಿ 170 ಗ್ರಾಂ. ಆಭರಣ ಕಳ್ಳತನವಾಗಿತ್ತು. ಈ ಕುರಿತು ದಾಖಲಾಗಿದ್ದ ದೂರಿನಂತೆ ತನಿಖೆಗಿಳಿದ ಇನ್ಸ್‌ಪೆಕ್ಟರ್ ರಾಜು ನೇತೃತ್ವದ ತಂಡ, ಕಲ್ಯಾಣ ಮಂಟಪದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಆಧರಿಸಿ ಗುಬ್ಬಿ ಪಟ್ಟಣದ ರೈಲ್ವೆ ನಿಲ್ದಾಣ ಬಳಿ ಆರೋಪಿಯನ್ನು ಬಂಧಿಸಿದ್ದಾರೆ.

ವೃತ್ತಿಪರ ಖದೀಮ:

ಬೆಂಗಳೂರಿನ ನಂದಿನಿ ಲೇಔಟ್‌ನ ಪರಮೇಶ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಕಲ್ಯಾಣ ಮಂಟಪಗಳಲ್ಲಿ ಕಳ್ಳತನಕ್ಕೇ ಆತ ಕುಖ್ಯಾತನಾಗಿದ್ದ. 20 ವರ್ಷಗಳ ಹಿಂದೆಯೇ ಕಲ್ಯಾಣ ಮಂಟಪದಲ್ಲಿ ಚಿನ್ನಾಭರಣ ಕದ್ದು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದು ಎರಡು ವರ್ಷ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ. ನಂತರ ಬೆಂಗಳೂರು ತೊರೆದ ಪರಮೇಶ್‌, ಬಳಿಕ ತುಮಕೂರಿನ ಗುಬ್ಬಿಗೆ ಹೋಗಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ವಾಸಿಸುತ್ತಿದ್ದ. ತಾನು ಕಾರು ಸರ್ವೀಸ್ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವುದಾಗಿ ಕುಟುಂಬದವರಿಗೆ ನಂಬಿಸಿದ್ದ. ಇಷ್ಟಾದರೂ ತನ್ನ ಚಾಳಿ ಮಾತ್ರ ಬಿಟ್ಟಿರಲಿಲ್ಲ ಎಂದು ಮೂಲಗಳು ಹೇಳಿವೆ.

3 ನಿವೇಶನ ಖರೀದಿ:

ಈ ರೀತಿ ಕಳ್ಳತನದಲ್ಲಿ ಸಂಪಾದಿಸಿದ ಹಣದಲ್ಲೇ ಗುಬ್ಬಿಯಲ್ಲಿ ತನ್ನ ಪತ್ನಿ ಹಾಗೂ ಮಗನ ಹೆಸರಿನಲ್ಲಿ ಮೂರು ನಿವೇಶನ ಖರೀದಿಸಿದ್ದಾನೆ. ಅದರಲ್ಲಿ ಒಂದು ನಿವೇಶನದಲ್ಲಿ ಮನೆ ಕಟ್ಟಿಕೊಂಡು ಕುಟುಂಬದ ಜತೆ ಪರಮೇಶ್ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹೇಗೆ ಕಳ್ಳತನ?:

ಕಲ್ಯಾಣ ಮಂಟಪಗಳಲ್ಲಿ ನಡೆಯುವ ಮದುವೆಗಳಿಗೆ ನೀಟಾಗಿ ಉಡುಪು ಧರಿಸಿ ಅತಿಥಿಯಂತೆ ಪರಮೇಶ್ ತೆರಳುತ್ತಿದ್ದ. ತಾಳಿ ಕಟ್ಟುವ ಸಮಯಕ್ಕೆ ಧಾರೆ ಮಂಟಪದ ಬಳಿ ಹೋಗುತ್ತಿದ್ದ ಆತ, ಮಾಂಗಲ್ಯಧಾರಣೆ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಮಾತನಾಡುವವನಂತೆ ನಟಿಸಿ ವಧು ಅಥವಾ ವರನ ಕೋಣೆಗೆ ನುಗ್ಗುತ್ತಿದ್ದ. ತಾಳಿ ಕಟ್ಟುವ ವೇಳೆ ಧಾರೆ ಮಂಟಪದಲ್ಲಿ ಜನ ನೆರೆಯುತ್ತಿದ್ದ ಕಾರಣ ಆ ಕೋಣೆಗಳಲ್ಲಿ ಯಾರೂ ಇರುತ್ತಿರಲಿಲ್ಲ. ಇದರ ಲಾಭ ಪಡೆದು ಅಲ್ಲಿದ್ದ ಚಿನ್ನ ಹಾಗೂ ಹಣ ದೋಚಿ ಪರಾರಿಯಾಗುತ್ತಿದ್ದ ಎಂದು ಮಾಗಡಿ ರಸ್ತೆ ಠಾಣೆ ಪೊಲೀಸರು ವಿವರಿಸಿದ್ದಾರೆ.

ಮೇ 14 ರಂದು ರಾಜಾಜಿನಗರದ ಕೈಗಾರಿಕಾ ಪ್ರದೇಶದ ಸಮುದಾಯ ಭವನದಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಶಿವಶಂಕರ್ ಮಗಳ ಮದುವೆಯಲ್ಲಿ ಕಳ್ಳತನ ಮಾಡಿದ್ದ. ಈ ಕೃತ್ಯದ ತನಿಖೆಗಿಳಿದ ಪೊಲೀಸರು ಕಲ್ಯಾಣ ಮಂಟಪದ ಸಿಸಿಟಿವಿ ಹಾಗೂ ಮದುವೆ ಚಿತ್ರೀಕರಣದ ದೃಶ್ಯಾವಳಿ ಪರಿಶೀಲಿಸಿದಾಗ ಪರಮೇಶ್‌ ಜಾಡು ಸಿಕ್ಕಿದೆ. ಈತನ ಬಂಧನದಿಂದ ಬಸವನಗುಡಿ, ಕೆಂಗೇರಿ, ಮಾಗಡಿ ರಸ್ತೆ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವರದಿಯಾಗಿದ್ದ ಎಂಟು ಕಳ್ಳತನ ಪ್ರಕರಣಗಳೂ ಇದೀಗ ಬೆಳಕಿಗೆ ಬಂದಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೇಗೆ ಕದಿಯುತ್ತಿದ್ದ?

- ಕಲ್ಯಾಣಮಂಟಪಗಳಿಗೆ ನೀಟಾಗಿ ಉಡುಪು ಧರಿಸಿ ಅತಿಥಿಯಂತೆ ಪರಮೇಶ್‌ ತೆರಳುತ್ತಿದ್ದ- ಧಾರೆ ಮಂಟಪದ ಬಳಿ ನಿಲ್ಲುತ್ತಿದ್ದ. ತಾಳಿ ಕಟ್ಟುವ ವೇಳೆ ಫೋನ್‌ ಬಂದಂತೆ ನಟಿಸುತ್ತಿದ್ದ- ಮಾತಾಡುವವನ ಸೋಗಿನಲ್ಲಿ ವಧು-ವರರ ಕೋಣೆ ಪ್ರವೇಶಿಸಿ ಸಿಕ್ಕದ್ದು ಬಾಚಿಕೊಳ್ಳುತ್ತಿದ್ದ- ಎಲ್ಲರೂ ಮಾಂಗಲ್ಯಧಾರಣೆ ನೋಡುವುದರಲ್ಲಿ ವ್ಯಸ್ತರಾಗಿರುವಾಗ ಈತ ಕೈಚಳಕ ತೋರ್‍ತಿದ್ದ- ಪರಮೇಶ್‌ ಬಂಧನದಿಂದ ಬೆಂಗಳೂರಿನಲ್ಲಿ ವರದಿಯಾಗಿದ್ದ 8 ಕಳ್ಳತನ ಪ್ರಕರಣಗಳು ಪತ್ತೆ

Read more Articles on