ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ತಮ್ಮನ್ನು ಮದುವೆಯಾಗುವುದಾಗಿ ನಂಬಿಸಿ ಯೋಧ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ರಾಜ್ಯ ಮಹಿಳಾ ಹೋರಾಟಗಾರ್ತಿಯೊಬ್ಬರು ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದ ಯೋಧ ಅಕ್ಷಯ ನಲವಡೆ ಮನೆ ಮುಂದೆ ಶುಕ್ರವಾರ ನ್ಯಾಯಕ್ಕಾಗಿ ಧರಣಿ ಸತ್ಯಾಗ್ರಹ ಮಾಡಿದರು.ಫೇಸ್‌ಬುಕ್‌ನಲ್ಲಿ ಪರಿಚಯವಾದ ಯೋಧ, ಪ್ರೀತಿಸಿ ಮದುವೆಯಾಗಿ ಮೋಸ ಮಾಡಿದ್ದಾನೆ. ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದ ಅಕ್ಷಯ ನಲವಡೆ ಭಾರತೀಯ ಸೇನೆಯಲ್ಲಿ ಕೋಲ್ಕತ್ತಾದ ಈಸ್ಟರ್ನ್ ಕಮಾಂಡ್ ಸಿಗ್ನಲ್ ರೆಜಿಮೆಂಟ್‌ನಲ್ಲಿ ಸಿಪಾಯಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯೋಧ ಅಕ್ಷಯ್ ನಲವಡೆ ಪ್ರೀತಿಸಿ ನಂಬಿಸಿ ಮದುವೆಯಾಗಿ ಮೋಸ ಮಾಡಿ ಮತ್ತೊಂದು ಮದುವೆಯಾಗಲು ಸಿದ್ಧತೆ ನಡೆಸಿದ್ದಾನೆ ಎಂದು ಹೋರಾಟಗಾರ್ತಿ ಆರೋಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಯುವತಿ, 2019ರಲ್ಲಿ ಫೇಸ್‌ಬುಕ್ ಮೂಲಕ ಅಕ್ಷಯ್ ನಲವಡೆ ತನಗೆ ಪರಿಚಯನಾಗಿದ್ದ. ಈ ವೇಳೆ ನನಗೆ ನಂಬಿಸಿ ಪ್ರೀತಿಸಿ ಮದುವೆಯಾಗಿ ಮೋಸ ಮಾಡಿದ್ದಾನೆ. ನನಗೆ ನಿನಗೆ 14 ವರ್ಷ ಅಂತರ ಆಗುತ್ತದೆ ಎಂದು ಹೇಳಿದಾಗ ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂದು ಹೇಳಿದ. 2020ರ ಮಾರ್ಚ್ 12ರಲ್ಲಿ ಬೆಳಗಾವಿಯ ಮಚ್ಛೆ ಗ್ರಾಮದ ಮನೆಯಲ್ಲಿ ಮದುವೆಯಾಗಿದ್ದಾನೆ. ಬಳಿಕ ಪ್ರತಿ ಬಾರಿ ರಜೆಗೆ ಬೆಳಗಾವಿಗೆ ಬಂದಾಗ ನನ್ನ ಜೊತೆ ಹತ್ತು ದಿನ ಕಳೆದು ಬಳಿಕ ತಮ್ಮ ಮನೆಗೆ ಬರುತ್ತಿದ್ದ ಎಂದು ಹೇಳಿದರು.ತಿರುಪತಿ, ಶಿರಡಿ, ಗೋವಾ ಸೇರಿ ವಿವಿಧೆಡೆ ನನ್ನ ಕರೆದುಕೊಂಡು ಹೋಗಿದ್ದ. ಈತ ಬೇರೆ ಮದುವೆಯಾಗುತ್ತಿದ್ದಾನೆಂದು ಗೊತ್ತಾದ ಮೇಲೆ ನಾನು ನನ್ನ ತಾಯಿಯ ಜೊತೆ ಇವರ ಮನೆಗೆ ಬಂದಿದ್ದೆ. ಆಗ ಅವಾಚ್ಯ ಶಬ್ದಗಳಿಂದ ಬೈಯ್ದು ನನಗೆ ನಿಂದನೆ ಮಾಡಿದ್ದಾನೆ. ಆತನ ಮೊಬೈಲ್ ಚೆಕ್ ಮಾಡಿದಾಗ ನನ್ನಂತೆ 9 ಮಹಿಳೆಯರ ಜೊತೆ ಸಂಪರ್ಕದಲ್ಲಿರುವುದು ವಾಟ್ಸಪ್ ಚಾಟಿಂಗ್ ಮಾಡಿದ್ದಾನೆ. ಆ ಎಲ್ಲಾ ಚ್ಯಾಟ್‌ನ ಸ್ಕ್ರೀನ್‌ಶಾಟ್ ನನ್ನ ಬಳಿ ಇದೆ ಎಂದು ತಿಳಿಸಿದರು.ನಾನು ಹಲವು ನೊಂದ ಮಹಿಳೆಯರ ಪರ ಹೋರಾಟ ಮಾಡಿದ್ದೆ. ನನ್ನ ಜೀವನವೇ ಈ ರೀತಿ ಆಗಿದೆ ಎಂದು ಕಣ್ಣೀರಿಟ್ಟ ಅವರು, ನಾನು ಯಾವುದೇ ಕಾರಣಕ್ಕೂ ಈ ಮನೆ ಬಿಟ್ಟು ಹೋಗಲ್ಲ. ನನಗೆ ಅಕ್ಷಯ್ ನಲವಡೆ ಜೊತೆ ಜೀವನ ನಡೆಸಬೇಕಾಗಿದೆ. ನಾನು ಆತನ ವಿರುದ್ಧ ಪೊಲೀಸರಿಗೆ ದೂರು ನೀಡುವುದಿಲ್ಲ ಎಂದರು.ಇನ್ನು ಭಾರತೀಯ ಸೇನೆಯ ಅಧಿಕಾರಿಗಳು, ಕೋಲ್ಕತ್ತಾದ ಕಮಾಂಡಿಂಗ್ ಆಫೀಸರ್, ಆರ್ಮಿ ವೈವ್ಸ್ ವೆಲ್‌ಫೇರ್ ಅಸೋಸಿಯೇಷನ್, ಮಹಿಳಾ ಆಯೋಗಕ್ಕೂ ಪತ್ರ ಬರೆದಿದ್ದು ತನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ಹೋರಾಟಗಾರ್ತಿ ಯೋಧನೆ ಮನೆಗೆ ಎದುರು ಧರಣಿ ಸತ್ಯಾಗ್ರಹ ಮಾಡುತ್ತಿರುವ ವಿಚಾರ ತಿಳಿದ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದರು.