ಸಾರಾಂಶ
ಮೈಸೂರು : ಕೆಎಸ್‌ಆರ್‌ಟಿಸಿ ಮತ್ತು ಒಮ್ನಿ ವ್ಯಾನ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬಸ್ ರಸ್ತೆ ಬದಿಯ ಗದ್ದೆಗೆ ಮಗುಚಿ ಬಿದ್ದಿರುವ ಘಟನೆ ಮೈಸೂರು- ಬನ್ನೂರು ರಸ್ತೆಯ ಹುನಗನಹಳ್ಳಿ ಗೇಟ್ ಬಳಿ ಗುರುವಾರ ಬೆಳಗ್ಗೆ ನಡೆದಿದೆ.
ಬಸ್ ನಲ್ಲಿದ್ದ 40 ಮಂದಿಯಲ್ಲಿ 25 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಗುರುವಾರ ಬೆಳಗ್ಗೆ 9.30ರ ಸಮಯದಲ್ಲಿ ಕೆಎಸ್‌ಆರ್ ಟಿಸಿ ಬಸ್ ಮಳವಳ್ಳಿಯಿಂದ ಮೈಸೂರಿನ ಕಡೆ ಬರುತ್ತಿದ್ದು, ಒಮ್ನಿ ವ್ಯಾನ್ ಮೈಸೂರು ಕಡೆಯಿಂದ ಬನ್ನೂರು ಕಡೆ ತೆರಳುತ್ತಿತ್ತು. ಈ ಎರಡು ವಾಹನಗಳು ಹುನಗನಹಳ್ಳಿ ಗೇಟ್ ಬಳಿಯ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿದ್ದು, ಬಸ್ ರಸ್ತೆ ಬದಿಯ ಗದ್ದೆಗೆ ಮಗುಚಿ ಬಿದ್ದಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವರುಣ ಠಾಣೆ ಪೊಲೀಸರು, ಗಾಯಾಳುಗಳನ್ನು ಆಂಬ್ಯುಲೆನ್ಸ್ ಗಳ ಮೂಲಕ ಆಸ್ಪತ್ರೆಗೆ ರವಾನಿಸಿದ್ದು, ಗಾಯಾಳುಗಳು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಸಿ. ಮಲ್ಲಿಕ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.