ಸಾರಾಂಶ
ಬೆಂಗಳೂರು : ನಗರದಲ್ಲಿ ಜೆಲ್ಲಿ ಪೊಟ್ಟಣಗಳಲ್ಲಿ ಗಾಂಜಾ ತುಂಬಿ ಮಾರಾಟ ಮಾಡುತ್ತಿದ್ದ ಖಾಸಗಿ ಕಂಪನಿಯ ಇಬ್ಬರು ಉದ್ಯೋಗಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೆಬ್ಬಾಳದ ನಾಗೇನಹಳ್ಳಿ ನಿವಾಸಿಗಳಾದ ಟಿ.ಎಸ್.ಮೊಹಮ್ಮದ್ ಜಾಹಿದ್ ಹಾಗೂ ಇಸ್ಮಾಯಿಲ್ ಅದ್ನಾನ್ ಬಂಧಿತರಾಗಿದ್ದು, ಆರೋಪಿಗಳಿಂದ 3 ಲಕ್ಷ ರು. ಮೌಲ್ಯದ ಗಾಂಜಾ, 50 ಸಾವಿರ ರು. ನಗದು ಹಾಗೂ ಎರಡು ಮೊಬೈಲ್‌ಗಳು ಜಪ್ತಿಯಾಗಿವೆ. ಗಾಂಜಾ ದಂಧೆ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿ ಡ್ರಗ್ಸ್ ಸಮೇತ ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೆಲ್ಲಿ ಪ್ಯಾಕೆಟ್‌ಗಳಲ್ಲಿಟ್ಟು ಮಾರಾಟ:
ಈ ಆರೋಪಿಗಳ ಪೈಕಿ ಜಾಹಿದ್ ಬಿಇ ಹಾಗೂ ಇಸ್ಮಾಯಿಲ್ ಬಿಬಿಎಂ ಓದಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಅವರು ಉದ್ಯೋಗದಲ್ಲಿದ್ದರು. ಹಣದಾಸೆಗೆ ಗಾಂಜಾ ದಂಧೆಗಿಳಿದು ಈಗ ಅವರು ಜೈಲು ಪಾಲಾಗಿದ್ದಾರೆ. ತಮ್ಮ ಪರಿಚಿತ ಪೆಡ್ಲರ್‌ನಿಂದ ಗಾಂಜಾ ಪಡೆದು ನಗರದಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಗಾಂಜಾ ದಂಧೆಕೋರನಿಂದ ಕೊರಿಯರ್ ಮೂಲಕ ಅವರಿಗೆ ಗಾಂಜಾ ಬಂದಿತ್ತು. ಬಳಿಕ ಅದನ್ನು ಜೆಲ್ಲಿ ಪೊಟ್ಟಣಗಳಲ್ಲಿ ತುಂಬಿ ಜಾಹಿದ್ ಹಾಗೂ ಅದ್ನಾನ್ ಮಾರುತ್ತಿದ್ದರು. ಪ್ರತಿ ಪೊಟ್ಟಣಕ್ಕೆ 5 ರಿಂದ 6 ಸಾವಿರು ರು. ನಿಗದಿಪಡಿಸಿದ್ದರು. ಈ ದಂಧೆಯಲ್ಲಿ ತಪ್ಪಿಸಿಕೊಂಡಿರುವ ಪ್ರಮುಖ ಆರೋಪಿ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.