ಇತ್ತೀಚೆಗೆ ಲೋಕಾಯುಕ್ತ ದಾಳಿಗೊಳಗಾಗಿದ್ದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕೆಆರ್‌ಇಐಎಸ್) ಅಧೀಕ್ಷಕ ಅಭಿಯಂತರ ಎಚ್‌.ಎಂ. ಜನಾರ್ಧನ್ ಅವರು ಕಳೆದ ಒಂದು ತಿಂಗಳಿನಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಈ ಕುರಿತು ಸಮಗ್ರವಾದ ತನಿಖೆ ನಡೆಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್‌) ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಾಯುಕ್ತ ದಾಳಿಗೊಳಗಾಗಿದ್ದ ಜನಾರ್ಧನ್ ಅವರು ಫೆ.7 ರಿಂದ ಇದುವರೆಗೂ ಕಚೇರಿಗೆ ಹಾಜರಾಗಿಲ್ಲ ಮತ್ತು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿಲ್ಲ ಎಂಬ ಅಧಿಕೃತ ಮಾಹಿತಿಯನ್ನು ಕೆ.ಆರ್.ಇ.ಐ.ಎಸ್. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು ಲಿಖಿತವಾಗಿ ನೀಡಿದ್ದಾರೆ. ಒಬ್ಬ ಜವಾಬ್ದಾರಿಯುತ ಉನ್ನತ ಅಧಿಕಾರಿ ಸುದೀರ್ಘ ಕಾಲದಿಂದ ನಾಪತ್ತೆಯಾಗಿರುವುದು ಆಡಳಿತ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.

ಒಬ್ಬ ಉನ್ನತ ದರ್ಜೆಯ ಸರ್ಕಾರಿ ಅಧಿಕಾರಿ ಯಾವುದೇ ರಜೆ ಅಥವಾ ಮುನ್ಸೂಚನೆ ಇಲ್ಲದೆ 25ಕ್ಕೂ ಹೆಚ್ಚು ದಿನಗಳಿಂದ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಲೋಕಾಯುಕ್ತ ತನಿಖೆಗೆ ಹೆದರಿ ಅಥವಾ ಸಾಕ್ಷ್ಯಗಳನ್ನು ನಾಶಪಡಿಸುವ ಉದ್ದೇಶದಿಂದ ಅಧಿಕಾರಿ ತಲೆಮರೆಸಿಕೊಂಡಿದ್ದಾರೆಯೇ ಅಥವಾ ಅವರ ನಾಪತ್ತೆಯ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕೂಡಲೇ ಪೊಲೀಸ್ ಆಯುಕ್ತರು ಮಧ್ಯಪ್ರವೇಶಿಸಿ ತನಿಖೆ ನಡೆಸಿ ಅಧಿಕಾರಿಯನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದ್ದಾರೆ. ಸಾರ್ವಜನಿಕ ಕೆಲಸಗಳಿಗೆ ಅಡ್ಡಿಪಡಿಸುತ್ತಿರುವ ಮತ್ತು ಕಾನೂನಿನಿಂದ ತಪ್ಪಿಸಿಕೊಳ್ಳುತ್ತಿರುವ ಅಧಿಕಾರಿಯನ್ನು ಕೂಡಲೇ ಪತ್ತೆಹಚ್ಚಿ ಬಂಧಿಸಬೇಕು. ಈ ಪ್ರಕರಣದ ಹಿಂದೆ ಯಾರೇ ಪ್ರಭಾವಿಗಳಿದ್ದರೂ ಅವರನ್ನು ಕಾನೂನಿನ ಮುಂದೆ ತರಬೇಕು ಎಂದು ಕೆಆರ್‌ಎಸ್‌ ಪಕ್ಷವು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.