ಜೂನಿಯರ್ ಅರ್ಜುನ ನಾಪತ್ತೆಯಾದ ಆನೆ । ಕಾರ್ಯಾಚರಣೆ ಸ್ಥಗಿತಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಹುಣಸೇಹಳ್ಳಿ ಬಳಿ ಹ್ಯಾರಂಬಿ ಪುರ ಗ್ರಾಮದಲ್ಲಿ ನಡೆದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಸಾಕಾನೆ ದಾರಿ ತಪ್ಪಿದ ಘಟನೆ ಶುಕ್ರವಾರ ನಡೆದಿದೆ.ಕಳೆದ 5 ದಿನಗಳ ಹಿಂದೆ ಕಾಫಿ ತೋಟದಲ್ಲಿ ಕಾರ್ಮಿಕನ ಬಲಿ ಪಡೆದಿದ್ದ ಕಾಡಾನೆ ಸೆರೆಗೆ ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ರಾಜ್ಯದ ವಿವಿಧ ಆನೆ ಬಿಡಾರಗಳಿಂದ 7 ಸಾಕಾನೆಗಳು ಬಂದಿದ್ದವು. ಗುರುವಾರದಿಂದ ಕಾರ್ಯಾಚರಣೆ ಆರಂಭವಾಗಿತ್ತು. ಶುಕ್ರವಾರ ಸಾಕಾನೆ ಜೂನಿಯರ್ ಅರ್ಜುನನ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ಕಾಡಾನೆಗಾಗಿ ಹುಡುಕಾಟ ನಡೆಸುತ್ತಿದ್ದಾಗ ಮದವೇರಿದ್ದ ಕಾಡಾನೆ ಏಕಾಏಕಿ ದಾಳಿಗೆ ಮುಂದಾಗಿದೆ. ಈ ಕಾದಾಟದ ಸಂದರ್ಭದಲ್ಲಿ ಜೂನಿಯರ್ ಅರ್ಜುನ ಕಾಡಿನೊಳಗೆ ಓಡಿಹೋಗಿ ಒಂದು ಗಂಟೆಗಳ ಕಾಲ ನಾಪತ್ತೆಯಾಗಿದ್ದ. ಮಿಸ್ ಸಾಕಾನೆಯನ್ನು ಅಧಿಕಾರಿಗಳು ಹಾಗೂ ಇಟಿಎಫ್ ಸಿಬ್ಬಂದಿ ಒಂದು ಗಂಟೆಗಳ ಕಾಲ ತೀವ್ರ ಹುಡುಕಾಟ ನಡೆಸಿ ಪತ್ತೆ ಹಚ್ಚಿದ್ದಾರೆ.

ಒಂದೆಡೆ ಮದವೇರಿದ್ದ ಕಾಡಾನೆ ಭೀತಿ, ಮತ್ತೊಂದೆಡೆ ಕಾರ್ಯಾಚರಣೆ ಪ್ರಮುಖ ಆನೆಯೇ ನಾಪತ್ತೆ ಯಾಗಿದ್ದರಿಂದ ಅರಣ್ಯಾಧಿಕಾರಿಗಳು ಮತ್ತು ಇಟಿಎಫ್ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದರು. ಸುಮಾರು ಒಂದು ಗಂಟೆಗಳ ಕಾಲ ಅರಣ್ಯದಾದ್ಯಂತ ಹುಡುಕಾಡಿದ ಬಳಿಕ ಕೊನೆಗೂ ಜೂನಿಯರ್ ಅರ್ಜುನ ಸಿಕ್ಕಿದ್ದರಿಂದ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಆನೆಯನ್ನು ಸುರಕ್ಷಿತವಾಗಿ ಕಟ್ಟಿ ಹಾಕಲಾಗಿದ್ದು ಸದ್ಯಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಿ ಸಿಬ್ಬಂದಿ ಹಿಂದಿರುಗಿದ್ದಾರೆ. ಕಾಡಾನೆಗೆ ಮದವೇರಿರುವುದರಿಂದ ಅರಣ್ಯಾಧಿಕಾರಿಗಳಿಗೆ ಕಾರ್ಯಾಚರಣೆ ಸವಾಲಾಗಿ ಪರಿಣಮಿಸಿದೆ. ಸುತ್ತಮುತ್ತಲಿನ ಹಳ್ಳಿಗರು, ಕಾಫಿ ತೋಟದ ಕಾರ್ಮಿಕರು, ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಎಸಿಎಫ್ ಮೋಹನ್‌ಕುಮಾರ್ ಮನವಿ ಮಾಡಿದ್ದಾರೆ. ಶನಿವಾರ ಪುನಃ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ. ಕಾರ್ಯಾಚರಣೆ ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ ಶುಕ್ರವಾರ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕೈಗೊಳ್ಳ ಲಾಗಿರುವ ಕ್ರಮಗಳ ಕುರಿತು ಮಾಹಿತಿ ಪಡೆದು, ಜನರ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ೨೦ಬಿಹೆಚ್‌ಆರ್ ೨: ಕಾರ್ಯಾಚರಣೆ ವೇಳೆ ನಾಪತ್ತೆಯಾಗಿದ್ದ ಜೂನಿಯರ್ ಅರ್ಜುನ್ ಸಾಕಾನೆ. ೨೦ಬಿಹೆಚ್‌ಆರ್ ೩: ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಟಿ.ಡಿ.ರಾಜೇಗೌಡ