ಬೆಂಗಳೂರು: ಮೇಜರ್‌ ಅಕ್ಷಯ್‌ ಶಿಲಾ ಫಲಕಕ್ಕೆ ಹಾನಿ

| Published : Jan 15 2024, 01:45 AM IST / Updated: Jan 15 2024, 01:40 PM IST

ಸಾರಾಂಶ

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವ ವೇಳೆ ಹುತಾತ್ಮರಾದ ಮೇಜರ್ ಅಕ್ಷಯ್ ಗಿರೀಶ್ ಅವರ ಸ್ಮರಣಾರ್ಥ ಸಾದಹಳ್ಳಿ ಗ್ರಾಮದ ರಸ್ತೆಯಲ್ಲಿ ಅಳವಡಿಸಿದ್ದ ಶಿಲಾ ಫಲಕಕ್ಕೆ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವ ವೇಳೆ ಹುತಾತ್ಮರಾದ ಮೇಜರ್ ಅಕ್ಷಯ್ ಗಿರೀಶ್ ಅವರ ಸ್ಮರಣಾರ್ಥ ಸಾದಹಳ್ಳಿ ಗ್ರಾಮದ ರಸ್ತೆಯಲ್ಲಿ ಅಳವಡಿಸಿದ್ದ ಶಿಲಾ ಫಲಕಕ್ಕೆ ಹಾನಿಯಾಗಿದೆ.

ಭಾನುವಾರ ಬೆಳಗ್ಗೆ ಶಿಲಾ ಫಲಕ ಸಂಪೂರ್ಣವಾಗಿ ಹಾನಿಯಾಗಿ ಬಿದ್ದಿದ್ದನ್ನು ಗಮನಿಸಿದ ಸಾರ್ವಜನಿಕರು, ಕುಟುಂಬ ಸದಸ್ಯರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

2016ರಲ್ಲಿ ನವೆಂಬರ್ ತಿಂಗಳಲ್ಲಿ ಜಮ್ಮು ಕಾಶ್ಮೀರದ ನಗ್ರೋತಾ ಸೇನಾ ಕ್ಯಾಂಪ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಉಗ್ರರೊಂದಿಗಿನ ಹೋರಾಟದ ವೇಳೆ ಬೆಂಗಳೂರಿನ ಅಕ್ಷಯ್ ಗಿರೀಶ್ ಸೇರಿ ಏಳು ಯೋಧರು ವೀರಮರಣವನ್ನಪ್ಪಿದ್ದರು. 

ಅವರ ಸ್ಮರಣಾರ್ಥ 2020ರ ಡಿ.5ರಂದು ಮನೆ ಸಮೀಪದ ಸಾದಹಳ್ಳಿ ರಸ್ತೆಗೆ ಮೇಜರ್ ಅಕ್ಷಯ್ ಗಿರೀಶ್ ರಸ್ತೆ ಎಂದು ಸಚಿವರಾದ ಕೃಷ್ಣಭೈರೇಗೌಡ ಸಮ್ಮುಖದಲ್ಲಿ ನಾಮಕರಣ ಮಾಡಿ ಶಿಲಾ ಫಲಕ ಅಳವಡಿಸಲಾಗಿತ್ತು.

ಸಾದಹಳ್ಳಿ ಗ್ರಾಮದ ರಸ್ತೆಗೆ ನಮ್ಮ ವೀರ ಯೋಧನ ಸ್ಮರಣಾರ್ಥ ಇರಿಸಿದ್ದ ಶೀಲಾ ಫಲಕ ಧ್ವಂಸವಾಗಿದೆ. ಇದನ್ನು ನೋಡಿ ನಮ್ಮ ಹೃದಯ ಒಡೆದಿದೆ. ಇದು ಆಕಸ್ಮಿಕವೋ, ಉದ್ದೇಶಪೂರ್ವಕವೋ ತಿಳಿದಿಲ್ಲ. 

ಯೋಧನ ಗೌರವ ಸ್ಮರಣಾರ್ಥ ಶೀಲಾ ಫಲಕವನ್ನು ಮರುಸ್ಥಾಪಿಸುವಂತೆ ತಮ್ಮಲ್ಲಿ ಕೋರುತ್ತೇನೆ ಎಂದು ಅಕ್ಷಯ್ ಗಿರೀಶ್ ತಾಯಿ ಮೇಘನಾ ಗಿರೀಶ್ ಅವರು ಸಚಿವ ಕೃಷ್ಣಭೈರೇಗೌಡರಿಗೆ ಮನವಿ ಮಾಡಿದ್ದಾರೆ.

ಘಟನೆ ಕುರಿತು ದೂರು ಸ್ವೀಕರಿಸಿ ಆಕಸ್ಮಿಕವೋ, ದುರುದ್ದೇಶಪೂರ್ಕವೋ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಚಿಕ್ಕಜಾಲ ಠಾಣೆ ಪೊಲೀಸರು ತಿಳಿಸಿದ್ದಾರೆ.

ಆದಷ್ಟು ಬೇಗ ಶಿಲಾ ಫಲಕವನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳುವುದಾಗಿ ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.