ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂಪ್‌ಗೆ ಬಿದ್ದು ಏಳು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಗಂಗಮ್ಮನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಬ್ಬಿಗೆರೆಯ ಕಾರ್ಮಿಕರ ಶೆಡ್ ನಿವಾಸಿ ಶಂಶುದ್ದೀನ್ ಪುತ್ರ ಶಬ್ಬೀರ್(7) ಮೃತ ಬಾಲಕ. ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಕಾರ್ಮಿಕರ ಶೆಡ್ ಆವರಣದ ನೀರಿನ ಸಂಪ್‌ನಲ್ಲಿ ಈ ದುರ್ಘಟನೆ ನಡೆದಿದೆ.
ಯಾದಗಿರಿ ಮೂಲದ ಶಂಶುದ್ಧೀನ್ ಕೆಲ ವರ್ಷಗಳಿಂದ ಬೆಂಗಳೂರಿಗೆ ಬಂದು ಗಾರೆ ಕೆಲಸ ಮಾಡಿಕೊಂಡು ಜೀವನ ದೂಡುತ್ತಿದ್ದರು. ಅಬ್ಬಿಗೆರೆಯ ಕಾರ್ಮಿಕರ ಶೆಡ್‌ನಲ್ಲಿ ಕುಟುಂಬ ವಾಸಿಸುತ್ತಿತ್ತು. ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಪುತ್ರ ಶಬ್ಬೀರ್ ಕಾರ್ಮಿಕರ ಶೆಡ್ ಎದುರಿನ ಆವರಣದಲ್ಲಿ ಆಟವಾಡುತ್ತಿದ್ದ. 8.30ರ ಸುಮಾರಿಗೆ ನೋಡಿದಾಗ ಆವರಣದಲ್ಲಿ ಇರಲಿಲ್ಲ. ಬಳಿಕ ಪೋಷಕರು ಗಾಬರಿಗೊಂಡು ಸುತ್ತಮುತ್ತ ಹುಡುಕಾಡಿದಾಗ ಎಲ್ಲಿಯೂ ಪತ್ತೆಯಾಗಿಲ್ಲ.
ಕಾರ್ಮಿಕರ ಶೆಡ್‌ಗಳ ಬಳಿ ಕಾರ್ಮಿಕರ ಅನುಕೂಲಕ್ಕಾಗಿ ನೀರು ಸಂಗ್ರಹಿಸಲು ಒಂದು ಸಂಪ್ ಮಾಡಲಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ ನೀರಿನ ಸಂಪ್ ನೋಡಿದಾಗ ಶಬ್ಬೀರ್ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ಕಂಡು ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಬಾಲಕ ಸಂಪ್ ಬಳಿ ಆಟವಾಡುವಾಗ ಆಯತಪ್ಪಿ ಬಿದ್ದು ಮೃತಪಟ್ಟಿರುವ ಸಾಧ್ಯತೆಯಿದೆ. ಶನಿವಾರ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.
ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.