ಅಕ್ರಮ ಮರಳು ಗಣಿಗಾರಿಕೆ ಅಡ್ಡೆ ಮೇಲೆ ದಾಳಿ: ಟಿಪ್ಪರ್ ಲಾರಿ ವಶ

| Published : Jan 15 2024, 01:45 AM IST / Updated: Jan 15 2024, 01:42 PM IST

ಅಕ್ರಮ ಮರಳು ಗಣಿಗಾರಿಕೆ ಅಡ್ಡೆ ಮೇಲೆ ದಾಳಿ: ಟಿಪ್ಪರ್ ಲಾರಿ ವಶ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ತಡವಾಗಿಯಾದರೂ ಕ್ರಮಕ್ಕೆ ಮುಂದಾಗಿರುವ ತಾಲೂಕು ಆಡಳಿತವು ಮರಳು ಗಣಿಗಾರಿಕೆ ಅಡ್ಡೆ ಮೇಲೆ ದಾಳಿ ನಡೆಸಿತು. ಖಚಿತ ಮಾಹಿತಿ ಮೇರೆಗೆ ಭಾನುವಾರ ಮುಂಜಾನೆ 4 ಗಂಟೆ ವೇಳೆಗೆ ರಾಯಸಮುದ್ರ ಗ್ರಾಮದ ಮರಳು ಗಣಿಗಾರಿಕೆ ಅಡ್ಡೆ ಮೇಲೆ ತಹಸೀಲ್ದಾರ್ ತಂಡ ದಾಳಿ ಮಾಡಿತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಅಕ್ರಮ ಮರಳು ಗಣಿಗಾರಿಕೆ ಅಡ್ಡೆ ಮೇಲೆ ಭಾನುವಾರ ಬೆಳ್ಳಂಬೆಳಗ್ಗೆ ದಿಢೀರ್ ದಾಳಿ ನಡೆಸಿದ ತಹಸೀಲ್ದಾರ್ ನಿಸರ್ಗಪ್ರಿಯ ಅಕ್ರಮ ಮರಳು ಸಾಗಿಸುತ್ತಿದ್ದ ಟಿಪ್ಪರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ತಾಲೂಕಿನ ರಾಯಸಮುದ್ರ, ಸಿಂಧಘಟ್ಟ, ಕ್ಯಾತನಹಳ್ಳಿ ಮುಂತಾದ ಕಡೆ ಕೆರೆ ಬಯಲಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿರುವ ಬಗ್ಗೆ ರೈತರು, ಕ್ಷೇತ್ರದ ಶಾಸಕರು ಮತ್ತು ಅಧಿಕಾರಿ ವರ್ಗಕ್ಕೆ ದೂರು ನೀಡಿ ಕೆರೆ ಉಳಿಸಿ ಎಂದು ಆಗ್ರಹಿಸಿದ್ದರು. ಈ ಬಗ್ಗೆ ಪತ್ರಿಕೆಯಲ್ಲೂ ವರದಿಯಾಗಿತ್ತು.

ಈ ವರದಿ ಆಧರಿಸಿ ಲೋಕಾಯುಕ್ತ ನ್ಯಾಯಾಧೀಶರೂ ಕೂಡ 07 ಜನ ಅಧಿಕಾರಿಗಳ ಮೇಲೆ ಸುಮೋಟೋ ಕೇಸ್ ಕೂಡ ದಾಖಲಿಸಿದ್ದಾರೆ. 

ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿಯೂ ಶಾಸಕ ಎಚ್.ಟಿ.ಮಂಜು ಅಕ್ರಮ ಮರಳು ಗಣಿಗಾರಿಕೆ ತಡೆಯಲು ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ತಡವಾಗಿಯಾದರೂ ಕ್ರಮಕ್ಕೆ ಮುಂದಾಗಿರುವ ತಾಲೂಕು ಆಡಳಿತ ಮರಳು ಗಣಿಗಾರಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಭಾನುವಾರ ಮುಂಜಾನೆ 4 ಗಂಟೆ ವೇಳೆಗೆ ರಾಯಸಮುದ್ರ ಗ್ರಾಮದ ಮರಳು ಗಣಿಗಾರಿಕೆ ಅಡ್ಡೆ ಮೇಲೆ ತಮ್ಮ ಸಿಬ್ಬಂದಿಯೊಂದಿಗೆ ತಹಸೀಲ್ದಾರ್ ನಿಸರ್ಗ ಪ್ರಿಯ ದಾಳಿ ನಡೆಸಿದರು.

ತಹಸೀಲ್ದಾರ್ ಜೀಪ್ ಆಗಮಿಸುತ್ತಿದ್ದಂತೆಯೇ ಮರಳು ಗಣಿಗಾರಿಕೆ ನಡೆಸುತ್ತಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ. ದಾರಿಯಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿಯನ್ನು ಅಡ್ಡಗಟ್ಟಿ ವಶಕ್ಕೆ ಪಡೆದು ಪಟ್ಟಣ ಪೊಲೀಸರಿಗೆ ಒಪ್ಪಿಸಿದ್ದಾರೆ. ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಟಿಪ್ಪರ್ ರಾಯಸಮುದ್ರ ಗ್ರಾಮದ ಪ್ರಕಾಶ್ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.