ಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿರುವ ಕಿಡಿಗೇಡಿಗಳು ಹಲವರಿಗೆ ಮೆಸೇಜ್ ಕಳುಹಿಸಿದ್ದಾರೆ. ಈ ಸಂಬಂಧ ಶಾಸಕ ಸಿ.ಕೆ ರಾಮಮೂರ್ತಿ ಅವರು, ದಕ್ಷಿಣ ವಿಭಾಗದ ಸೈಬರ್ ಕ್ರೈಂ (ಸೆನ್‌) ಠಾಣೆಗೆ ದೂರು ನೀಡಿದ್ದಾರೆ.

 ಬೆಂಗಳೂರು : ಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿರುವ ಕಿಡಿಗೇಡಿಗಳು ಹಲವರಿಗೆ ಮೆಸೇಜ್ ಕಳುಹಿಸಿದ್ದಾರೆ. ಈ ಸಂಬಂಧ ಶಾಸಕ ಸಿ.ಕೆ ರಾಮಮೂರ್ತಿ ಅವರು, ದಕ್ಷಿಣ ವಿಭಾಗದ ಸೈಬರ್ ಕ್ರೈಂ (ಸೆನ್‌) ಠಾಣೆಗೆ ದೂರು ನೀಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಸಿ.ಕೆ.ರಾಮಮೂರ್ತಿ, ಇನ್‌ಸ್ಟಾಗ್ರಾಂನಲ್ಲಿ ಸಿಕೆ_ ರಾಮಮೂರ್ತಿ ಎಂದು ಖಾತೆಗಳನ್ನು ತೆರೆದಿರುವ ಕಿಡಿಗೇಡಿಗಳು, ಯುವತಿಗೆ ಅಸಭ್ಯ ಸಂದೇಶ ಕಳುಹಿಸಿದ್ದಾರೆ. ಅಲ್ಲದೆ, ಫೇಸ್‌ಬುಕ್‌ನ ಮೆಸೆಂಜರ್‌ನಿಂದ ಕೆಲವರಿಗೆ ಸಂದೇಶ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಶಾಸಕರ ವಿರುದ್ಧ ಯುವತಿ ಗಂಭೀರ ಆರೋಪ:

ಶಾಸಕ ರಾಮಮೂರ್ತಿ ಅವರು ತನಗೆ ಇನ್‌ಸ್ಟಾಗ್ರಾಂನಲ್ಲಿ ಗುಡ್ ಮಾರ್ನಿಂಗ್, ಗುಡ್ ನೈಟ್ ಎಂಬ ಸಂದೇಶ ಕಳಿಸಿದ್ದಾರೆ ಎಂದು ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ಜತೆಗೆ ಶಾಸಕರು ಮೆಸೇಜ್‌ ಮಾಡಿದ್ದಾರೆ ಎಂದು ಆರೋಪಿಸಿರುವ ಆಕೆ ಚಾಟಿಂಗ್‌ ಮಾಡಿರುವ ಸ್ಕ್ರೀನ್‌ಶಾಟ್‌ ಅನ್ನು ತನ್ನ ಸ್ಟೇಟಸ್ ಹಾಕಿಕೊಂಡಿದ್ದಳು.

ಸಾರ್ವಜನಿಕ ವಿಶ್ವಾಸಕ್ಕೆ ಧಕ್ಕೆ: ರಾಮಮೂರ್ತಿ ದೂರು

ಇದರಿಂದ ತಮ್ಮಗೌರವ, ಮಾನಹಾನಿ ಹಾಗೂ ಸಾರ್ವಜನಿಕ ವಿಶ್ವಾಸಕ್ಕೆ ಧಕ್ಕೆ ಉಂಟಾಗಿದೆ. ಹೀಗಾಗಿ ತಮ್ಮ ಸಾಮಾಜಿಕ ಜಾಲಾತಾಣಗಳ ಖಾತೆಗಳನ್ನು ಹ್ಯಾಕ್ ಮಾಡಿ ಅಸಭ್ಯ ಸಂದೇಶ ಕಳುಹಿಸಿ, ಹಣಕ್ಕೆ ಬೇಡಿಕೆ ಇಟ್ಟಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ನಕಲಿ ಖಾತೆಗಳನ್ನು ನಿಷ್ಕ್ರಿಯಗೊಳಿಸಬೇಕು ಎಂದು ರಾಮಮೂರ್ತಿ ಅವರು ದೂರಿನಲ್ಲಿ ಉ್ಲಲೇಖಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಗ್ರೆಸ್‌ ನಾಯಕರ ಕೃತ್ಯ: ಶಾಸಕರ ಆರೋಪ

ನನ್ನ ವಿರುದ್ಧ ವಿನಾಕಾರಣ ಆರೋಪ ಮಾಡಲಾಗುತ್ತಿದೆ. ನನ್ನ ಮಾನಹಾನಿ ಮಾಡುವ ಕೆಲಸವನ್ನು ಜಯನಗರ ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ ಎಂದು ಶಾಸಕ ರಾಮಮೂರ್ತಿ ಆಪಾದಿಸಿದ್ದಾರೆ.

ನನ್ನ ಇನ್‌ಸ್ಟಾಗ್ರಾಂ ಖಾತೆಗೆ 66 ಸಾವಿರ ಫಾಲೋವರ್ಸ್‌ಗಳು ಇದ್ದಾರೆ. ನಾನು ಇನ್‌ಸ್ಟಾಗ್ರಾಂ ಖಾತೆ ಬಳಸಲ್ಲ. ಬಳಸುವುದಕ್ಕೂ ಬರುವುದಿಲ್ಲ. ನಮ್ಮ ಟೀಂ ನನ್ನ ಕಾರ್ಯಕ್ರಮಗಳ ಬಗ್ಗೆ ಪೋಸ್ಟ್ ಮಾಡುತ್ತದೆ. ಆದರೆ, ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಸಂದೇಶದ ಬಗ್ಗೆ ಮಾಹಿತಿ ಬಂದಿದ್ದು, ಅದೇ ಸಮಯಕ್ಕೆ ಇಂಡಿಯನ್‌ ಕಾಂಗ್ರೆಸ್‌ ಜಯನಗರ ಖಾತೆಯಿಂದ ಯುವತಿಗೆ ರಾಮಮೂರ್ತಿ ಹಲೋ ಎಂದು ಸಂದೇಶ ಕಳುಹಿಸಿದ್ದಾರೆ ಎಂದು ಪೋಸ್ಟ್ ಹಾಕಿದ್ದಾರೆ. ಆ ಯುವತಿ ಯಾರು ಎಂಬುದೇ ನನಗೆ ಗೊತ್ತಿಲ್ಲ ಎಂದಿದ್ದಾರೆ.