ಹೋಟೆಲ್‌ಗೆ ನುಗ್ಗಿ ಮಾಲೀಕನಿಗೆ ಚಾಕು ತೋರಿಸಿದ ದುಷ್ಕಮಿಗಳು

| Published : Apr 30 2024, 02:07 AM IST / Updated: Apr 30 2024, 04:46 AM IST

ಹೋಟೆಲ್‌ಗೆ ನುಗ್ಗಿ ಮಾಲೀಕನಿಗೆ ಚಾಕು ತೋರಿಸಿದ ದುಷ್ಕಮಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಮೂವರು ಪುಂಡರ ಹೋಟೆಲ್‌ನ ರಿಸೆಪ್ಷನ್‌ಗೆ ಬಂದು ಮಾಲೀಕನ ಜತೆಗೆ ಕೆಲ ಕಾಲ ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಮೂವರ ಪೈಕಿ ಓರ್ವ ತನ್ನ ಪ್ಯಾಂಟ್‌ ಜೇಬಿನಿಂದ ಚಾಕು ತೆಗೆದು ಬೆದರಿಕೆ ಹಾಕುತ್ತಿರುವುದು ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

 ಬೆಂಗಳೂರು :  ಮೂವರು ದುಷ್ಕರ್ಮಿಗಳು ಹೋಟೆಲ್‌ವೊಂದಕ್ಕೆ ನುಗ್ಗಿ ಮಾಲೀಕನಿಗೆ ಚಾಕು ತೋರಿಸಿ ಬೆದರಿಸಿರುವ ಘಟನೆ ಬಾಣಸವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕಮ್ಮನಹಳ್ಳಿಯಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ವಿಶಾಲ್‌ ಜಾ ಎಂಬುವವರು ಘಟನೆ ಸಂಬಂಧ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯವನ್ನು ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ನಗರ ಪೊಲೀಸ್‌ ಆಯುಕ್ತರಿಗೆ ಟ್ಯಾಗ್‌ ಮಾಡಿದ್ದು, ಮಾಹಿತಿ ನೀಡಿದ್ದಾರೆ. ಪುಂಡರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮೂವರು ಪುಂಡರ ಹೋಟೆಲ್‌ನ ರಿಸೆಪ್ಷನ್‌ಗೆ ಬಂದು ಮಾಲೀಕನ ಜತೆಗೆ ಕೆಲ ಕಾಲ ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಮೂವರ ಪೈಕಿ ಓರ್ವ ತನ್ನ ಪ್ಯಾಂಟ್‌ ಜೇಬಿನಿಂದ ಚಾಕು ತೆಗೆದು ಬೆದರಿಕೆ ಹಾಕುತ್ತಿರುವುದು ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ನಗರ ಪೊಲೀಸರು, ಬಾಣಸವಾಡಿ ಠಾಣೆ ಪೊಲೀಸರನ್ನು ಸಂಪರ್ಕಿಸಿ ಘಟನೆ ಸಂಬಂಧ ದೂರು ನೀಡುವಂತೆ ಸೂಚಿಸಿದ್ದಾರೆ. ಈ ಸಂಬಂಧ ಹೋಟೆಲ್‌ ಮಾಲೀಕರಿಂದ ದೂರು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಪಾರ್ಟ್ಮೆಂಟಿನ 14ನೇ ಮಹಡಿಯಿಂದ ಜಿಗಿದು ಯುವಕ ಆತ್ಮಹತ್ಯೆಗೆ ಯತ್ನ

 ಬೆಂಗಳೂರು:  ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕನೊಬ್ಬ ಅಪಾರ್ಟ್‌ಮೆಂಟಿನ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಸಿರುವ ಘಟನೆ ತಲಘಟ್ಟಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮನವರ್ತ ಕಾವಲು ಶೋಭಾ ಹಿಲ್‌ ವ್ಯೂವ್‌ ಅಪಾರ್ಟ್‌ಮೆಂಟ್‌ ನಿವಾಸಿ ಸಂಜಿತ್‌(25) ಆತ್ಮಹತ್ಯೆಗೆ ಯತ್ನಿಸಿದವರು. ಸೋಮವಾರ ಸಂಜೆ 7.15ರ ಸುಮಾರಿಗೆ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಸಂಜಿತ್‌ಗೆ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಾರ್ಟ್‌ಮೆಂಟ್‌ನ 8ನೇ ಮಹಡಿಯಲ್ಲಿ ಸಂಜಿತ್‌ ಪೋಷಕರ ಜತೆಗೆ ನೆಲೆಸಿದ್ದು, ಕೆಲಸಕ್ಕೆ ಹೋಗುತ್ತಿರಲಿಲ್ಲ. ಸೋಮವಾರ ಸಂಜೆ ಮನೆಯಲ್ಲೇ ಇದ್ದ ಸಂಜಿತ್‌ 14ನೇ ಮಹಡಿಗೆ ತೆರಳಿ ಏಕಾಏಕಿ ಕೆಳಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಬಾಳೆಮರದ ಮೇಲೆ ಬಿದ್ದು ಬಳಿಕ ನೆಲಕ್ಕೆ ಉರುಳಿದ

ಅಪಾರ್ಟ್‌ಮೆಂಟಿನ 14ನೇ ಮಹಡಿಯಿಂದ ಕೆಳಗೆ ಜಿಗಿದಾಗ ಸಂಜಿತ್‌ ಮೊದಲಿಗೆ ಬಾಳೆಮರಗಳ ಮೇಲೆ ಬಿದ್ದು ಬಳಿಕ ನೆಲಕ್ಕೆ ಉರುಳಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾನೆ. ನೇರವಾಗಿ ನೆಲಕ್ಕೆ ಬಿದ್ದಿದ್ದರೆ ಸ್ಥಳದಲ್ಲೇ ಆತ ಮೃತಪಡುವ ಸಾಧ್ಯತೆ ಇತ್ತು. ಬಿದ್ದ ಶಬ್ಧ ಕೇಳಿ ಅಪಾರ್ಟ್‌ಮೆಂಟ್‌ ನಿವಾಸಿಗಳು ಹೊರಗೆ ಬಂದು ನೋಡಿದಾಗ, ಸಂಜಿತ್‌ ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಪೋಷಕರು ಗಾಯಾಳು ಸಂಜಿತ್‌ನನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

ಮಾನಸಿಕ ಖಿನ್ನತೆ: ಇತ್ತೀಚೆಗೆ ಸಂಜಿತ್‌ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂದು ತಿಳಿದು ಬಂದಿದೆ. ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ಇಳಿದು ಬಂದಿಲ್ಲ. ಪೋಷಕರು ಮಗನಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹೀಗಾಗಿ ಕೆಲ ಸಮಯದ ಬಳಿಕ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲಾಗುವುದು. ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.