ಬೆದರಿಸಿ ನಗ್ನ ಚಿತ್ರ ಪಡೆದು ಜಾಲತಾಣದಲ್ಲಿ ಹಂಚಿದ!

| Published : Apr 29 2024, 01:30 AM IST / Updated: Apr 29 2024, 04:45 AM IST

ಸಾರಾಂಶ

ದುಷ್ಕರ್ಮಿಗಳು ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳನ್ನು ಬೆದರಿಸಿ ಆಕೆಯ ನಗ್ನ ಫೋಟೋಗಳನ್ನು ಪಡೆದು ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಆರೋಪದಡಿ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

 ಬೆಂಗಳೂರು :  ದುಷ್ಕರ್ಮಿಗಳು ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳನ್ನು ಬೆದರಿಸಿ ಆಕೆಯ ನಗ್ನ ಫೋಟೋಗಳನ್ನು ಪಡೆದು ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಆರೋಪದಡಿ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂತ್ರಸ್ತೆಯು ಸರ್ಕಾರಿ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ನೀಡಿದ ದೂರಿನ ಮೇರೆಗೆ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಂತ್ರಸ್ತೆಯ ತಂದೆ-ತಾಯಿಗೆ ಇಬ್ಬರು ಮಕ್ಕಳು. ತಂದೆ ರಸ್ತೆ ಅಪಘಾತದಲ್ಲಿ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಹೀಗಾಗಿ ಮನೆಯಲ್ಲಿ ತಾಯಿ, ತಮ್ಮ ಮತ್ತು ಸಂತ್ರಸ್ತೆ ಇದ್ದಾರೆ.

ಬೆದರಿಸಿ ನಗ್ನ ಫೋಟೋ ಪಡೆದ:

ಸಂತ್ರಸ್ತೆಯು 2023ರ ಮೇ ತಿಂಗಳಲ್ಲಿ ಇನ್‌ಸ್ಟಾಗ್ರಾಮ್‌ ಖಾತೆ ತೆರೆದು ಬಳಸುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಅಪರಿಚಿತ ಇನ್‌ಸ್ಟಾಗ್ರಾಮ್‌ ಖಾತೆಯಿಂದ ಸಂತ್ರಸ್ತೆಯ ಖಾತೆಗೆ ಎಡಿಟ್‌ ಮಾಡಿರುವ ತಾಯಿಯ ಅಶ್ಲೀಲ ಫೋಟೋ ಬಂದಿದೆ. ಈ ವೇಳೆ ಅಪರಿಚಿತ, ‘ನಿನ್ನ ನಗ್ನ ಫೋಟೋ ಕಳುಹಿಸು. ಇಲ್ಲವಾದರೆ ನಿನ್ನ ನಗ್ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವೆ’ ಬೆದರಿಸಿದ್ದಾನೆ. ಇದರಿಂದ ಹೆದರಿಕೊಂಡ ಸಂತ್ರಸ್ತೆ, ಆ ಅಪರಿಚಿತನಿಗೆ ನಗ್ನ ಫೋಟೋಗಳನ್ನು ಕಳುಹಿಸಿದ್ದಾರೆ.

ಏ.9ರಂದು ಸಂತ್ರಸ್ತೆಯ ನಗ್ನ ಫೋಟೋ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಲವರಿಗೆ ಹಂಚಿಕೆಯಾಗಿದೆ. ಅಷ್ಟೇ ಅಲ್ಲದೆ, ಸಂತ್ರಸ್ತೆಯ ಮಾವನ ಫೇಸ್‌ಬುಕ್‌ ಐಡಿಗೂ ಕಳುಹಿಸಲಾಗಿದೆ. ಮೊದಲಿಗೆ ತಾಯಿಯ ಫೋಟೋವನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಬಳಿಕ ಬೆದರಿಸಿ ನನ್ನ ನಗ್ನ ಫೋಟೋ ಪಡೆದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಅನಾಮಿಕ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ. ಈ ದೂರಿನ ಮೇರೆಗೆ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುವತಿಯ ಫೋಟೋ ಅಶ್ಲೀಲವಾಗಿ ಎಡಿಟ್‌ ಮಾಡಿ ₹5 ಸಾವಿರಕ್ಕೆ ಬೇಡಿಕೆ:

 ಬೆಂಗಳೂರು :  ದುಷ್ಕರ್ಮಿಯೊಬ್ಬ ಯುವತಿಯೊಬ್ಬಳ ಪೋಟೋವನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಐದು ಸಾವಿರ ಹಣಕ್ಕೆ ಬೇಡಿಕೆ ಇರಿಸಿರುವ ಆರೋಪದಡಿ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.23 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಯ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

ನ್ಯೂ ಅಪ್‌ ಡೌನ್‌ ಅಫೀಶೀಯಲ್‌ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಏ.9ರ ರಾತ್ರಿ 9 ಗಂಟೆ ಸುಮಾರಿಗೆ ಅಶ್ಲೀಲ ವಿಡಿಯೋಗೆ ಸಂತ್ರಸ್ತೆಯ ಮುಖ ಎಡಿಟ್‌ ಮಾಡಿ ಜೋಡಿಸಿರುವ ವಿಡಿಯೋವನ್ನು ಹಾಕಲಾಗಿದೆ.ಈ ಬಗ್ಗೆ ಸಂತ್ರಸ್ತೆಯ ಗಮನಕ್ಕೆ ಬಂದಾಗ ಅಪರಿಚಿತ ವ್ಯಕ್ತಿಗೆ ಮೆಸೇಜ್‌ ಕಳುಹಿಸಿ ಪ್ರಶ್ನಿಸಿದ್ದಾರೆ. ₹5 ಸಾವಿರ ನೀಡಿದರೆ, ವಿಡಿಯೋ ಡಿಲೀಟ್‌ ಮಾಡುವುದಾಗಿ ಆತ ಹೇಳಿದ್ದಾನೆ. ಡಿಲೀಟ್‌ ಮಾಡದ್ದಿದ್ದರೆ ಪೊಲೀಸರಿಗೆ ವಿಚಾರ ತಿಳಿಸುತ್ತೇನೆ ಎಂದು ಸಂತ್ರಸ್ತೆ ಹೇಳಿದಾಗ, ಪೊಲೀಸರು ದಿನ ನಮ್ಮ ಮನೆಗೆ ಬಂದು ಹೋಗುತ್ತಾರೆ ಎಂದು ದುಷ್ಕರ್ಮಿ ಮೆಸೇಜ್‌ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಈ ಅಪರಿಚಿತ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ದೂರಿನಲ್ಲಿ ಕೋರಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಯ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- - -

ಚಾಕೋಲೆಟ್‌ ಆಸೆಗೆ ತೋರಿಸಿ ಬಾಲಕಿಗೆ ಲೈಂಗಿಕ ಕಿರುಕುಳಕನ್ನಡಪ್ರಭ ವಾರ್ತೆ ಬೆಂಗಳೂರುಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸಚಿನ್‌ ಮತ್ತು ಶೇಖರ್ ಬಂಧಿತರು. ಆರೋಪಿಗಳು ಇತ್ತೀಚೆಗೆ ಮನೆ ಸಮೀಪ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದರು. ಈ ಸಂಬಂಧ ಸಂತ್ರಸ್ತೆ ಪೋಷಕರು ನೀಡಿದ ದೂರಿನ ಮೇರೆಗೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಕಿಯ ಮನೆ ಸಮೀಪವೇ ಆರೋಪಿಗಳು ವಾಸವಿದ್ದರು. ಪೋಷಕರು ಮನೆಯಲ್ಲಿ ಇಲ್ಲದಿರುವಾಗ ಬಾಲಕಿಗೆ ಚಾಕೋಲೆಟ್‌ ಹಾಗೂ ಬೊಂಬೆ ಕೊಡಿಸುವುದಾಗಿ ಪುಸಲಾಯಿಸಿ, ಮನೆಗೆ ಕರೆದೊಯ್ದು ವಿವಸ್ತ್ರಗೊಳಿಸಿ ದೌರ್ಜನ್ಯ ಎಸೆಗಿದ್ದಾರೆ. ಬಾಲಕಿಯನ್ನು ಮನೆಗೆ ಕರೆದೊಯ್ಯುತ್ತಿರುವ ಬಗ್ಗೆ ಸ್ಥಳೀಯರು ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಈ ವೇಳೆ ಪೋಷಕರು ಮನೆ ಬಳಿ ತೆರಳಿ ನೋಡಿದಾಗ ಆರೋಪಿಗಳು ಬಾಲಕಿ ಮೇಲೆ ದೌರ್ಜನ್ಯ ಎಸಗುತ್ತಿರುವುದು ಕಂಡು ಬಂದಿದೆ. ಕೂಡಲೇ ಪೋಷಕರು ಹಾಗೂ ಸ್ಥಳೀಯರು ಇಬ್ಬರು ಆರೋಪಿಗಳನ್ನು ಹಿಡಿದು ಧರ್ಮದೇಟು ನೀಡಿ, ಪೊಲೀಸ್‌ ಠಾಣೆಗೆ ಕರೆತಂದಿದ್ದಾರೆ. ಪೋಷಕರು ನೀಡಿದ ದೂರಿನ ಮೇರೆಗೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.