ಸಾರಾಂಶ
ಬೆಂಗಳೂರು : ಅಕ್ರಮವಾಗಿ ಶ್ರೀಗಂಧದ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪಿಯನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಕೋಮಲಾಪುರ ಗ್ರಾಮದ ಕೆ.ವಿ.ಶರತ್ (24) ಬಂಧಿತ. ಆರೋಪಿಯಿಂದ ₹14.60 ಲಕ್ಷ ಮೌಲ್ಯದ 146 ಕೆ.ಜಿ. 300 ಗ್ರಾಂ ಶ್ರೀಗಂಧದ ಮರದ ತುಂಡುಗಳು ಜಪ್ತಿ ಮಾಡಲಾಗಿದೆ.
ಡಿ.5ರಂದು ಸಂಜೆ ಕನಕಪುರ ಮುಖ್ಯರಸ್ತೆ ಕಡೆಯಿಂದ ಗುಬ್ಬಲಾಳ ಮೂಲಕ ಉತ್ತರಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ಬೊಲೆರೋ ವಾಹನದಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಕಳ್ಳ ಸಾಗಣೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ.
ಕೊಡಗಿನಲ್ಲಿ ಕಳವು:
ಆರೋಪಿ ಶರತ್ ವೃತ್ತಿಯಲ್ಲಿ ಚಾಲಕನಾಗಿದ್ದಾನೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಪೈಕಿ ಎರಡನೇ ಆರೋಪಿ ಕೊಡಗು, ವಿರಾಜಪೇಟೆ, ಸಿದ್ಧಾಪುರದ ಅರಣ್ಯಗಳಿಗೆ ಸೌದೆ ತರುವ ನೆಪದಲ್ಲಿ ಹೋಗಿ ಶ್ರೀಗಂಧದ ಮರಗಳನ್ನು ಕಡಿದು ತಂದು ಪಿರಿಯಾಪಟ್ಟಣದ ತನ್ನ ಮನೆ ಹಾಗೂ ಜಮೀನಿನಲ್ಲಿ ಬಚ್ಚಿಡುತ್ತಿದ್ದ. ಗಿರಾಕಿಗಳನ್ನು ಹುಡುಕಿ ಮಾರಾಟ ಮಾಡಿಸಿಕೊಡುವಂತೆ ಮೂರನೇ ಆರೋಪಿಗೆ ಹೇಳುತ್ತಿದ್ದ.
ಪೊಲೀಸರ ಬಲೆಗೆ:
ಈ ಮೂರನೇ ಆರೋಪಿ ಬೆಂಗಳೂರಿನಲ್ಲಿ ಗಿರಾಕಿ ಹುಡುಕಿ ಮಾಲು ತಲುಪಿಸುತ್ತಿದ್ದ. ಅದರಂತೆ ಮೂರನೇ ಆರೋಪಿಯು ಶರತ್‌ಗೆ ಶ್ರೀಗಂಧದ ಮರಗಳನ್ನು ಉತ್ತರಹಳ್ಳಿಗೆ ಸಾಗಿಸುವಂತೆ ಸೂಚಿಸಿದ್ದ. ಉತ್ತರಹಳ್ಳಿ ತಲುಪಿದ ಬಳಿಕ ಗಿರಾಕಿಯ ಲೊಕೇಶನ್ ಕಳುಹಿಸುವಾಗಿ ಹೇಳಿದ್ದ. ಅದರಂತೆ ಶರತ್ ತನ್ನ ಬೊಲೆರೋ ವಾಹನದಲ್ಲಿ ಶ್ರೀಗಂಧದ ಮರಗಳನ್ನು ತುಂಬಿಕೊಂಡು ಉತ್ತರಹಳ್ಳಿಗೆ ಬಂದಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.