ಸಾರಾಂಶ
ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ಅರಣ್ಯದಲ್ಲಿ ಶ್ರೀಗಂಧದ ಮರ ಕಡಿದು ಕಳವು ಮಾಡಲು ಯತ್ನಿಸಿದ ಆರೋಪಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಮನಗರದದ ಇರುಳಿಗರ ದೊಡ್ಡಿ ಗ್ರಾಮದ ನಿವಾಸಿ ಸಾಕಯ್ಯ ಅಲಿಯಾಸ್ ಸಾಕಾ(33) ಬಂಧಿತ. ಆರೋಪಿಯಿಂದ ₹5 ಲಕ್ಷ ಮೌಲ್ಯದ 115.5 ಕೆ.ಜಿ. ತೂಕದ ಶ್ರೀಗಂಧದ ಮರದ ತುಂಡುಗಳು, ಮರ ಕಡಿಯಲು ಬಳಸಿದ್ದ ಉಪಕರಣಗಳು ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ.
ಸೆಕ್ಯುರಿಟಿ ಅಧಿಕಾರಿ ಕಂಡು ದೌಡು:
ನ.13 ಮಧ್ಯರಾತ್ರಿ ದುಷ್ಕರ್ಮಿಗಳು ಜ್ಞಾನಭಾರತಿ ಕ್ಯಾಂಪಸ್‌ನ ಅರಣ್ಯದಲ್ಲಿ ಶ್ರೀಗಂಧದ ಮರ ಕಡಿಯುತ್ತಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಸೆಕ್ಯುರಿಟಿ ಜೋರು ಶಬ್ಧ ಕೇಳಿಸಿಕೊಂಡು ಸ್ಥಳಕ್ಕೆ ತೆರಳಿ ನೋಡಿದಾಗ, ನಾಲ್ವರು ಅಪರಿಚಿತರು ಶ್ರೀಗಂಧದ ಮರ ಕಡಿಯುತ್ತಿರುವುದು ಕಂಡು ಬಂದಿದೆ. ಬಳಿಕ ಸೆಕ್ಯುರಿಟಿಯನ್ನು ಕಂಡು ದುಷ್ಕರ್ಮಿಗಳು ಮರ ಕಡಿಯುವ ಉಪಕರಣಗಳನ್ನು ಸ್ಥಳದಲ್ಲೇ ಬಿಟ್ಟು ಪಾರಾಗಿದ್ದಾರೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಮೊಬೈಲ್ ಸುಳಿವು ಆಧರಿಸಿ ಬಂಧನ:
ಪ್ರಕರಣದ ತನಿಖೆ ವೇಳೆ ಘಟನಾ ಸ್ಥಳದಲ್ಲಿ ಸಿಕ್ಕ ಮೊಬೈಲ್ ಸುಳಿವು ಆಧರಿಸಿ ರಾಮನಗರದ ಇರುಳಿಗರ ದೊಡ್ಡಿಯಲ್ಲಿ ಆರೋಪಿ ಸಾಕಯ್ಯನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ಶ್ರೀಗಂಧದ ಮರ ಕಡಿದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅಂತೆಯೆ ತಮ್ಮದೇ ಗ್ರಾಮದ ಇನ್ನೂ ಮೂವರು ಭಾಗಿಯಾಗಿರುವುದಾಗಿ ಬಾಯ್ಬಿಟ್ಟಿದ್ದಾನೆ. ಸದ್ಯ ಈ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.
ಈ ಹಿಂದೆ ಸಹ ಜೈಲು ಸೇರಿದ್ದ:
ಬಂಧಿತ ಆರೋಪಿ ಸಾಕಯ್ಯ ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಈತನ ವಿರುದ್ಧ ಈ ಹಿಂದೆ ಜ್ಞಾನಭಾರತಿ ಮತ್ತು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಶ್ರೀಗಂಧ ಮರ ಮರಕಳವು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಗೆ ಬಂದಿದ್ದ. ನಂತರವೂ ಆರೋಪಿ ತನ್ನ ಹಳೇ ಚಾಳಿ ಮುಂದುವರೆಸಿದ್ದ. ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಸದ್ಯ ಆರೋಪಿ ಸಾಕಯ್ಯನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.