ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರವಾಗಿ ಶಂಕೆ: ಯುವಕನಿಗೆ ಗುಂಡೇಟು..!

| Published : Oct 14 2024, 01:32 AM IST / Updated: Oct 14 2024, 05:10 AM IST

ಸಾರಾಂಶ

ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರವಾಗಿ ಮಂಜು ಜೊತೆ ಶಿವರಾಜು ಮತ್ತೆ ಜಗಳ ತೆಗೆದಿದ್ದಾನೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಏಕಾಏಕಿ ಶಿವರಾಜು ತನ್ನ ಬಳಿ ಇದ್ದ ಪಿಸ್ತೂಲ್ ತೆಗೆದು ಮಂಜು ತಲೆಗೆ ಗುಂಡು ಹಾರಿಸಿದ್ದಾನೆ 

 ಪಾಂಡವಪುರ : ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿರುವ ಅನುಮಾನ ವ್ಯಕ್ತಪಡಿಸಿ ವ್ಯಕ್ತಿಯೊಬ್ಬ ಯುವಕನೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ಶಂಭೂನಹಳ್ಳಿಯಲ್ಲಿ ಭಾನುವಾರ ನಡೆದಿದೆ.

ಗ್ರಾಮದ ಮಂಜು (26) ಗುಂಡಿನ ದಾಳಿಗೊಳಗಾದ ಯುವಕ. ಅದೇ ಗ್ರಾಮದ ಶಿವರಾಜು (37) ಎಂಬಾತ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಆರೋಪಿಯಾಗಿದ್ದಾನೆ.

ನಡೆದಿದ್ದೇನು?

ಶಂಭೂನಹಳ್ಳಿಯ ಶಿವರಾಜು ಕಳೆದ ಹತ್ತು ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡಿಕೊಂಡಿದ್ದನು. ಮಂಜು ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು. ಪತ್ನಿಯೊಂದಿಗೆ ಮಂಜು ಅಕ್ರಮ ಸಂಬಂಧ ಹೊಂದಿದ್ದನೆಂಬ ಶಂಕೆ ಶಿವರಾಜುಗೆ ಮೊದಲಿನಿಂದಲೂ ಇತ್ತು. ಇದೇ ವಿಚಾರವಾಗಿ ಪತ್ನಿಯೊಂದಿಗೆ ಅನೇಕ ಬಾರಿ ಜಗಳವಾಗಿತ್ತು ಎನ್ನಲಾಗಿದೆ.

ಕಳೆದ ಮೂರು ವರ್ಷಗಳ ಹಿಂದೆ ಶಿವರಾಜು ಶಂಭೂನಹಳ್ಳಿಗೆ ಆಗಮಿಸಿದ್ದ ವೇಳೆ ಇದೇ ವಿಚಾರವಾಗಿ ಮಂಜುಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದನು. ಆ ನಂತರ ಗ್ರಾಮದ ಮುಖಂಡರು ರಾಜೀ ಸಂಧಾನ ಮಾಡಿ ಸಮಾಧಾನಪಡಿಸಿದ್ದರು. ಆ ನಂತರ ಶಿವರಾಜು ಮುಂಬೈಗೆ ತೆರಳಿದ್ದನಾದರೂ ಮಂಜು ಮೇಲೆ ದ್ವೇಷವನ್ನು ಮುಂದುವರೆಸಿದ್ದನು ಎಂದು ತಿಳಿದುಬಂದಿದೆ.

ಮಂಜು ಕೊಲೆಗೆ ಕಳೆದ ಆರು ತಿಂಗಳಿಂದ ಸಿದ್ಧತೆ ಮಾಡಿಕೊಂಡಿದ್ದ ಶಿವರಾಜು ಮುಂಬೈನ ಚೋರ್ ಬಜಾರ್‌ನಲ್ಲಿ ಮೂರೂವರೆ ಲಕ್ಷ ರು. ಹಣ ಕೊಟ್ಟು ಎರಡು ಪಿಸ್ತೂಲ್ ಖರೀದಿಸಿದ್ದನು. ಕೊಲೆ ಮಾಡುವ ಉದ್ದೇಶದಿಂದಲೇ ಆಯುಧ ಪೂಜೆಗೆಂದು ಮುಂಬೈನಿಂದ ಊರಿಗೆ ವಾಪಸ್ಸಾಗಿದ್ದನು.

ಪಿಸ್ತೂಲ್‌ನೊಂದಿಗೆ ಭಾನುವಾರ ಬೆಳಗ್ಗೆ ಮನೆಯಿಂದ ಹೊರಟ ಶಿವರಾಜುಗೆ ಎದುರಿನಿಂದ ಮಂಜು ಮುಖಾಮುಖಿಯಾಗಿದ್ದಾನೆ.

ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರವಾಗಿ ಮಂಜು ಜೊತೆ ಶಿವರಾಜು ಮತ್ತೆ ಜಗಳ ತೆಗೆದಿದ್ದಾನೆ.

ಇದೇ ವೇಳೆ ಮಾತಿಗೆ ಮಾತು ಬೆಳೆದು ಏಕಾಏಕಿ ಶಿವರಾಜು ತನ್ನ ಬಳಿ ಇದ್ದ ಪಿಸ್ತೂಲ್ ತೆಗೆದು ಮಂಜು ತಲೆಗೆ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸಿದಾಗ ಮಂಜು ಸ್ವಲ್ಪ ಬಾಗಿದ್ದರಿಂದ ಗುಂಡು ತಲೆ ಬಲಭಾಗವನ್ನು ಸವರಿಕೊಂಡು ಹೋಗಿದೆ. ಇದರಿಂದ ಆಘಾತಕ್ಕೊಳಗಾದ ಮಂಜು ಸ್ಥಳದಲ್ಲಿಯೇ ಬಿದ್ದಿದ್ದಾನೆ.

ಗಾಬರಿಗೊಂಡ ಶಿವರಾಜು ಪಿಸ್ತೂಲ್‌ನ್ನು ಅಲ್ಲಿಯೇ ಬಿಸಾಡಿ ಓಡಿ ಹೋಗುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಆತನನ್ನು ಹಿಂಬಾಲಿಸಿ ಹಿಡಿದು ಕಂಬಕ್ಕೆ ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡು ಮಂಜುನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್‌ಪಿ ತಿಮ್ಮಯ್ಯ, ಡಿವೈಎಸ್‌ಪಿ ಮುರಳಿ, ಸಬ್ ಇನ್ಸ್‌ಪೆಕ್ಟರ್ ಉಮೇಶ್ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಪಿಸ್ತೂಲ್, ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.