ಸಾರಾಂಶ
ಬೆಂಗಳೂರು : ಆಯತಪ್ಪಿ ರಸ್ತೆಗೆ ಬಿದ್ದ ಬಾಲಕನ ತಲೆಮೇಲೆ ಗೂಡ್ಸ್ ವಾಹನದ ಚಕ್ರ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಅ.11 ಸಂಜೆ ಸುಮಾರು 6 ಗಂಟೆಗೆ ನಾಗವಾರದ ಕುಪ್ಪಸ್ವಾಮಿ ಲೇಔಟ್‌ನ 10ನೇ ಕ್ರಾಸ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಿಎಚ್‌ಇಎಲ್‌ನ ಬಾಪೂಜಿನಗರದ ನಿವಾಸಿ ತನ್ವೀರ್ ಪಾಷಾ ಎಂಬುವವರ ಪುತ್ರ ತಾಹೀರ್ ಪಾಷಾ(5) ಮೃತ ದುರ್ದೈವಿ. ಈ ಸಂಬಂಧ ಗೂಡ್ಸ್ ವಾಹನ ಜಪ್ತಿ ಮಾಡಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ಬಾಲಕ ತಾಹೀರ್ ಪಾಷಾ ಕುಪ್ಪಸ್ವಾಮಿ ಲೇಔಟ್‌ನ 10ನೇ ಕ್ರಾಸ್‌ನಲ್ಲಿ ಓಡಿ ಬರುವಾಗ ರಸ್ತೆ ಬದಿ ನಿಲುಗಡೆ ಮಾಡಿದ್ದ ಬೈಕ್ ಹ್ಯಾಂಡಲ್‌ಗೆ ಗುದ್ದಿಕೊಂಡಿದ್ದಾನೆ. ಈ ವೇಳೆ ಆಯತಪ್ಪಿ ಬಾಲಕ ರಸ್ತೆಗೆ ಬಿದ್ದಿದ್ದಾನೆ. ಇದೇ ವೇಳೆ ಹಿಂದೆ ಬರುತ್ತಿದ್ದ ಗೂಡ್ಸ್ ವಾಹನದ ಹಿಂದಿನ ಎಡ ಚಕ್ರಗಳು ಬಾಲಕನ ತಲೆ ಮೇಲೆ ಉರುಳಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಸ್ಥಳೀಯರು ಹಾಗೂ ಕುಟುಂಬದವರು ಸಮೀಪದ ಆಸ್ಪತ್ರೆಗೆ ಕರೆದುಯ್ಯವಾಗ ಮಾರ್ಗಮಧ್ಯಯೇ ಬಾಲಕ ಮೃತಪಟ್ಟಿದ್ದಾನೆ. ಈ ಸಂಬಂಧ ಕೆ.ಜಿ.ಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.