ಸಾರಾಂಶ
ಬೆಂಗಳೂರು : ರಾಜಧಾನಿಯಲ್ಲಿ ದುರುಳನೊಬ್ಬ ನಾಯಿ ಹಾಗೂ ಅದರ ಪುಟ್ಟ ಮರಿಗಳ ಮೇಲೆ ಕಾರು ಚಲಾಯಿಸಿ ಕ್ರೌರ್ಯ ಮೆರೆದಿರುವ ಘಟನೆ ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಳ್ಳಂದೂರಿನ ಸನ್ ಸಿಟಿ ಅಪಾರ್ಟ್‌ಮೆಂಟ್ ಹಿಂಭಾಗ ನಡೆದಿದೆ. ಕಾರು ಚಾಲಕನ ದುಷ್ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿರುವ ಸಾರ್ವಜನಿಕರು ಮೂಕಪ್ರಾಣಿಗಳ ಮೇಲಿನ ಈ ಕ್ರೌರ್ಯ ಮೆರೆದ ಕಾರು ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸರನ್ನು ಆಗ್ರಹಿಸಿದ್ದಾರೆ.
ನಾಯಿ ಹಾಗೂ ಸುಮಾರು 6 ಮರಿಗಳು ರಸ್ತೆಯಲ್ಲಿ ಆಟವಾಡುತ್ತಿದ್ದವು. ಇದೇ ಸಮಯಕ್ಕೆ ಕಾರು ಚಾಲಕನೊಬ್ಬ ಉದ್ದೇಶಪೂರ್ವಕವಾಗಿ ಕಾರನ್ನು ಹಿಂಬದಿ ಚಲಿಸಿ ಬಳಿಕ ನಾಯಿ ಹಾಗೂ ಮರಿಗಳಿಗೆ ಗುದ್ದಿಸಿಕೊಂಡು ಮಂದೆ ಹೋಗಿದ್ದಾನೆ. ಕಾರು ಚಾಲಕನ ಈ ಅಮಾನವೀಯ ಕೆಲಸ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನೆಟ್ಟಿಗರು, ಕಾರು ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ನಗರ ಪೊಲೀಸರು, ಘಟನೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.