ಪತ್ನಿಯ ಮೇಲೆ ಅನೈತಿಕ ಸಂಬಂಧದ ಅನುಮಾನ ವ್ಯಕ್ತಪಡಿಸಿ ಮಗನೊಂದಿಗೆ ಸೇರಿ ಉಸಿರುಗಟ್ಟಿಸಿ ಕೊಲೆಗೈದಿದ್ದ ಪತಿಗೆ ಮಂಡ್ಯದ ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ರಾಮನಗರ ಎಕ್ಸ್‌ಟೆನ್ಷನ್ ಲೇಔಟ್ ವಾಸಿ ಅಜೀಮ್ ಖಾನ್ (೩೯) ಶಿಕ್ಷೆಗೊಳಗಾದ ಅಪರಾಧಿ.

 ಮಂಡ್ಯ : ಪತ್ನಿಯ ಮೇಲೆ ಅನೈತಿಕ ಸಂಬಂಧದ ಅನುಮಾನ ವ್ಯಕ್ತಪಡಿಸಿ ಮಗನೊಂದಿಗೆ ಸೇರಿ ಉಸಿರುಗಟ್ಟಿಸಿ ಕೊಲೆಗೈದಿದ್ದ ಪತಿಗೆ ಮಂಡ್ಯದ ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ರಾಮನಗರ ಎಕ್ಸ್‌ಟೆನ್ಷನ್ ಲೇಔಟ್ ವಾಸಿ ಅಜೀಮ್ ಖಾನ್ (39) ಶಿಕ್ಷೆಗೊಳಗಾದ ಅಪರಾಧಿ. ಈತನ ಪತ್ನಿ ಸಲ್ಮಾ ಬೇಗಂ ಕೊಲೆಯಾದ ಮಹಿಳೆ.

ಕಳೆದ 20 ವರ್ಷಗಳ ಹಿಂದೆ ಸಲ್ಮಾ ಬೇಗಂಳನ್ನು ಮದುವೆಯಾದ ಅಜೀಮ್‌ಖಾನ್ ಮೂರು ವರ್ಷಗಳ ಕಾಲ ಅನ್ಯೋನ್ಯತೆಯಿಂದ ಜೀವನ ನಡೆಸಿದ್ದರು. ಆನಂತರ ಅಜೀಮ್‌ಖಾನ್ ಪತ್ನಿ ಸಲ್ಮಾಬೇಗಂ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಲು ಶುರುಮಾಡಿದ. ಸಲ್ಮಾ ಬೇಗಂ ಯಾವುದೇ ಗಂಡಸರ ಜೊತೆ ಮಾತನಾಡಿದರೂ ಅವರೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಅನುಮಾನಿಸಿ ಪತ್ನಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ, ಕಿರುಕುಳ ನೀಡಲಾರಂಭಿಸಿದನು.

ಪತಿಯ ವರ್ತನೆಯ ಬಗ್ಗೆ ಸಲ್ಮಾ ಬೇಗಂ ತನ್ನ ತಂದೆ, ಸಹೋದರರು ಮತ್ತು ಸಹೋದರಿಗೆ ವಿಚಾರ ತಿಳಿಸಿದ್ದಳು. ಅವರೆಲ್ಲರೂ ಸಲ್ಮಾ ಬೇಗಂಗೆ ಧೈರ್ಯ ಹೇಳಿ ಅನುಸರಿಸಿಕೊಂಡು ಜೀವನ ಮಾಡು ಎಂದಿದ್ದರು. ಆದರೂ ಪತಿಯೊಂದಿಗೆ ಹೊಂದಾಣಿಕೆಯೊಂದಿಗೆ ಜೀವನ ನಡೆಸುತ್ತಿದ್ದರೂ ಅಜೀಮ್‌ಖಾನ್ ನೀನು ಅಜಾಂ ಪಾಷ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಶೀಲ ಶಂಕಿಸಿ 8 ಮೇ 2023 ರಂದು ಪತ್ನಿ ಸಲ್ಮಾ ಬೇಗಂ ಜೊತೆ ಜಗಳ ತೆಗೆದನು.

ಮಗನ ಜೊತೆ ಸೇರಿಕೊಂಡು ಸಲ್ಮಾ ಬೇಗಂನನ್ನು ಕೊಲೆ

ಆರೋಪಿ ಮತ್ತು ಮಗನ ಜೊತೆ ಸೇರಿಕೊಂಡು ಸಲ್ಮಾ ಬೇಗಂನನ್ನು ಕೊಲೆ ಮಾಡಬೇಕೆಂದು ಬೆಳಗ್ಗೆ ೮.೩೦ಕ್ಕೆ ಸಂಚು ರೂಪಿಸಿದನು. ತಾವು ವಾಸವಿದ್ದ ಮಳವಳ್ಳಿ ತಾಲೂಕು ಧನಗೂರು ಗ್ರಾಮದ ಅಬ್ದುಲ್ ಜಬ್ಬಾರ್‌ರವರ ಮನೆಯಲ್ಲಿ ಬೆಳಗ್ಗೆ ಸುಮಾರು 11.೦೦ ಗಂಟೆ ಸಮಯದಲ್ಲಿ ಸಲ್ಮಾ ಬೇಗಂ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿ ತನ್ನ ಮಗನೊಂದಿಗೆ ಸೇರಿ ಸಲ್ಯಾ ಬೇಗಂನೊಂದಿಗೆ ಜಗಳ ತೆಗೆದು ಬೆಡ್‌ರೂಂನ ಮಂಚದ ಮೇಲೆ ಕೆಡವಿದನು. ಆ ಸಮಯದಲ್ಲಿ ಮಗ ತನ್ನ ತಾಯಿಯ ಎರಡು ಕೈಗಳನ್ನು ಹಿಡಿದುಕೊಂಡಾಗ ಆರೋಪಿಯು ತನ್ನ ಕೈಗಳಿಂದ ಪತ್ನಿ ಸಲ್ಮಾ ಬೇಗಂ ಕುತ್ತಿಗೆಯನ್ನು ಅದುಮಿ ಉಸಿರುಗಟ್ಟಿಸಿ ನಂತರ ಪಕ್ಕದಲ್ಲೇ ಇದ್ದ ತಲೆದಿಂಬನ್ನು ತೆಗೆದುಕೊಂಡು ಮುಖದ ಮೇಲೆ ಅದುಮಿ ಉಸಿರುಗಟ್ಟಿಸಿ ಕೊಲೆಗೈದಿದ್ದನು. ನಂತರದಲ್ಲಿ ಹಲಗೂರು ಪೊಲೀಸರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಸಾಕ್ಷ್ಯಧಾರಗಳನ್ನು ಪರಿಗಣಿಸಿ ಜೀವಾವಧಿ ಶಿಕ್ಷೆ

ಈ ಪ್ರಕರಣವು ಮಂಡ್ಯದ ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಸಾಕ್ಷ್ಯಧಾರಗಳನ್ನು ಪರಿಗಣಿಸಿ ನ್ಯಾಯಾಲಯವು ಕಲಂ. ೪೯೮(ಎ), ೧೨೦(ಬಿ), ೩೦೨ ಐ.ಪಿ.ಸಿ ರೀತ್ಯಾ ಆರೋಪಿಯು ತನ್ನ ಮಗನೊಂದಿಗೆ ಸೇರಿ ಪತ್ನಿಯನ್ನು ಕೊಲೆ ಮಾಡಿರುವುದು ದೃಢಪಟ್ಟಿದ್ದರಿಂದ ನ್ಯಾಯಾಧೀಶರಾದ ಸಯೀದುನ್ನಿಸಾರವರು ಮೇಲ್ಕಂಡ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು1 ಲಕ್ಷ ರು. ದಂಡ. ಭಾದಂಸಂ ಕಲಂ. 120(ಬಿ)ರ ಅಡಿಯಲ್ಲಿನ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು ೧ಲಕ್ಷ ರು. ದಂಡ, ಭಾದಂಸಂ ಕಲಂ.೪೯೮(ಎ)ರ ಅಡಿಯಲ್ಲಿನ ಅಪರಾಧಕ್ಕೆ ೨ ವರ್ಷಗಳ ಸಜೆ ಮತ್ತು ೨೫ ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಕೆ.ನಾಗರಾಜು ಅವರು ವಾದ ಮಂಡಿಸಿದ್ದರು.