ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿರು ಬೇಸಿಗೆಯ ಸುಡು ಬಿಸಿಲಿನಿಂದ ತತ್ತರಿಸಿದ್ದ ರಾಜಧಾನಿಯ ಜನತೆಗೆ ಬುಧವಾರ ಸಂಜೆ ಗುಡುಗು, ಸಿಡಿಲು, ಆಲಿಕಲ್ಲು, ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯು ತಂಪೆರೆಯಿತು. ಕೆಲ ದಿನಗಳಿಂದ ಬೇಸಿಗೆಯ ಬಿಸಿಲಿನಿಂದ ಜನತೆ ಹೈರಾಣಾಗಿದ್ದು, ಮಧ್ಯಾಹ್ನ ಆಗುತ್ತಿದ್ದಂತೆ ಮೋಡ ಕವಿದು ತಂಪಾದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ 5.05ರಿಂದ 6.35ರವರೆಗೆ ಸುರಿದ ಭೀಕರ ಮಳೆಗೆ ರಸ್ತೆಯಲ್ಲೆಲ್ಲಾ ನೀರು ತುಂಬಿ ವಾಹನ ಸವಾರರು, ಕಾರು ಹಾಗೂ ಆಟೋಗಳು ಮುಂದೆ ಹೋಗಲು ಸಾಧ್ಯವಾಗದೆ ನಿಂತಲ್ಲೇ ನಿಲ್ಲಬೇಕಾಯಿತು. ವಾಹನಗಳಲ್ಲಿದ್ದವರು ಕೆಳಗೆ ಇಳಿಯಲೂ ಆಗದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.ಕಾಟನ್‌ಪೇಟೆ ಸುತ್ತಮುತ್ತ ಭಾರೀ ಮಳೆ:
ನಗರದ ಕೇಂದ್ರ ಭಾಗವಾದ ಕಾಟನ್‌ಪೇಟೆ ಸುತ್ತಮುತ್ತ ಭಾರೀ ಮಳೆಯಾಗಿದೆ. ಸುಭಾಷ್ ನಗರ, ಬಿನ್ನಿಪೇಟೆ, ಕೆಂಪಾಪುರ, ಕಾಟನ್‌ಪೇಟೆಯಲ್ಲಿ ಅತಿ ಹೆಚ್ಚು ಅಂದರೆ ತಲಾ 77.5 ಮಿಲಿ ಮೀಟರ್ ಮಳೆಯಾಗಿದೆ. ಈ ಪ್ರದೇಶಗಳಿಗೆ ಹೊಂದಿಕೊಂಡಂತಿರುವ ಕೆ.ಆರ್.ಮಾರ್ಕೆಟ್, ಆಜಾದ್ ನಗರ, ಚಾಮರಾಜಪೇಟೆ, ಹನುಮಂತನಗರ, ಜಗಜೀವನರಾಂ ನಗರ, ರಾಯಪುರಂ, ಛಲವಾದಿ ಪಾಳ್ಯ ಮತ್ತಿತರ ಪ್ರದೇಶಗಳಲ್ಲಿ 77 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಇನ್ನುಳಿದಂತೆ ಬಹಳಷ್ಟು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. ಎಸ್.ಕೆ.ಗಾರ್ಡನ್, ಎಚ್‌ಎಸ್‌ಆರ್ ಲೇಔಟ್, ಬೊಮ್ಮನಹಳ್ಳಿಯಲ್ಲಿ ತಲಾ 62.5 ಮಿಮೀ ಮಳೆಯಾಗಿದೆ. ಗುಟ್ಟಹಳ್ಳಿ 54, ಗುರಪ್ಪನಪಾಳ್ಯ, ಬಿಟಿಎಂ ಲೇಔಟ್‌ನಲ್ಲಿ ತಲಾ 47, ಆಡುಗೋಡಿ 39.5, ಜಯಮಹಲ್ 39, ಗಾಯತ್ರಿ ನಗರ, ಪ್ರಕಾಶ್ ನಗರ, ಶ್ರೀರಾಮ ಮಂದಿರ 37.5, ಮಾರತ್‌ಹಳ್ಳಿ, ಪಟ್ಟಾಭಿ ರಾಮನಗರ 31.5, ಎಚ್‌ಎಎಲ್ ವಿಮಾನ ನಿಲ್ದಾಣ 29.5, ಕೊಟ್ಟಿಗೆ ಪಾಳ್ಯ 27.5, ಗಣೇಶ ಮಂದಿರ, ವಿದ್ಯಾಪೀಠ, ಕತ್ತರಿ ಗುಪ್ಪೆ 24, ನಾಗಪುರ, ಸುಬ್ರಮಣ್ಯ ನಗರ 23.5, ಕೋರಮಂಗಲ 22, ಲಕ್ಷ್ಮೀದೇವಿ ನಗರ, ಲಗ್ಗೆರೆ 19.5, ಅಗರ 17.5, ವಿಜಿನನಗರ, ಸಿ.ವಿ.ರಾಮನ್ ನಗರದಲ್ಲಿ ತಲಾ 16 ಮಿಮೀ ಮಳೆಯಾಗಿದೆ.
ವಿಕ್ಟೋರಿಯಾ ಆಸ್ಪತ್ರೆಗೆ ನೀರು:
170ಕ್ಕೂ ಹೆಚ್ಚು ಮರಗಳು ಧರೆಗೆವಿಕ್ಟೋರಿಯಾ ಆಸ್ಪತ್ರೆಯ ಜೈಲುವಾರ್ಡ್‌ಗೆ ನೀರು ನುಗ್ಗಿ ಅಲ್ಲಿ ರೋಗಿಗಳು ಪರದಾಡುವಂತಾಗಿತ್ತು. ಲ್ಯಾವೆಲ್ಲೆ ರಸ್ತೆ ಕುಸಿದು ಕಾರು ಸಿಲುಕಿಕೊಂಡಿತ್ತು, ಬಿನ್ನಿ ಮಿಲ್ ರಸ್ತೆಯಲ್ಲಿ ಕಾಂಪೌಂಡ್ ಕುಸಿದು ರಸ್ತೆ ಸಂಪೂರ್ಣ ಬಂದ್ ಆಗಿ ಪ್ರಯಾಣಿಕರು ಪರದಾಡುವಂತಾಗಿತ್ತು. 170ಕ್ಕೂ ಹೆಚ್ಚು ಮರಗಳು ಮುರಿದು ಬಿದ್ದಿವೆ. 408ಕ್ಕೂ ಹೆಚ್ಚು ಮರದ ಕೊಂಬೆಗಳು ಮುರಿದುಬಿದ್ದಿವೆ. ಪರಿಣಾಮ 50ಕ್ಕೂ ಹೆಚ್ಚು ವಾಹನಗಳು ಜಖಂಗೊಂಡರೆ, ಹಲವೆಡೆ ಗೋಡೆಗಳಿಗೆ ಹಾನಿಯಾಗಿದೆ.ನಗರದಲ್ಲಿ ಇನ್ನೂ 3 ದಿನ
ಮಳೆ: ಯೆಲ್ಲೋ ಅಲರ್ಟ್ನಗರದಲ್ಲಿ ಶನಿವಾರದವರೆಗೂ ಕೆಲವು ಭಾಗಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಹಿರಿಯ ಹವಾಮಾನ ತಜ್ಞ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ. ಅಲ್ಲಲ್ಲಿ ಚದುರಿದಂತೆ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಂಟೆಗೆ 30 ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ನಗರದಲ್ಲಿ ಇನ್ನೂ ಮೂರು ದಿನ ಯೆಲ್ಲೋ ಅಲರ್ಟ್ ಇದೆ ಎಂದು ಅವರು ಸ್ಪಷ್ಟಪಡಿಸಿದರು.
ಜನರಿಂದ ಸತತ ಕರೆಗಳು,ನಿಯಂತ್ರಣ ಕೊಠಡಿ ಸ್ಥಬ್ಧ
ಮಳೆಯ ನೀರಿನಿಂದ ನಗರದ ಹಲವೆಡೆ ಅಪಾರ್ಟ್ ಮೆಂಟ್ ಗಳಲ್ಲಿ ನೀರು ತುಂಬಿ ಕಾರು, ದ್ವಿಚಕ್ರ ವಾಹನಗಳು ಹೊರಗೆ ಹೋಗಲಾರದೆ, ಒಳಗೆ ಬರಲಾಗದೆ ಪರದಾಡುವಂತಾಗಿತ್ತು. ಮಳೆಯಿಂದ ತೊಂದರೆಗೆ ಒಳಗಾದ ಸಾರ್ವಜನಿಕರು ಪೊಲೀಸ್, ಪಾಲಿಕೆ, ಅಗ್ನಿಶಾಮಕ ಇಲಾಖೆಯ ನಿಯಂತ್ರಣ ಕೊಠಡಿಗಳಿಗೆ ಕರೆ ಮಾಡುತ್ತಿದ್ದರು.ನಗರದ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್, ಕೆಂಪೇಗೌಡ ರಸ್ತೆ, ಅರಮನೆ ರಸ್ತೆ, ವಿಧಾನಸೌಧ, ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಕೆ.ಆರ್.ವೃತ್ತ, ಕಾರ್ಪೊರೇಷನ್ ವೃತ್ತ, ಸುಬ್ಬಯ್ಯ ಸರ್ಕಲ್, ರಿಚ್ಮಂಡ್ ರಸ್ತೆಗಳಲ್ಲಿ, ಕಾಟನ್ ಪೇಟೆ, ಚಿಕ್ಕಪೇಟೆಗಳ ಸುತ್ತಮುತ್ತಲಿನ ರಸ್ತೆಗಳು ಶೇಷಾದ್ರಿಪುರಂನ ರೈಲ್ವೆ ಸೇತುವೆ ಕೆಳಗೆ ನೀರು ನಿಂತ ಪರಿಣಾಮ ವಾಹನಗಳು ಸಂಚರಿಸಲು ಸಾಧ್ಯವಾಗದೆ ಅಸ್ತವ್ಯಸ್ತವಾಗಿತ್ತು. ತುರ್ತುವಾಹನಗಳೂ ಹೋಗಲು ಸಾಧ್ಯವಾಗದೆ ಸುಮಾರು 30 ನಿಮಿಷಗಳು ನಿಂತಲ್ಲೇ ನಿಲ್ಲಬೇಕಾಯಿತು. ಕರೆಗಳ ಒತ್ತಡದಿಂದಾಗಿ ನಿಯಂತ್ರಣ ಕೊಠಡಿ 112 ಸ್ಥಬ್ಧವಾಗಿತ್ತು. ಎಮೆರ್ಜೆನ್ಸಿ ಕರೆಗಳಿಗಾಗಿ ಮೀಸಲಿರುವ ಈ ಸಂಖ್ಯೆ ಸ್ಥಗಿತವಾಗಿ ಜನರು ಪರದಾಡುವಂತಾಗಿತ್ತು.
ಸಂಜೆಯ ವ್ಯಾಪಾರವೇ ಅಂತಿಮವಾಗಿತ್ತುಬೌರಿಂಗ್ ಆಸ್ಪತ್ರೆಯ ನಿರ್ಮಾಣ ಹಂತದ ತಡೆಗೋಡೆ ಕುಸಿದು ಬಿದ್ದು ಮೃತಪಟ್ಟ ಘಟನೆಯಲ್ಲಿ ಸಾವಿಗೀಡಾದವರಲ್ಲಿ ಒಬ್ಬೊಬ್ಬರದ್ದು ಒಂದೊಂದು ಕತೆ. ಜೆ.ಸಿ.ನಗರದ ಮುನಿರೆಡ್ಡಿಪಾಳ್ಯದ ನಿವಾಸಿ ಮಹಮದ್ ಅಬ್ದುಲ್ ಹಕ್ ಶಿವಾಜಿನಗರಕ್ಕೆ ಹೊಂದಿಕೊಂಡಂತಿದ್ದ ಕೌಂಪೌಂಡ್‌ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಮಳೆ ಬೀಳುವ ಮುನ್ನ ಸಂಜೆ ವೇಳೆಗೆ ಮಾಡಿದ್ದ ವ್ಯಾಪಾರವೇ ಅಂತಿಮವಾಗಿತ್ತು. ಸಾವಿನ ವಿಷಯ ತಿಳಿಯುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಡಿ.ಜೆ.ಹಳ್ಳಿಯ ಬೈರಸಂದ್ರ ನಿವಾಸಿ ಶೇಖ್ ಮೆಹಮೂಬ್ ಎಂಬುವವರ ಮಗ ಫಯಾಜ್ ಅಹಮದ್ ಇದೇ ಸ್ಥಳದಲ್ಲಿ ಚಪ್ಪಲಿ ವ್ಯಾಪಾರ ಮಾಡುತ್ತಿದ್ದರು. ಚಪ್ಪಲಿ ಎಲ್ಲಾ ಒಟ್ಟುಗೂಡಿಸಿ ಪೊಟ್ಟಣ ಕಟ್ಟುವಷ್ಟರಲ್ಲಿ ಗೋಡೆ ಯಮರೂಪಿಯಾಗಿ ಬಿತ್ತು. ಕೆ.ಜಿ.ಹಳ್ಳಿಯ ಮಕ್ಕಾ ಮಸೀದಿಯ 1ನೇ ಕ್ರಾಸ್ ನಿವಾಸಿ ಚಾಂದ್ ಪಾಷಾ ಎಂಬುವರ ಮಗಳು 6 ವರ್ಷದ ಮುಸ್ಸಾವಿರ್ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದಳು. ಅದೇ ಸಮಯದಲ್ಲಿ ಮಳೆ ಬಂದ ಕಾರಣ ಟಾರ್ಪಲ್ ಆಶ್ರಯ ಪಡೆಯಲು ತೆರಳಿದ್ದಳು.ಮುಖ್ಯಮಂತ್ರಿ, ಸಿಎಸ್ ಮನೆ
ಮುಂದಿನ ಮರ ಬಿದ್ದು ಅವಾಂತರಬಿರುಗಾಳಿಗೆ ಮುಖ್ಯಮಂತ್ರಿ ನಿವಾಸ, ಮುಖ್ಯಕಾರ್ಯದರ್ಶಿಗಳ ನಿವಾಸದ ರಸ್ತೆಗಳಲ್ಲಿದ್ದ ಮರಗಳು ಬಿದ್ದು ಇಲ್ಲಿಯೂ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಲು ಪಾಲಿಕೆ, ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಪರದಾಡಬೇಕಾಯಿತು.