ಎಸ್‌ಐಆರ್ ಭಯದಿಂದ ಮತಕ್ಕೆ ಬಂದೇ ಬರುವ ನಿರೀಕ್ಷೆ
ಬೂತ್‌ಗೆ ಹೆಂಡತಿ ಬಂದಾಗ ಕ್ಯಾಚ್ । ಜಡೆ ಎಳೆದು ಕಿಡಿಸಿಲಿಗುರಿ (ಪಶ್ಚಿಮ ಬಂಗಾಳ): 2 ವರ್ಷಗಳ ಹಿಂದೆ ಬೇರೊಬ್ಬ ವ್ಯಕ್ತಿಯ ಜೊತೆ ಓಡಿಹೋಗಿದ್ದ ಹೆಂಡತಿಯನ್ನು, ಮತಗಟ್ಟೆಯ ಬಳಿ 5 ತಾಸು ಕಾದು ಕುಳಿತು, ಹಿಡಿಯುವಲ್ಲಿ ಆಕೆಯ ಪತಿ ಯಶಸ್ವಿಯಾಗಿದ್ದಾನೆ. ಈ ಘಟನೆ ಸಿಲಿಗುರಿ ಉಪವಿಭಾಗದ ಮತಿಗರಾ-ನಕ್ಸಲ್‌ಬಾರಿ ವಿಧಾನಸಭಾ ಕ್ಷೇತ್ರದ ಫಾನ್ಸಿದೇವಾದ ತಾರಾಬರಿಯ ಬೂತ್ ಸಂಖ್ಯೆ 25/238ರಲ್ಲಿ ಗುರುವಾರ ನಡೆದಿದೆ.
ಪತ್ನಿ ಕೈಗೆ ಸಿಕ್ಕ ಕೂಡಲೇ ಆಕೆಯ ಕೂದಲು ಎಳೆದಾಡಿ, ಹಲ್ಲೆಗೆ ಮುಂದಾಗಿದ್ದಾನೆ. ಆಗ ಆಕ್ರೋಶಿತ ಪತಿಯನ್ನು ಸಿಎಪಿಎಫ್ ಸಿಬ್ಬಂದಿ ತಡೆದು, ಮಹಿಳೆಯನ್ನು ರಕ್ಷಿಸಿದ್ದಾರೆ.ಏನಿದು ಪ್ರಕರಣ?: ಮತಗಟ್ಟೆಯ ಎದುರು ಮುಂಜಾನೆಯಿಂದಲೇ ವ್ಯಕ್ತಿಯೊಬ್ಬ ಸುಮ್ಮನೆ ನಿಂತಿದ್ದ. ಯಾರ ಬಳಿಯೂ ಮಾತಾಡುತ್ತಿರಲಿಲ್ಲ. ಬಿಸಿಲಿನ ಧಗೆಗೆ ಬೆವರು ಇಳಿಯುತ್ತಿದ್ದರೂ ಮಿಸುಕಾಡುತ್ತಿರಲಿಲ್ಲ. ಮಧ್ಯಾಹ್ನ 2 ಗಂಟೆಗೆ ಮಹಿಳೆಯೊಬ್ಬಳು ತನ್ನ ಮತಚೀಟಿ ಮತ್ತು ಎಪಿಕ್ ಕಾರ್ಡ್ ಹಿಡಿದು ಮತಗಟ್ಟೆಗೆ ಬಂದಳು.
ಈ ವ್ಯಕ್ತಿ ತಕ್ಷಣ ಆಕೆಯತ್ತ ನುಗ್ಗಿ, ಕೂದಲು ಎಳೆದು, ಮತಚೀಟಿಯನ್ನು ಕಸಿಯಲು ಮುಂದಾಗಿದ್ದಾನೆ. ಈ ವೇಳೆ ರಂಪಾಟ ಸೃಷ್ಟಿಯಾಗಿದೆ. ನಂತರ ಇಬ್ಬರು ಸಿಎಪಿಎಫ್ ಸಿಬ್ಬಂದಿ ಧಾವಿಸಿ, ಅವನನ್ನು ತಡೆದು ಮಹಿಳೆಯನ್ನು ರಕ್ಷಿಸಿದ್ದಾರೆ. ಆಕೆ ಈತನ ಪತ್ನಿಯಾಗಿದ್ದು, 2 ವರ್ಷದ ಹಿಂದೆ ಇವನನ್ನು ಬಿಟ್ಟು ಬೇರೊಬ್ಬನ ಜೊತೆ ಓಡಿಹೋಗಿದ್ದಳು. ನಂತರ ಆತನ ಕೈಗೆ ಸಿಕ್ಕಿರಲಿಲ್ಲ ಎಂದು ತಿಳಿದುಬಂದಿದೆ.
ಪತ್ನಿ ಹಿಡಿಯಲು ನೆರವಾದ ಎಸ್‌ಐಆರ್!:
ಬಂಗಾಳದಲ್ಲಿ ಮತಪಟ್ಟಿ ಪರಿಷ್ಕರಣೆಯ ಬಳಿಕ ಮತ ಚಲಾಯಿಸದಿದ್ದರೆ, ತಮ್ಮ ಹೆಸರು ಪಟ್ಟಿಯಿಂದ ಹೊರಗುಳಿಯಬಹುದು ಎಂಬ ಭೀತಿ ಜನರನ್ನು ಕಾಡುತ್ತಿದೆ. ಹೀಗಾಗಿ ತನ್ನ ಪತ್ನಿಯೂ ವೋಟ್ ಹಾಕಲು ಮತಗಟ್ಟೆಗೆ ಬಂದೇ ಬರುತ್ತಾಳೆ ಎಂದು ಅಂದಾಜಿಸಿದ್ದ ಪತಿ ಸಮಯ ನೋಡಿ ಆಕೆಯನ್ನು ಹಿಡಿದಿದ್ದಾನೆ. ಈ ವೇಳೆ, ಎಪಿಕ್ ಕಾರ್ಡ್‌ನಲ್ಲಿ ಆಕೆಯ ಪತಿ ಎಂದು ನಮೂದಾಗಿರುವ ತನ್ನ ಹೆಸರನ್ನು ತೆಗೆದುಹಾಕುವವರೆಗೂ ಆಕೆಗೆ ಮತ ಚಲಾಯಿಸಲು ಬಿಡಬಾರದು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾನೆ. ಆದರೆ ಅಧಿಕಾರಿಗಳು ನಿರಾಕರಿಸಿದ ಕಾರಣ, ಅವರೆಲ್ಲರಿಗೆ ಶಾಪ ಹಾಕುತ್ತಾ ಸ್ಥಳದಿಂದ ನಿರ್ಗಮಿಸಿದ್ದಾನೆ. ಪತ್ನಿಯೂ ಮತ ಚಲಾಯಿಸಿ ತೆರಳಿದ್ದಾಳೆ.